ಧಾರವಾಡ: 30 ವರ್ಷ ಸೇವೆ ಪೂರೈಸಿ ಸ್ವಾಗ್ರಾಮಕ್ಕೆ ಆಗಮನಿಸಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ
ಧಾರವಾಡ, ಆಗಸ್ಟ್, 01: ದೇಶದ ಗಡಿಭಾಗದಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಸೈನಿಕನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ನರೇಂದ್ರ ಗ್ರಾಮದ ಮಲ್ಲಿಕಾರ್ಜುನಗೌಡ ಪಾಟೀಲ್ ಸತತ 30 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಸೇನೆಯ ಮೇಜರ್ ಸುಬೇದಾರ್ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಗ್ರಾಮಕ್ಕೆ ಆಗಮಿಸಿದ ಹೆಮ್ಮೆಯ ಯೋಧನನ್ನು ನರೇಂದ್ರ ಗ್ರಾಮಸ್ಥರು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಧಾರವಾಡ ರೈಲು ನಿಲ್ದಾಣದ ಮೂಲಕ ತಾಯ್ನಾಡಿಗೆ ಬಂದ ನಿವೃತ್ತ ಸೈನಿಕ ಮಲ್ಲಿಕಾರ್ಜುನಗೌಡ ಅವರನ್ನು ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಕೂಗುತ್ತಾ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಈ ವೇಳೆ ನರೇಂದ್ರ ಗ್ರಾಮದ ಮಾಜಿ ಸೈನಿಕರು ಕೂಡ ಅವರನ್ನು ಬರಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ನಿವೃತ್ತ ಯೋಧ ಮಲ್ಲಿಕಾರ್ಜುನಗೌಡ ಪಾಟೀಲ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕು, ಭಾರತ ಮಾತೆಗೆ ಸೇವೆ ಸಲ್ಲಿಸಿ ದೇಶ ಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತ ಮಾತೆಗೆ ಸೇವೆ ಸಲ್ಲಿಸಿ ಧಾರವಾಡಕ್ಕೆ ಮರಳಿದ ಸೈನಿಕ ಮಲ್ಲಿಕಾರ್ಜುನಗೌಡ ಪಾಟೀಲ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿ ಅವರನ್ನು ಗೌರವಿಸುವ ಕೆಲಸ ಮಾಡಲು ಹೆಮ್ಮೆ ಎನಿಸುತ್ತದೆ. ಯುವ ಜನರಿಗೆ ಅವರ ಸ್ಪೂರ್ತಿ ತುಂಬುವ ಚಿಲುಮೆಯಾಗಿದ್ದಾರೆ. ಅಲ್ಲದೆ ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ಇನ್ನಷ್ಟು ಆಗಲಿದೆ ಎಂದು ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ತಿಳಿಸಿದರು.
ಇನ್ನು ಗ್ರಾಮಕ್ಕೆ ಬಂದ ಯೋಧ ಮಲ್ಲಿಕಾರ್ಜುನಗೌಡ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದ ಮೇಲೆ ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಊರಿನ ಹೆಮ್ಮೆಯ ಪುತ್ರನನ್ನು ಸನ್ಮಾನಿಸಿ ಗೌರವಿಸಲಾಯಿತು.












Click it and Unblock the Notifications