ಧಾರವಾಡ: 4 ಗಂಟೆ ತಡವಾಗಿ ಆಗಮಿಸಿದ ರೈಲು: ಪ್ರಯಾಣಿಕರಿಂದ ರೈಲ್ವೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆ
ಹುಬ್ಬಳ್ಳಿ, ಜೂನ್, 20: ರೈಲ್ವೆ ಇಲಾಖೆಯಲ್ಲಿ ಸಮಯಕ್ಕೆ ಯಾವುದೇ ರೀತಿಯ ಬೆಲೆಯೇ ಇಲ್ಲದಂತಾಗಿದೆ. ರೈಲು ಸಂಚಾರದಲ್ಲಿ ಸಾಕಷ್ಟು ವಿಳಂಬವಾದರೂ ರೈಲ್ವೆ ಸಿಬ್ಬಂದಿ ಮಾತ್ರ ಸರಿಯಾದ ರೀತಿಯಲ್ಲಿ ಮಾಹಿತಿ ನೀಡುವುದಿಲ್ಲ ಎನ್ನುವಂತ ಆರೋಪವನ್ನು ಸಾರ್ವಜನಿಕರು ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬುವಂತೇ ಧಾರವಾಡದಲ್ಲಿ ಪ್ರಯಾಣಿಕರ ಮತ್ತು ರೈಲ್ವೆ ಸಿಬ್ಬಂದಿಯ ನಡುವೆ ನಡೆದಿರುವ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದೆ.
ಮೊನ್ನೆಯಷ್ಟೇ ಧಾರವಾಡದಿಂದ ಮೈಸೂರಿಗೆ ಸಂಚರಿಸುವ ರೈಲು ತಡವಾಗಿದೆ ಆಗಮಿಸಿದ ಹಿನ್ನೆಲೆ ಪ್ರಯಾಣಿಕರು, ಎಸ್.ಎಸ್.ಸಿ ಹಾಗೂ ಆರ್ಮಿ ಪರೀಕ್ಷೆಗೆ ತೆರಳುವ ಪರೀಕ್ಷಾರ್ಥಿಗಳ ಹಾಗೂ ರೈಲ್ವೆ ಅಧಿಕಾರಗಳ ನಡುವೆ ಮಾತಿನ ಚಕಮಕಿಯೇ ನಡೆದಿದೆ. 17302 ಸಂಖ್ಯೆಯ ಧಾರವಾಡ- ಮೈಸೂರು ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ನಾಲ್ಕೈದು ಗಂಟೆಗಳ ಕಾಲ ತಡವಾಗಿ ಆಗಮಿಸಿದ ಬೆನ್ನಲ್ಲೇ ಆಕ್ರೋಶಗೊಂಡ ಸಾರ್ವಜನಿಕರು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈಗಾಗಲೇ ಸಾಕಷ್ಟು ಬಾರಿ ಇಂತಹ ಅವ್ಯವಸ್ಥೆ ಗೋಚರಿಸುತಿದ್ದರೂ ಕೂಡ ರೈಲ್ವೆ ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಅಲ್ಲದೆ ಒಂದೇ ಟ್ರೈನ್‌ಗೆ ಮೂರರಿಂದ ನಾಲ್ಕು ಬಾರಿ ಸಮಯ ನಿಗದಿ ಮಾಡುವ ಮೂಲಕ ಸಾರ್ವಜನಿಕರ ತಾಳ್ಮೆ ಪರೀಕ್ಷೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಜನರು ಪ್ರಶ್ನಿಸಿದ್ದಾರೆ.
ಹೀಗೆ ಕೆಲವೆಡೆ ಹಲವು ಬಾರೀ ರೈಲುಗಳು ವಿಳಂಬವಾಗಿ ಆಗಮಿಸಿರುವ ಉದಾಹರಣೆಗಳು ಇವೆ. ಮತ್ತೊಂದೆಡೆ ಏನಾದರೂ ಸಿಗ್ನಲ್ ಸಮಸ್ಯೆ ಅಥವಾ ಹಳಿ ಸಮಸ್ಯೆಯಿಂದನೋ ರೈಲುಗಳ ಆಗಮನ ವಿಳಂಬವಾಗಿರುವ ಉದಾಹರಣೆಗಳು ಕೂಡ ಇವೆ. ಹಾಗಾಗಿ ಪ್ರಯಾಣಿಕರು ರೈಲ್ವೆ ಸಿಬ್ಬಂದಿಗಳ ಜೊತೆ ಗಲಾಟೆ ತೆಗೆಯುವ ಮುನ್ನ ಇದನ್ನೆಲ್ಲ ಗಮನಿಸಬೇಕಾಗುತ್ತದೆ.
