ಧಾರವಾಡ: ಮದುವೆ ಫೋಟೋ ಕೊಡದ ಫೋಟೋಗ್ರಾಫರ್‌ಗೆ 30 ಸಾವಿರ ರೂ ದಂಡ
ಧಾರವಾಡ, ಜುಲೈ 19: ಮದುವೆಯಾಗಿ ಬಹಳ ಸಮಯ ಕಳೆದರೂ ಫೋಟೋಗ್ರಾಫರ್ ವಿರುದ್ಧ ಗ್ರಾಹಕ ದೂರು ನೀಡಿ ದಂಡ ವಿಧಿಸುವಂತೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಆಕಾಶವಾಣಿ ಹತ್ತಿರದ ಶೇಖ್ ಕಂಪೌಂಡ್ ನಿವಾಸಿ ಶಹಬಾಜ್ ಹೆಬಸೂರ ಎಂಬುವವರು ತಮ್ಮ ಮದುವೆ ಫೋಟೋ ತೆಗೆಯಲು ಸತ್ತೂರ ಕೆ.ಎಚ್.ಬಿ. ಲೇಔಟ್‍ನಲ್ಲಿರುವ ರವಿ ದೊಡ್ಡಮನಿಯವರಿಗೆ 25 ಸಾವಿರಕ್ಕೆ ಗುತ್ತಿಗೆ ಕೊಟ್ಟಿದ್ದರು.

ಆ ಪೈಕಿ ದೂರುದಾರ ಎದುರುದಾರರಿಗೆ 15 ಸಾವಿರ ಅಡವಾನ್ಸ್ ಕೊಟ್ಟಿದ್ದರು. ಡಿಸೆಂಬರ್-2022 ರಲ್ಲಿ ನಡೆದ ಮದುವೆಯ ಫೋಟೋಗಳನ್ನು ಪೋಟೋಗ್ರಾಫರ್ ತಂಡ ತೆಗೆದಿದ್ದರು. ಆದರೆ ಅವುಗಳ ಫೋಟೋಗಳನ್ನು ದೂರುದಾರರಿಗೆ ಕೊಟ್ಟಿರಲಿಲ್ಲ.
ಈ ಬಗ್ಗೆ ಹಲವು ಬಾರಿ ವಿನಂತಿಸಿದರೂ ಫೋಟೋಗ್ರಾಫರ್ ಫೋಟೋ ಕೊಟ್ಟಿಲ್ಲವಾದ್ದರಿಂದ ಅವನು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾನೆ ಅಂತಾ ಹೇಳಿ ದೂರುದಾರ ಫೋಟೊಗ್ರಾಫರ್ ರವಿಯ ಮೇಲೆ ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಡಿಸೆಂಬರ್ 2022ರಲ್ಲಿ ದೂರುದಾರನಿಂದ 15 ಸಾವಿರ ಪಡೆದು, ಮದುವೆಯ ಸವಿನೆನಪಿಗಾಗಿ ಮದುವೆ ಸಮಾರಂಭದಲ್ಲಿ ತೆಗೆದ ಫೋಟೋಗಳನ್ನು ದೂರುದಾರರಿಗೆ ನೀಡದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.
ದೂರುದಾರ ಸಂದಾಯ ಮಾಡಿದ ಅಡವಾನ್ಸ್ 15 ಸಾವಿರ ಜೊತೆಗೆ ದೂರುದಾರ ಅನುಭವಿಸಿದ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 10,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ 5,000 ಹಣವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರ ಫೋಟೋಗ್ರಾಫರ್‌ಗೆ ಆದೇಶಿಸಿದೆ.












Click it and Unblock the Notifications