ಮಾಜಿ ಶಾಸಕ, ಜೆಡಿಎಸ್ ನಾಯಕ ಸೋಮವಾರ ಕಾಂಗ್ರೆಸ್ ಸೇರ್ಪಡೆ!
ಧಾರವಾಡ, ಡಿಸೆಂಬರ್ 12; ಮತ್ತೊಬ್ಬ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಹಲವು ದಿನಗಳಿಂದ ಮಾಜಿ ಶಾಸಕರೊಬ್ಬರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸೋಮವಾರ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧವಾಗಿತ್ತು.
ನವಲಗುಂದ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಎನ್. ಎಚ್. ಕೋನರಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಸೋಮವಾರ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಬಳಿಕ ಎನ್. ಎಚ್. ಕೋನರಡ್ಡಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಭೇಟಿಯಾಗಿ ಪಕ್ಷ ಸೇರುವ ಕುರಿತು ಮಾತುಕತೆ ನಡೆಸಿದ್ದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್. ಎಚ್. ಕೋನರಡ್ಡಿ ನವಲಗುಂದ ಕ್ಷೇತ್ರದಲ್ಲಿ ಓಡಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು. ಸೋಮವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯಲಿದೆ. ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಮುಂತಾದ ನಾಯಕರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ತೆರಳುತ್ತಿದ್ದಾರೆ. ಆದ್ದರಿಂದ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿಯೇ ಎನ್. ಎಚ್. ಕೋನರಡ್ಡಿ ಕಾಂಗ್ರೆಸ್ ಸೇರುತ್ತಿದ್ದಾರೆ.
"ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮೇಲೆ ನನಗೆ ಅಪಾರ ಗೌರವವಿದೆ. ಕ್ಷೇತ್ರದ ಜನರ ಒತ್ತಾಯದಿಂದ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದೇನೆ" ಎಂದು ಎನ್. ಎಚ್. ಕೋನರಡ್ಡಿ ಹೇಳಿದ್ದಾರೆ.
2013ರ ಚುನಾವಣೆಯಲ್ಲಿ ಕೋನರಡ್ಡಿ ನವಲಗುಂದ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ 45,197 ಮತಗಳನ್ನು ಪಡೆದು ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ವಿರುದ್ಧ ಸೋಲು ಕಂಡಿದ್ದರು.
ರಾಜೀನಾಮೆ ನೀಡಿದ್ದರು; ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಎನ್. ಎಚ್. ಕೋನರಡ್ಡಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗಿತ್ತು. ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.
ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋಲು ಕಂಡಿತ್ತು. 2013ರ ಪಾಲಿಕೆ ಚುನಾವಣೆಯಲ್ಲಿ ಪಕ್ಷ 9 ಸ್ಥಾನದಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಕೇವಲ 1 ಸ್ಥಾನದಲ್ಲಿ ಜಯಗಳಿಸಿತ್ತು.
ಚುನಾವಣೆ ಫಲಿತಾಂಶದ ಬಳಿಕ ನೈತಿಕ ಹೊಣೆ ಹೊತ್ತು ಎನ್. ಎಚ್. ಕೋನರಡ್ಡಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದರು.
ಸೆಪ್ಟೆಂಬರ್‌ನಲ್ಲಿ ಮಾತನಾಡಿದ್ದ ಎನ್. ಎಚ್. ಕೋನರಡ್ಡಿ, "ರಾಜಕಾರಣದಲ್ಲಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ" ಎಂದು ಹೇಳಿದ್ದರು.
"ನಾನು ಕಾಂಗ್ರೆಸ್ ಸೇರ್ಪಡೆಯಾಗುವ ಸುದ್ದಿ ಹರಿದಾಡುತ್ತಿರುವುದು ಅಚ್ಚರಿ ಮೂಡಿಸಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಸಮಯ ಬಾಕಿ ಇದೆ. ಅಭಿಮಾನಿಗಳು, ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು.
ಸ್ಥಳೀಯ ನಾಯಕರಲ್ಲಿ ಆತಂಕ; ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿದೆ. ಮಾಜಿ ಶಾಸಕರು ಪಕ್ಷಕ್ಕೆ ಬಂದರೆ 2023ರ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ ನಾಯಕರಿಗೆ ಎದುರಾಗಿದೆ.
ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸೋಲು ಕಂಡಿದ್ದ ವಿನೋದ ಅಸೂಟಿ ಮುಂದಿನ ಚುನಾವಣೆಯಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಕೆಲವು ನಾಯಕರು ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದು, ಎನ್. ಎಚ್. ಕೋನರಡ್ಡಿ ಆಗಮನ ಹೊಸ ಲೆಕ್ಕಾಚಾರ ಹುಟ್ಟುಹಾಕಿದೆ.












Click it and Unblock the Notifications