ಚರ್ಮಗಂಟು ರೋಗದಿಂದ ತತ್ತರಿಸಿದ ಧಾರವಾಡ ರೈತರು: ಪರಿಹಾರ ನೀಡದ ಸರ್ಕಾರ ವಿರುದ್ಧ ಆಕ್ರೋಶ
ಧಾರವಾಡ ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ 958 ರಾಸುಗಳು ಸಾವನ್ನಪ್ಪಿದ್ದವು. ಇದರಲ್ಲಿ ರಾಜ್ಯ ಸರ್ಕಾರ ಇಲ್ಲಿಯವರೆಗೆ ಕೇವಲ 452 ರಾಸುಗಳಿಗೆ ಪರಿಹಾರ ನೀಡಿದೆ. ಇನ್ನುಳಿದ 516 ಜಾನುವಾರುಗಳಿಗೆ ಪರಿಹಾರ ನೀಡದ ವಿಳಂಬ ನೀತಿ ಅನುಸರಿಸುತ್ತಿದೆ.
ಧಾರವಾಡ, ಮಾರ್ಚ್2: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತಪರ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ರೈತನ ಕಣ್ಣೀರು ಒರೆಸುವ ಕೆಲಸಕ್ಕೆ ಮಾತ್ರ ಸರ್ಕಾರ ಮುಂದಾಗಿಲ್ಲ. ಅನ್ನದಾತ ರೈತನ ಕಷ್ಟ ಹೇಳತೀರದಾಗಿದ್ದು, ಸರ್ಕಾರ ಹೇಳುವುದೊಂದು ಮಾಡುವುದು ಮತ್ತೊಂದು ಎನ್ನುವಂತಾಗಿದೆ.
ಹೈನುಗಾರಿಕೆಯನ್ನೇ ನಂಬಿ ಬದುಕುವ ರೈತ ಸಮುದಾಯಕ್ಕೆ ಬಹುದೊಡ್ಡ ಸಂಕಷ್ಟವನ್ನು ತಂದೊಡ್ಡಿದ್ದ ಸಮಸ್ಯೆಯೇ ಚರ್ಮಗಂಟು ರೋಗ. ಚರ್ಮಗಂಟು ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಪರಿಹಾರ ನೀಡಲು ಘೋಷಣೆ ಮಾಡಿತ್ತು. ಆದರೆ ಈಗ ಯಾವುದೇ ಪರಿಹಾರ ಸಿಗದೇ ರೈತರು ಕಂಗಾಲಾಗಿದ್ದಾರೆ. ಇದುವರೆಗೂ 516 ರಾಸುಗಳಿಗೆ ಹಣ ಬಿಡುಗಡೆಯಾಗಿಲ್ಲ.

ಧಾರವಾಡ ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ 958 ರಾಸುಗಳು ಸಾವನ್ನಪ್ಪಿದ್ದವು. ಇದರಲ್ಲಿ ರಾಜ್ಯ ಸರ್ಕಾರ ಇಲ್ಲಿಯವರೆಗೆ ಕೇವಲ 452 ರಾಸುಗಳಿಗೆ ಪರಿಹಾರ ನೀಡಿದೆ. ಇನ್ನುಳಿದ 516 ಜಾನುವಾರುಗಳಿಗೆ ಪರಿಹಾರ ನೀಡದ ವಿಳಂಬ ನೀತಿ ಅನುಸರಿಸುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ರೈತರ ಜೀವನಾಧಾರವಾಗಿದ್ದ ಜಾನುವಾರಗಳು ಚರ್ಮಗಂಟು ರೋಗದಿಂದ ಮೃತಪಟ್ಟಿದ್ದರಿಂದ ರೈತರು ಆರ್ಥಿಕವಾಗಿ ತೀರಾ ದುರ್ಬಲರಾಗಿದ್ದಾರೆ. ಚರ್ಮಗಂಟು ರೋಗದಿಂದ ಮೃತಪಟ್ಟ ಕರುವಿಗೆ 5 ಸಾವಿರ, ಎಮ್ಮೆ, ಹಸುವಿಗೆ 20 ಸಾವಿರ ಮತ್ತು ಎತ್ತು ಮೃತಪಟ್ಟರೆ 30 ಸಾವಿರ ಪರಿಹಾರ ಧನ ನೀಡಲು ಸರ್ಕಾರ ಘೋಷಿಸಿತ್ತು. ಪರಿಹಾರ ದೊರೆಯುತ್ತದೆ ಎಂದು ರೈತರು ಕೊಂಚ ನಿರಾಳರಾಗಿದ್ದರು.

ಕಳೆದ ಬಾರಿ ಸರ್ಕಾರ ಬಿಡುಗಡೆ ಮಾಡಿದ 1.55 ಕೋಟಿ ರೂಪಾಯಿಯಲ್ಲಿ 452 ರಾಸುಗಳಿಗೆ ಪರಿಹಾರ ವಿತರಿಸಲಾಗಿದೆ. ಇನ್ನೂ 516 ರಾಸುಗಳಿಗೆ 1.2 ಕೋಟಿಗೂ ರೂಪಾಯಿಗೂ ಹೆಚ್ಚು ಪರಿಹಾರ ಧನ ನೀಡಬೇಕಿದೆ. ಉಳಿದ ರಾಸುಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದು ಪಶು ಸಂಗೋಪನಾ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಇಲ್ಲಿಯವರೆಗೂ ಪರಿಹಾರದ ಬಿಡುಗಡೆಯಾಗಿಲ್ಲ.
ಒಟ್ಟಿನಲ್ಲಿ ಸರ್ಕಾರ ಧಾರವಾಡ ಜಿಲ್ಲೆಯಲ್ಲಿ ಇನ್ನೂ ಶೇ.50ರಷ್ಟು ಮೃತಪಟ್ಟಿರುವ ರಾಸುಗಳಿಗೆ ಪರಿಹಾರದ ಹಣ ನೀಡಬೇಕಿದೆ. ಈಗಾಗಲೇ ಜಿಲ್ಲಾ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಇನ್ನುಳಿದ ರಾಸುಗಳಿಗೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕಳೆದ ವಾರ ನಡೆದ ಬಜೆಟ್‌ನಲ್ಲಿ ಉಳಿದ ಪರಿಹಾರದ ಹಣ ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಸರ್ಕಾರದ ವಿಳಂಬ ನೀತಿಯನ್ನ ಅನುಸರಿಸಿದೆ. ಅಲ್ಲದೇ ಸಂಕಷ್ಟದಲ್ಲಿರುವ ರಾಸು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದನ್ನು ಬಿಟ್ಟು ಸರ್ಕಾರ ಚೆಲ್ಲಾಟ ಆಡುತ್ತಿದೆ ಎನ್ನುವುದು ರೈತರ ಅಸಮಧಾನಕ್ಕೆ ಕಾರಣವಾಗಿದೆ.












Click it and Unblock the Notifications