ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಪುಣೆ-ಬೆಂಗಳೂರು ಷಟ್ಪಥ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಕೇಂದ್ರ ಸಚಿವ ಜೋಶಿ ಮತ್ತು ತಂಡ
ಹುಬ್ಬಳ್ಳಿ, ಜೂನ್, 04: ಹುಬ್ಬಳ್ಳಿ-ಧಾರವಾಡ ನಡುವಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಷಟ್ಪಥ ರಸ್ತೆ ಕಾಮಗಾರಿ ಆರಂಭವಾಗಿದೆ. ತಾರಿಹಾಳ ಟೋಲ್‌ನಾಕಾ ಸಮೀಪದ ಮೆಟ್ರೊ ಫಿನಿಷ್ ಕಂಪನಿ ಬಳಿ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಇನ್ನು ಗುಡ್ಡ, ಕಲ್ಲು-ಬಂಡೆಗಳನ್ನು ತೆರವುಗಳೊಸುವ ಮೂಲಕ ಷಟ್ಪಥ ರಸ್ತೆಗೆ ಅಗತ್ಯವಿರುವ ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಹಾಗೆಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
ಹುಬ್ಬಳ್ಳಿ ಮತ್ತು ಧಾರವಾಡದ ನಡುವಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಕಳೆದ 13 ವರ್ಷಗಳಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಇಲ್ಲಿ 2009ರಿಂದ ಈವರೆಗೆ 1,800ಕ್ಕೂ ಹೆಚ್ಚು ಅಪಘಾತಗಳು ನಡೆದಿದ್ದು, 350 ಗಂಭೀರ ಸ್ವರೂಪದ ಅಪಘಾತಗಳು, 950ಕ್ಕೂ ಹೆಚ್ಚು ಸಾಧಾರಣ ಅಪಘಾತಗಳು ನಡೆದಿವೆ.

ಇನ್ನು ಇಲ್ಲಿ ನಡೆದ ಅಪಘಾತಗಳಿಂದ 1,900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 300ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಅಪ್ಪ-ಅಮ್ಮ, ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆಯ ಅಪಘಾತ ಪ್ರಮಾಣ ತಗ್ಗಿಸುವ ಸದುದ್ದೇಶದಿಂದ ಕೇಂದ್ರ ಸಚಿವರು ಮುತುವರ್ಜಿಯಿಂದ ಕಾಮಗಾರಿ ಚುರುಕುಗೊಳಿಸುವಂತೆ ಆಗ್ರಹಿಸಿದ್ದಾರೆ.
ಎರಡು ವರ್ಷದ ಹಿಂದೆಯೇ ಕೇಂದ್ರ ಸಾರಿಗೆ ಸಚಿವರು ಕಾಮಗಾರಿಗೆ ಚಾಲನೆ ನೀಡಿದ್ದರು. ತಡ ಆದರೂ ಇದೀಗ ಕಾಮಗಾರಿ ಆರಂಭವಾಗಿದ್ದು ಈ ಭಾಗದ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ. ಈ ವಿಳಂಬ ನೀತಿಯಿಂದಲೇ ಉತ್ತರ ಕರ್ನಾಟಕ ಹಿಂದುಳಿದಿದೆ. ಆದಷ್ಟು ಬೇಗ ಕಾಮಗಾರಿ ಮುಕ್ತಾಯ ಆಗಲಿ ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಸುಮಾರು 31 ಕಿಲೋ ಮೀಟರ್ ಉದ್ದದ ಹುಬ್ಬಳ್ಳಿ- ಧಾರವಾಡ ಬೈ ಪಾಸ್ ರಸ್ತೆ ಅಗಲೀಕರಣದ ಕಾಮಗಾರಿ ಪ್ರಾರಂಭಗೊಂಡಿದ್ದು, ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಈ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಒಂದು ಮೇಲ್ವೇತುವೆ, ಒಂದು ಚಿಕ್ಕ ಸೇತುವೆ, ವಾಹನಗಳ ಸಂಚಾರಕ್ಕಾಗಿ 13 ಅಂಡರ್ ಪಾಸ್‌ಗಳು, ಲಘು ವಾಹನಗಳ ಸಂಚಾರಕ್ಕೆ 7 ಅಂಡರ್ ಪಾಸ್‌ಗಳು ಹಾಗೂ ಒಂದು ರೇಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಜೋಶಿ ತಿಳಿಸಿದ್ದಾರೆ.
ಈ ಷಟ್ಟಥ ರಸ್ತೆಯ ಎರಡು ಬದಿಗೆ ಎರಡು ಲೇನ್ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೆ ಪ್ರತಿಯೊಂದು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವನ್ನು ಕಲ್ಪಿಸಲಾಗುವುದು ಎನ್ನುವಂತಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದವರ ವಿವರ
ಮತ್ತೊಂದೆಡೆ ಬ್ಬಳ್ಳಿ-ಧಾರವಾಡ ಮಹಾನಗರದ ವಿವಿಧೆಡೆ ಕಳೆದ ಐದು ವರ್ಷಗಳಲ್ಲಿ ನಡೆದ ವಾಹನ ಅಪಘಾತಗಳಲ್ಲಿ ಬರೋಬ್ಬರಿ 529 ಜನ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಪೈಕಿ 100ಕ್ಕೂ ಹೆಚ್ಚು ಮಂದಿ ಹೆಲ್ಮೆಟ್ ಧರಿಸದೆ, ಬೈಕ್ ಸವಾರಿ ಮಾಡಿದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಚಾರ ನಿಯಮಗಳನ್ನು ಪಾಲಿಸದೆ ವಾಹನಗಳನ್ನು ಚಲಾಯಿಸಿರುವುದರಿಂದ ನಡೆದಿರುವ ಅಪಘಾತ ಪ್ರಕರಣಗಳು ಇವಾಗಿವೆ. ಅತಿವೇಗದ ಚಾಲನೆ, ಬೇಜವಾಬ್ದಾರಿ ಚಾಲನೆ, ಮದ್ಯಪಾನ ಮಾಡಿ ಚಾಲನೆ, ಸೀಟ್‌ಬೆಲ್ಟ್ ಧರಿಸದೆ ಚಾಲನೆ ಹಾಗೂ ಹೆಲ್ಮೆಟ್ ಧರಿಸದೆ ಬೈಕ್‌ಗಳನ್ನು ಚಲಾಯಿಸಿದ ಪರಿಣಾಮ ಅಪಘಾತಗಳಾಗಿ ಗಂಭೀರ ಗಾಯಗೊಂಡು ಹಲವರು ಮೃತಪಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಪ್ರತಿದಿನ ದಂಡ ವಸೂಲಿ ಮಾಡುತ್ತಿದ್ದರೂ, ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.












Click it and Unblock the Notifications