Dharwad-Belagavi; ಹೊಸ ರೈಲು ಮಾರ್ಗಕ್ಕೆ ಮೋದಿಯಿಂದ ಶಂಕು ಸ್ಥಾಪನೆ
ಧಾರವಾಡ, ಡಿಸೆಂಬರ್ 26; ಬಹುವರ್ಷಗಳ ಬೇಡಿಕೆಯಾದ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ನೇರ ರೈಲು ಮಾರ್ಗ ಯೋಜನೆಗೆ ಇನ್ನೂ ಶಂಕುಸ್ಥಾಪನೆಯಾಗಿಲ್ಲ. ಈ ಯೋಜನೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಬೆಳಗಾವಿ ಸಂಸದ ದಿ. ಸುರೇಶ್ ಅಂಗಡಿ ಕನಸಾಗಿದೆ.
2023ರಲ್ಲಿ ಧಾರವಾಡ-ಕಿತ್ತೂರು- ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ ಶಂಕು ಸ್ಥಾಪನೆ ನಡೆಯಲಿದೆ. ಎರಡು ವರ್ಷಗಳ ಹಿಂದೆ ಘೋಷಣೆಯಾದ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬುದು ಜನರ ಆರೋಪವಾಗಿದೆ.
2021-22ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ 50 ಕೋಟಿ ಮೀಸಲಾಗಿತ್ತು. ಭೂ ಸ್ವಾಧೀನ ಪ್ರಕ್ರಿಯೆಯ ಸಮಸ್ಯೆಯ ಕಾರಣ ಯೋಜನೆ ಅನುಷ್ಠಾನ ತಡವಾಗುತ್ತಿದೆ. ಹೊಸ ರೈಲು ಮಾರ್ಗ ಯೋಜನೆಗೆ ಕರ್ನಾಟಕ ಸರ್ಕಾರ ಸಹ 463 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ.
ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಯೋಜನೆ ಅನುಷ್ಠಾನದಿಂದ ಹಣ, ಸಮಯ ಎರಡೂ ಉಳಿತಾಯವಾಗಲಿದೆ. 2019ರಲ್ಲಿ ಈ ಹೊಸ ರೈಲು ಮಾರ್ಗ ಯೋಜನೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿತ್ತು.

ಜನವರಿ 12ರಂದು ಯೋಜನೆಗೆ ಶಂಕು ಸ್ಥಾಪನೆ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಮಾಹಿತಿ ನೀಡಿದ್ದಾರೆ. ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡುವ ಸಾಧ್ಯತೆ ಇದೆ.
ಜನವರಿ 12ರಂದು ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಯುವ ಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಂದೇ ಈ ರೈಲು ಯೋಜನೆಗೆ ಶಂಕು ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ಬೆಳಗಾವಿ, ಹುಬ್ಬಳ್ಳಿಯ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

ಸಮಯ, ಹಣ ಉಳಿತಾಯ
ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಹೊಸ ಯೋಜನೆಯಾಗಿದೆ. ಈ ಯೋಜನೆ ಪೂರ್ಣಗೊಂಡರೆ ಸಮಯ, ಹಣ ಉಳಿತಾಯವಾಗಲಿದೆ. ಬೆಳಗಾವಿ-ಧಾರವಾಡ ನಡುವಿನ ಅಂತರ 75 ಕಿ. ಮೀ.. ಆದರೆ ನೇರ ರೈಲು ಮಾರ್ಗ ಇಲ್ಲದ ಕಾರಣ ರೈಲುಗಳು ಬೆಳಗಾವಿಯಿಂದ ಹೊರಡು ಲೋಂಡಾ ಮೂಲಕ ಸಾಗಿ ಬರಬೇಕು. ಇದರಿಂದ ಸುಮಾರು 130 ಕಿ. ಮೀ. ಆಗಲಿದ್ದು, ಸಂಚಾರ ನಡೆಸಲು 3 ಗಂಟೆ ಬೇಕಾಗಿದೆ. ನೇರ ರೈಲು ಮಾರ್ಗವಾದರೆ ಈ ದೂರ 73 ಕಿ. ಮೀ.ಗೆ ಇಳಿಕೆಯಾಗಲಿದ್ದು, ಬೆಳಗಾವಿ-ಧಾರವಾಡ ನಡುವೆ ಸಂಚಾರಕ್ಕೆ 1 ಗಂಟೆಗಳು ಸಾಕು ಎಂದು ಅಂದಾಜಿಸಲಾಗಿದೆ.

ಒಟ್ಟು 11 ನಿಲ್ದಾಣಗಳ ನಿರ್ಮಾಣ
ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಮೂರು (ಬೆಳಗಾವಿ-ಧಾರವಾಡ-ಹುಬ್ಬಳ್ಳಿ) ನಗರಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗ ನಿರ್ಮಾಣವಾದರೆ ಪ್ರಯಾಣಿಕರ ಜೊತೆ ಸರಕು ಸಾಗಣೆಗೂ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಒಟ್ಟು 11 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.
ಬೆಳಗಾವಿ ನಗರದಿಂದ ಹೊರಡುವ ರೈಲು ದೇಸೂರ, ಕೆ. ಕೆ. ಕೊಪ್ಪ, ಹಿರೇಬಾಗೇವಾಡಿ, ಎಂ. ಕೆ. ಹುಬ್ಬಳ್ಳಿ, ಹುಲಿಕಟ್ಟೆ, ಚನ್ನಮ್ಮನ ಕಿತ್ತೂರು, ತೇಗೂರ, ಮುಮ್ಮಿಗಟ್ಟಿ, ಕ್ಯಾರಕೊಪ್ಪದ ಮೂಲಕ ಧಾರವಾಡಕ್ಕೆ ತಲುಪಲಿದೆ. ಸೇತುವೆ, ಫ್ಲೈ ಓವರ್‌ಗಳು ನಿರ್ಮಾಣವಾಗುವುದಿಂದ ಸಿಗ್ನಲಿಂಗ್‌ಗಾಗಿ ಕಾಯುವ ಅವಶ್ಯಕತೆಯೂ ಇರುವುದಿಲ್ಲ.

ಶೇ 50:50ರಂತೆ ಅನುದಾನ ಹಂಚಿಕೆ
ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50:50ರಷ್ಟು ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿಕೊಳ್ಳಲಿವೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಕರ್ನಾಟಕ ಸರ್ಕಾರವೇ ಒದಗಿಸಲಿದೆ. ಮೊದಲು ಯೋಜನೆ ರೂಪಿಸಿದಾಗ 2022ರ ಅಂತ್ಯದಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಈಗ 2023ರಲ್ಲಿ ಶಂಕುಸ್ಥಾಪನೆಯಾಗುತ್ತಿದೆ. ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ರೈಲು ಮಾರ್ಗದಲ್ಲಿ ಹಲವಾರು ಕಡೆ ಕೃಷಿ ಭೂಮಿಗಳು ಇದ್ದು, ಭೂ ಸ್ವಾಧೀನದ ವಿಚಾರದಲ್ಲಿ ವಿಳಂಬವಾಗಲು ಕಾರಣವಾಗಿದೆ ಎಂಬುದು ಅಧಿಕಾರಿಗಳು ನೀಡಿರುವ ಮಾಹಿತಿ.












Click it and Unblock the Notifications