ಧಾರವಾಡದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್: ಜ. 28ರಂದು ಶಂಕುಸ್ಥಾಪನೆ
ಧಾರವಾಡ ಜನವರಿ 23: ಕೇಂದ್ರ ಸರ್ಕಾರವು ಅವಳಿನಗರ ವ್ಯಾಪ್ತಿಯ ಶೈಕ್ಷಣಿಕ ಕೇಂದ್ರವಾದ ಧಾರವಾಡದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಿಸಲು ನಿರ್ಧರಿಸಿದೆ. ಬರುವ ಜನವರಿ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡದಲ್ಲಿ ಈ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ.
ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದರು.
ಗುಜರಾತ್ ರಾಜ್ಯದಲ್ಲಿರುವ ರಾಷ್ಟ್ರೀಯ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯದ 8 ಕ್ಯಾಂಪಸ್‌ಗಳು ದೇಶದ ವಿವಿಧ ರಾಜ್ಯಗಳಲ್ಲಿವೆ. 9ನೇ ಕ್ಯಾಂಪಸ್ ಧಾರವಾಡದಲ್ಲಾಗುತ್ತಿದ್ದು, ಇದು ಪೂರ್ಣಗೊಂಡಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ, ಗುಣಮಟ್ಟದ ವಿಶ್ವವಿದ್ಯಾಲಯ ಸ್ಥಾಪಿತವಾದಂತಾಗುತ್ತದೆ.

ಕ್ಯಾಂಪಸ್ ನಿರ್ಮಾಣಕ್ಕೆ ಸುಮಾರು 50ಕ್ಕೂ ಹೆಚ್ಚು ಎಕರೆ ಭೂಮಿ ಅಗತ್ಯವಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಪ್ರಯೋಗಾಲಯ, ಆಡಳಿತ ಭವನ, ಕ್ಲಾಸ್ ರೂಮ್, ವಿದ್ಯಾರ್ಥಿ ನಿಲಯ, ಸಿಬ್ಬಂದಿಗೆ ವಸತಿ ಸಮುಚ್ಚಯ ಮುಂತಾದ ಮೂಲಸೌಕರ್ಯ ನಿರ್ಮಾಣಕ್ಕೆ ವಿಶಾಲ ಪ್ರದೇಶದ ಅಗತ್ಯವಿದೆ.
ಧಾರವಾಡ ಜಿಲ್ಲಾಡಳಿತದಿಂದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯ ಒಡೆತನದ ಲಭ್ಯ ಜಮೀನುಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶಿಪಾರಸ್ಸು ಮಾಡಿತ್ತು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಸಿ, ಒಂದೆರಡು ದಿನಗಳಲ್ಲಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವ ಪ್ರಹ್ಲಾದ ಜೋಶಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಉತ್ತರ ಕರ್ನಾಟಕ ಭಾಗದ ಧಾರವಾಡ ಜಿಲ್ಲೆಗೆ ಅತ್ಯವಶ್ಯಕವಾಗಿದ್ದ ರಾಷ್ಟ್ರೀಯ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಕೇಂದ್ರ ಸಚಿವ ಸಂಪುಟ ತೀರ್ಮಾಣದಂತೆ ಕೇಂದ್ರದಿಂದ ತಜ್ಞರ ತಂಡ ಆಗಮಿಸಲಿದ್ದು, ಅದು ಕ್ಯಾಂಪಸ್ ನಿರ್ಮಾಣದ ರೂಪುರೇಷೆಗಳನ್ನು ಅಂತಿಮಗೊಳಿಸಲಿದೆ. ಮುಂದಿನ ದಿನಗಳಲ್ಲಿ ಈ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯದ ಕ್ಯಾಂಪಸ್, ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯ ಆಗಿ ಪರಿವರ್ತನೆಗೊಳ್ಳಲಿದೆ.
ಸಚಿವರಿಗೆ ಕವಿವಿ ಕುಲಪತಿ ಪ್ರೊ.ಗುಡಸಿ ಜಾಗದ ಲಭ್ಯತೆ ಕುರಿತು ಸಚಿವ ಪ್ರಹ್ಲಾದ ಜೋಶಿಗೆ ವಿವರಿಸಿದರು. ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ್ , ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












Click it and Unblock the Notifications