ಅಧಿಕಾರಿಗಳು ತಪ್ಪು ಮಾಡಿದ್ರೆ ಅಮಾನತು ಜೊತೆಗೆ ಕ್ರಮಿನಲ್ ಕೇಸ್-ಸಚಿವರ ಖಡಕ್ ವಾರ್ನಿಂಗ್
ಧಾರವಾಡ, ಸೆಪ್ಟೆಂಬರ್ 14: ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದರೆ ಪ್ರಶಸ್ತಿ ಕೊಡಲಾಗುವುದು. ತಪ್ಪು ಮಾಡಿದರೆ ಅಮಾನತು ಮಾತ್ರವಲ್ಲ ಕ್ರಿಮಿನಲ್ ಕೇಸ್ ಸಹ ಹಾಕುತ್ತೇವೆ ಎಂದು ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಸಚಿವ ಕೃಷ್ಣಭೈರೇಗೌಡ ಪ್ರಗತಿ ಪರಿಶಿಲನೆ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರದ ಆಡಳಿತ ಸುಧಾರಣೆ ಕಂದಾಯ ಇಲಾಖೆ ಮೂಲಕವೇ ಆಗಬೇಕು ಹೀಗಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ. ಒಳ್ಳೆ ಮಾತಿಗೆ ಬಗ್ಗದೇ ತಪ್ಪು ಮಾಡುವವರೂ ಇದ್ದಾರೆ ಅವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ವಂಚನೆ ಮಾಡಿದ ಅಧಿಕಾರಿಗಳು ಅಮಾನತು ಮಾಡುತ್ತೇವೆ. ಜೊತೆಗೆ ಕ್ರಿಮಿನಲ್ ಕೇಸ್ ಸಹ ಹಾಕುತ್ತೇವೆ ಕೆಲವರ ಉದ್ದೇಶವೇ ಭ್ರಷ್ಟಾಚಾರ ಆಗಿರುತ್ತದೆ. ಅದು ಕ್ರಿಮಿನಲ್ ಪ್ರಕರಣ ಸಹ ಆಗುತ್ತದೆ. ಈಗಾಗಲೇ ಇಬ್ಬರು ಎಸಿಗಳ ಮೇಲೆ ಕ್ರಿಮಿನಲ್ ಕೇಸ್ ಆಗಿದೆ. ಇಲ್ಲಿವರೆಗೆ ಬಡಪಾಯಿ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಆಗುತ್ತಿತ್ತು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತಾ ಹೇಳುತ್ತಿದ್ದರು. ಆದರೆ ಈಗ ತಪ್ಪು ಮಾಡಿದ ಇಬ್ಬರ ಎಸಿಗಳ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಹಿಂದೆ ಹೇಗೆ ಕೆಲಸ ಮಾಡಿದ್ದೀರಿ ಅಂತಾ ನಾವು ಕೇಳುವುದಿಲ್ಲ. ಆದರೆ ಈಗ ಜನ ಪರವಾಗಿ ಕೆಲಸ ಮಾಡಬೇಕು ಸಿಎಂ ಕೂಡಾ ಕೇಳಿದ್ದಾರೆ ತಪ್ಪಿತಸ್ಥ ಅಧಿಕಾರಿಗಳ ಮೆಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಹೇಳಿದ್ದಾರೆ. ಸಾರ್ವಜನಿಕರಿಗೆ ನಷ್ಟ ಕೊಡುತ್ತಾರೆ ಅಂತವರ ಮೇಲೆ ನಾನು ಕ್ರಮ ಕೈಗೊಳಲು ಹಿಂದೆ ಸರಿಯಲ್ಲ. ಈಗಾಗಲೇ ಇಬ್ಬರ ಎಸಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಸಿಸ್ಟಮ್‌ನಲ್ಲಿ ಕೆಲಸ ಮಾಡಬೇಕು. ನಾವು ಹೇಳಿದ ಹಾಗೆ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಕಂದಾಯ ಸಚಿವರ ಧಾರವಾಡ ಜಿಲ್ಲೆಯ ಪ್ರವಾಸ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸಿದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವುದು ಸರ್ಕಾರದ ಮಹಾ ಸಂಕಲ್ಪದ ಹಿನ್ನೆಲೆಯಲ್ಲಿ ಸಚಿವರು ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜನರು ಸಣ್ಣ ಪುಟ್ಟ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವಂತೆ ಆಗಬಾರದು. ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸರ್ಕಾರವೇ ಮನೆ ಬಾಗಿಲಿಗೆ ಬರಲಿದೆ. ಕಂದಾಯ ಇಲಾಖೆಯ ಪಹಣಿ ಸಮಸ್ಯೆ, ಮಾಶಾಸನ ಸಮಸ್ಯೆ, ಜಾತಿ, ಆದಾಯ ಪ್ರಮಾಣ ಪತ್ರಗಳು ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ನೀಡುವಲ್ಲಿ ವಿಳಂಬದಂತಹ ಹತ್ತು ಹಲವು ಸಮಸ್ಯೆಗಳನ್ನು ಆಲಿಸಲಾಗುತ್ತದೆ. ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುತ್ತದೆ.
ತಹಶೀಲ್ದಾರ್ ಕಚೇರಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿ ಅವರಿಗೆ ಕಡತಗಳ ವಿಲೇವಾರಿಯನ್ನು ಆನ್‌ಲೈನ್ ಮೂಲಕ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಮಿತಿಗಳು ನೀಡಲಾಗುತ್ತಿದ್ದು, ನನ್ನ ಕಚೇರಿಯಲ್ಲಿ ಬಹುತೇಕ ಕಡತಗಳ ವಿಲೇವಾರಿಯನ್ನು ಆನ್‌ಲೈನ್ ಮೂಲಕವೇ ಕೈಗೊಳ್ಳುತ್ತಿರುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.












Click it and Unblock the Notifications