ಧಾರವಾಡ-ಬೆಳಗಾವಿ : ಕುಮಾರಸ್ವಾಮಿ ಪಾದಯಾತ್ರೆ ಮಾರ್ಗ
ಧಾರವಾಡ, ಜೂ.23 : ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗಹರಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಧಾರವಾಡದಿಂದ ಬೆಳಗಾವಿ ತನಕ ಪಾದಯಾತ್ರೆ ನಡೆಸಲಿದೆ. ಜೂನ್ 25ಕ್ಕೆ ಆರಂಭವಾಗುವ ಪಾದಯಾತ್ರೆ 29ಕ್ಕೆ ಮುಕ್ತಾಯಗೊಳ್ಳಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಜೂನ್ 25ರಂದು ಬೆಳಗ್ಗೆ 9 ಗಂಟೆಗೆ ಪಾದಯಾತ್ರೆಗೆ ಚಾಲನೆ ದೊರೆಯಲಿದ್ದು, ಜೆಡಿಎಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. [ಅಧಿವೇಶನಕ್ಕೂ ಮುನ್ನ ಜೆಡಿಎಸ್ ಪಾದಯಾತ್ರೆ]

ಸುಮಾರು 80 ಕಿ.ಮೀ.ಗಳ ಪಾದಯಾತ್ರೆ ಜೂನ್ 29ರಂದು ಬೆಳಗಾವಿಯಲ್ಲಿ ಮುಕ್ತಾಯಗೊಳ್ಳಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಸಿ.ಪಿ.ಹೆಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಕುಮಾರಸ್ವಾಮಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. [ಯಡಿಯೂರಪ್ಪಗೆ ಹುಬ್ಬಳ್ಳಿಯಲ್ಲಿ ಧೈರ್ಯ ತುಂಬಿದ ಎಚ್ಡಿಕೆ]

ಪಾದಯಾತ್ರೆ ಮಾರ್ಗ : ಜೂನ್ 25ರ ಬೆಳಗ್ಗೆ 9 ಗಂಟೆಗೆ ಧಾರವಾಡದಿಂದ ಸೋಮಾಪುರ, ಮಾಡರಗಿ ಮೂಲಕ ಹೆಬ್ಬಳ್ಳಿಗೆ ಪ್ರಯಾಣ. 25ರಂದು ಕಿತ್ತೂರಲ್ಲಿ ವಾಸ್ತವ್ಯ. ಜೂನ್ 26ರಂದು ಕಿತ್ತೂರಿನಿಂದ ಎಮ್.ಕೆ.ಹುಬ್ಬಳ್ಳಿಯ ತನಕ ಪಾದಯಾತ್ರೆ.
ಜೂನ್ 27ರಂದು ಎಮ್.ಕೆ.ಹುಬ್ಬಳ್ಳಿಯಿಂದ ಬಾಗೇವಾಡಿ ತನಕ ಪಾದಯಾತ್ರೆ. ಜೂನ್ 28ರಂದು ಬಾಗೇವಾಡಿಯಿಂದ ಬೆಳಗಾವಿ ತನಕ ಪಾದಯಾತ್ರೆ. ಜೂನ್ 29ರಂದು ಬೆಳಗಾವಿ ಸಿ.ಪಿ.ಹೆಡ್ ಮೈದಾನದಲ್ಲಿ ಬೃಹತ್ ಸಮಾವೇಶ, ಮಧ್ಯಾಹ್ನ 12 ಗಂಟೆಗೆ ಅಧಿವೇಶನದಲ್ಲಿ ಭಾಗಿ.

ಅಂದಹಾಗೆ ಈ ಬಾರಿಯ ಮುಂಗಾರು ಅಧಿವೇಶನ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಜೂನ್ 29ರಿಂದ ಜುಲೈ 10 ರವರೆಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮತ್ತು ಜುಲೈ 13 ರಿಂದ 24 ರವರೆಗೆ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಎರಡು ವರ್ಷಗಳಿಂದ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಳೆಗಾರರ ಬಾಕಿ ಹಣವನ್ನು ಪಾವತಿ ಮಾಡದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತ ಸಂಘ ಈಗಾಗಲೇ ಎಚ್ಚರಿಕೆ ನೀಡಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸಹ ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಿವೆ.












Click it and Unblock the Notifications