ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ಬರಲು ಶ್ರೀಗಳ ಒಪ್ಪಿಗೆ
ಹುಬ್ಬಳ್ಳಿ, ಏ. 16 : ಮಠದ ಉತ್ತರಾಧಿಕಾರಿ ವಿವಾದದಿಂದ ನೊಂದು ಕುಮಾರೇಶ್ವರ ಮಠಕ್ಕೆ ತೆರಳಿದ್ದ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ನೂರಾರು ಭಕ್ತರು ಸ್ವಾಮೀಜಿಗಳನ್ನು ಸ್ವಾಗತಿಸಲು ಕಾದು ಕುಳಿತಿದ್ದಾರೆ.
ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ನೇತೃತ್ವದ ಭಕ್ತರ ನಿಯೋಗ ಸ್ವಾಮೀಜಿಗಳೊಂದಿಗೆ ಗುರುವಾರ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಮೂರುಸಾವಿರ ಮಠಕ್ಕೆ ವಾಪಸ್ ಬರಲು ಶ್ರೀಗಳು ಸಮ್ಮತಿ ಸೂಚಿಸಿದರು. [ಮೂರು ಸಾವಿರ ಮಠದಲ್ಲಿ ಏನಿದು ವಿವಾದ?]

ಹಾನಗಲ್‌ನಲ್ಲಿರುವ ಕುಮಾರೇಶ್ವರ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಕುಮಾರೇಶ್ವರ ಮಠದ ಭಕ್ತರ ಒಪ್ಪಿಗೆ ಮೇಲೆಯೇ ಮೂರು ಸಾವಿರ ಮಠಕ್ಕೆ ವಾಪಸ್ ತೆರಳು ನಿರ್ಧರಿಸಿದ್ದೇನೆ ಎಂದು ಹೇಳಿದರು. [ಮಠಕ್ಕೆ ಶ್ರೀಗಳು ವಾಪಸ್ ಬರ್ತಾರಾ?]
2014ರ ಅಕ್ಟೋಬರ್‌ನಲ್ಲಿ ರಾಜ ಯೋಗೀಂದ್ರ ಸ್ವಾಮೀಜಿಯವರು ಪೀಠ ತ್ಯಾಗ ಮಾಡಲು ಮುಂದಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ಭಾರೀ ವಿವಾದ ಉಂಟಾಗಿತ್ತು.
ಇದರಿಂದ ನೊಂದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ನ.22ರಂದು ಮೂರು ಸಾವಿರ ಮಠದಿಂದ ಹಾನಗಲ್‌ನಲ್ಲಿರುವ ಕುಮಾರೇಶ್ವರ ಮಠಕ್ಕೆ ತೆರಳಿದ್ದರು. ಸ್ವಾಮೀಜಿಗಳನ್ನು ಮಠಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ನಡೆಯುತ್ತಲೇ ಇತ್ತು.
ಏ.9ರಂದು ಮಠದ ಭಕ್ತರು ಸಭೆ ಸೇರಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಮಠಕ್ಕೆ ವಾಪಸ್ ಕರೆತರಲು ನಿರ್ಧರಿಸಿದ್ದರು. ಅದರಂತೆ ಇಂದು ಭಕ್ತರ ನೀಯೋಗ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಶ್ರೀಗಳು ಮಠಕ್ಕೆ ವಾಪಸ್ ಬರುತ್ತಿದ್ದಾರೆ.












Click it and Unblock the Notifications