ಹಾಗೆಯೇ ರೈಲ್ವೆ ಸಿಬ್ಬಂದಿಯೂ ಕೂಡ ಕೆಲವೊಂದು ಸ್ಥಳಕ್ಕೆ ತುರ್ತಾಗಿ ತಲುಪಬೇಕಾಗಿರುವ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆಯೂ ನೋಡಿಕೊಳ್ಳಬೇಕು ಎನ್ನುವುದು ಬಹುತೇಕ ಪ್ರಯಾಣಿಕರ ಅಭಿಪ್ರಾಯ ಆಗಿದೆ.
"ಆ" ಸೀಟ್‌ಗಾಗಿ ಕಿತ್ತಾಡಿಕೊಂಡ ಮಹಿಳೆಯರು
ಮತ್ತೊಂದೆಡೆ ರಾಜ್ಯ ಸರ್ಕಾರ "ಶಕ್ತಿ" ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿದೆ. ಈ ಯೋಜನೆ ಜಾರಿ ಆದಾಗಿನಿಂದ ಮಹಿಳೆಯರು ರೈಲು, ಖಾಸಗಿ ಬಸ್‌ಗಳನ್ನು ತ್ಯಜಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಪ್ರಯಾಣ ಮಾಡಲು ಶುರು ಮಾಡಿದ್ದಾರೆ. ಹಾಗಯೇ ಹಲವೆಡೆ ಸೀಟ್‌ಗಾಗಿ ಮಹಿಳೆಯರು ಕತ್ತಾಡಿಕೊಂಡ ಘಟನೆಗಳು ಕೂಡ ಜರುಗಿವೆ. ಇದೀಗ ಹಾಸನ ಜಿಲ್ಲೆಯಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ.
ಕಿಟಕಿ ಪಕ್ಕದಲ್ಲೇ ಸೀಟ್‌ಗಾಗಿ ಮೂವರು ಮಹಿಳೆಯರು ಕಿತ್ತಾಡಿಕೊಂಡ ಘಟನೆ ಬೆಂಗಳೂರಿನಿಂದ ಹಾಸನಕ್ಕೆ ಬರುತ್ತಿದ್ದ ಸಾರಿಗೆ ಬಸ್‌ನಲ್ಲಿ ನಡೆದಿದೆ. ಜೊತೆಯಲ್ಲಿ ಬಂದಿದ್ದ ಮಹಿಳೆಯರ ಮಧ್ಯದಲ್ಲಿ ಕುಳಿತ ಮತ್ತೋರ್ವ ಮಹಿಳೆ ನನಗೆ ಕಿಟಕಿ ಪಕ್ಕದ ಸೀಟ್ ಬಿಟ್ಟುಕೊಡಿ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಇಬ್ಬರು ದೋಸ್ತಿ ಮಹಿಳೆಯರು ನಡುವೆ ಸೀಟ್‌ನಲ್ಲಿ ಕುಳಿತ ಮಹಿಳೆಯನ್ನು ತರಾಟೆಗೆ ತೆದುಕೊಂಡಿದ್ದಾರೆ.
ಇನ್ನು ಇದೇ ವೇಳೆ ಮಧ್ಯದಲ್ಲಿ ಕುಳಿತ ಮಹಿಳೆ ಏನ್ ಮಾಡ್ತೀರೋ ಗೊತ್ತಿಲ್ಲ ಕಿಟಕಿ ಪಕ್ಕದಲ್ಲಿರುವ ಸೀಟ್ ಬಿಟ್ಟುಕೊಡಿ ಎಂದು ಪಟ್ಟುಹಿಡಿದಿದ್ದರು. ಆಗ ದೋಸ್ತಿ ಮಹಿಳೆಯರಿಬ್ಬರು ಈ ಸೀಟ್ ಬಿಟ್ಟುಕೊಡಲ್ಲ ಅದೇನು ಮಾಡ್ಕೋಳ್ತೀರಾ ಮಾಡ್ಕೋಳಿ ಎಂದು ಹೇಳುವ ಮೂಲಕ ಮಾತಿನ ಮೂಲಕವೇ ಜಾಡಿಸಿದ್ದಾರೆ. ಸದ್ಯ ಸೀಟ್‌ಗಾಗಿ ಮಹಿಳೆಯರ ನಡುವಿನ ಮಾತಿನ ಚಕಮಕಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications