ದೇಶಕ್ಕೆ ಮತ್ತೆ ಗಂಡಾಂತರ ಕಾದಿದೆ; ಧಾರವಾಡದಲ್ಲಿ ಕೋಡಿ ಶ್ರೀ ಭಯಾನಕ ಭವಿಷ್ಯ
ಧಾರವಾಡ, ಅಕ್ಟೋಬರ್, 04: ''ದೇಶದಲ್ಲಿ ಮತ್ತೆ ಭಾರಿ ಮಳೆಯಾಗುವ ಲಕ್ಷಣ ಇದ್ದು, ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿ ಆಗಲಿವೆ. ಕಾರ್ತಿಕ ಮಾಸದಲ್ಲಿ ತೊಂದರೆ ಆಗುವ ಲಕ್ಷಣ ತೋರುತ್ತಿದೆ. ಮಳೆ, ರೋಗದಿಂದ ದೇಶಕ್ಕೆ ಗಂಡಾಂತರವಿದ್ದು, ಮತ್ತೆ ತೊಂದರೆ ಆಗುತ್ತದೆ'' ಎಂದು ಧಾರವಾಡದಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.
ಪ್ರಾರಂಭದಲ್ಲೇ ನಾನು ಹೇಳಿದ್ದೆ. ಮಳೆ, ಗಾಳಿ, ಗುಡುಗು ಇದೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ ಅವಾಂತರ ಸೃಷ್ಟಿಸಲಿದೆ ಎಂದು ಹೇಳಿದ್ದೆ. ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು ನೋವುಗಳು ಆಗುತ್ತವೆ ಎಂದು ಮೊದಲೇ ಹೇಳಿದ್ದೆ. ಅಲ್ಲದೇ ಜನ ಅಶಾಂತಿಯಿಂದ ಇರುತ್ತಾರೆ ಎಂದು ತಿಳಿಸಿದ್ದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದರು.
ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಎಂದು ಎಚ್ಚರಿಕೆ ಕೂಡ ನೀಡಿದ್ದೆ ಎಂದರು. ಈಗಲೂ ಅಂತಹ ಪರಿಸ್ಥಿತಿ ಇದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಲಿದೆ ಎಂದು ಶ್ರೀಗಳು ಹೇಳಿದರು.

ಮತ್ತೆ ಭಯಾನಕ ಭವಿಷ್ಯ ನುಡಿದ ಕೋಡಿ ಶ್ರೀ
ಈ ಸಂವತ್ಸರದ ಕಡೆಯವರೆಗೂ ರಾಜ್ಯದಲ್ಲಿ ತೊಂದರೆ ಇರಲಿವೆ. ಅಚ್ಚರಿಯ ಅವಘಡ ಕಾದಿದೆ ಎಂದು ಈ ಹಿಂದೆ ಹೇಳಿದ್ದೆ. ಅದು ಕೂಡ ಆಗುತ್ತದೆ ಕಾದು ನೋಡಿ. ಅಲ್ಲದೇ ಬೆಂಕಿಯಿಂದ ಹೆಚ್ಚು ಸಮಸ್ಯೆ ಉಂಟಾಗಲಿದೆ. ಅಪಮೃತ್ಯು ಹೆಚ್ಚಾಗಲಿದೆ. ರಾಜ್ಯದಲ್ಲಿ ಅಶಾಂತಿಯಾಗಿ ಕಲಹಗಳು ಹೆಚ್ಚಾಗುತ್ತವೆ. ಇದರಿಂದ ರಾಜ್ಯಾದ್ಯಂತ ಅಶಾಂತಿ ಹೆಚ್ಚಾಗಲಿವೆ. ಒಂದೆಡೆ ಪ್ರಕೃತಿ ವಿಕೋಪ, ಮತ್ತೊಂದೆತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ. ರಾಜಕೀಯ ಭವಿಷ್ಯ ಹಿನ್ನೆಲೆ ಈಗ ಚೆನ್ನಾಗಿ ನಡೆಯುತ್ತಿದೆ. ಚುನಾವಣೆ ಕಾಲದಲ್ಲಿ ಹೇಳುತ್ತೇನೆ. ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಈ ಬಗ್ಗೆ ಹೇಳಿದ್ದೆ. ಕೊರೊನಾ ಹೋಗುತ್ತದೆ. ಹೋಗುವಾಗ ಜಗತ್ತಿಗೆ ವಿಪರೀತ ತೊಂದರೆ ಕೊಟ್ಟು ಹೋಗುತ್ತದೆ. ದುಃಖ ಕೊಟ್ಟು ಹೋಗುತ್ತದೆ, ಕುಡಿಯಲು ನೀರು ಇಲ್ಲದಂತೆ ಮಾಡುತ್ತದೆ. ಅಂತಹ ಪ್ರಸಂಗ ಈಗ ನಿರ್ಮಾಣ ಆಗಿದೆ ಎಂದರು.

ಜನವರಿಯವರೆಗೂ ಕೊರೊನಾ ತಾಂಡವ
ಭವಿಷ್ಯ ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿಲ್ಲ. ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ ಮಂದಿರ ಎನ್ನುತ್ತಾರೆ. ಆದರೆ ಈ ಕೊರೊನಾ ಮೊದಲು ಬಂದಿದ್ದೇ ದೇವರ ಮೇಲೆ. ಮೊದಲು ಮಠ, ಮಾನ್ಯಗಳ ಮೇಲೆ ಬಂತು ಆಮೇಲೆ ಮನುಷ್ಯರಿಗೆ ಬಂತು. ಜನವರಿಯವರೆಗೂ ಕೊರೊನಾ ಹೆಚ್ಚು ಹರಡುವ ಕಾಲವಿದೆ. ಇದು ಮತ್ತೊಂದು ರೂಪ ತಾಳುವ ಲಕ್ಷಣವೂ ಇದೆ. ಬಹಳ ಕಷ್ಟ ಕೊಟ್ಟು ಹೋಗುತ್ತದೆ. ರಾಜಕೀಯ ಬದಲಾವಣೆ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ, ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಅದಕ್ಕೆ ಏಕೆ ನಾನು ಅಪಶಕುನ ನುಡಿಯಬೇಕು? ಎಂದರು. ಅದನ್ನು ಯುಗಾದಿ ಫಲದ ಮೇಲೆ ಹೇಳುತ್ತೇನೆ ಎಂದು ಹೇಳಿದರು.

ಮಳೆಯಿಂದ ಸಮಸ್ಯೆಗಳು ಸಂಭವಿಸುತ್ತವೆ
ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ. ಇದು ಶುಭ ಆಗುವುದಿಲ್ಲ, ಬದಲಾಗಿ ಅಶುಭ ಆಗುತ್ತದೆ. ಮನುಷ್ಯನಿಗೆ ಪ್ರಕೃತಿ, ಮಳೆಯಿಂದ ಸಮಸ್ಯೆಗಳು ಆಗುತ್ತವೆ. ಗುಡ್ಡಗಳು ಕುಸಿತ, ಭೂಕಂಪ ಹೆಚ್ಚಾಗುವ ಲಕ್ಷಣ ಇದೆ. ಪ್ರಾಣಿಗಳು, ವಿಷಜಂತುಗಳಿಂದ ಮನುಷ್ಯನಿಗೆ ನೋವಾಗುತ್ತದೆ ಎಂದರು.

ಹೃದಯಾಘಾತದಿಂದ ಹೆಚ್ಚು ಸಾವು
ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು ಎಂದು ಶ್ರೀಗಳು ಎಚ್ಚರಿಕೆ ನೀಡಿದರು. ಅದು ಸಂರಕ್ಷಣೆ ಆಗುತ್ತದೆ. ಆಶ್ವಿಜ ಕೊನೆಯಿಂದ ಯುಗಾದಿ ಕೊನೆಯವರೆಗೂ ಅಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ. ಕೊರೊನಾ ಈ ವರ್ಷದಲ್ಲಿ ಬಿಡುಗಡೆ ಆಗುತ್ತದೆ. ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.












Click it and Unblock the Notifications