Amarnath Yatra: ಪಂಚತರಣಿಯಲ್ಲಿ ಸಿಲುಕಿಕೊಂಡ ಧಾರವಾಡದ ಐವರು
ಧಾರವಾಡ, ಜುಲೈ, 09: ಅಮರನಾಥ ಯಾತ್ರೆಗೆ ಹೋಗಿದ್ದ ಧಾರವಾಡದ ಐದು ಜನ ಪಂಚತರಣಿ ರಸ್ತೆ ಮಧ್ಯೆಯೇ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾರೀ ಮಳೆಯಾಗುತ್ತಿರುವ ಪರಿಣಾಮ ಅಮರನಾಥದಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಅಲ್ಲದೆ ಜುಲೈ 3ರಂದು ಧಾರವಾಡದಿಂದ ಹೋಗಿದ್ದ ಐದು ಜನ ಜುಲೈ 6 ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವಿಪರೀತ ಮಳೆ ಆರಂಭಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದರಿಂದ ಸೇನಾ ಪಡೆಯುವರು ಪ್ರವಾಸಕ್ಕೆ ಬಂದಿದ್ದ ಎಲ್ಲರನ್ನೂ ಪಂಚತರಣಿ ಎಂಬಲ್ಲಿ ಟೆಂಟ್‌ನಲ್ಲಿ ಇಟ್ಟಿದ್ದಾರೆ. ಅದರಲ್ಲಿ ಧಾರವಾಡದ ರಾಕೇಶ್ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ್ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎಂಬುವವರೂ ಇದ್ದಾರೆ. ಇವರ ಜೊತೆಗೆ ಬೆಂಗಳೂರು, ರಾಯಚೂರು, ಗದಗ ಸೇರದಂತೆ ಕರ್ನಾಟಕದ ಅನೇಕ ಜಿಲ್ಲೆಯ ಜನರು ಕೂಡ ಇದ್ದಾರೆ.
ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಪ್ರವಾಸಿಗರನ್ನು ಖಾಸಗಿ ಟೆಂಟ್‌ನಲ್ಲಿ ಸೇನಾ ಪಡೆಯುವರು ಇಟ್ಟಿದ್ದಾರೆ. ಅಲ್ಲಿ ಊಟದ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಒಬ್ಬೊಬ್ಬ ಟೆಂಟ್‌ನವರು 600 ರೂಪಾಯಿ ಪಡೆದುಕೊಳ್ಳುತ್ತಿದ್ದು, ಊಟ ಮಾಡಿದರೆ ವಾಂತಿ, ಬೇಧಿ ಆಗುತ್ತಿದೆ. ಮತ್ತೊಂದೆಡೆ ವಿಪರೀತ ಮಳೆ ಸುರಿಯುತ್ತಿರುವುದರಿಂದ ಟೆಂಟ್ ಬಿಟ್ಟು ಹೊರಗಡೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಪ್ರವಾಸಿಗರನ್ನು ಕರೆತರಲು ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯವನ್ನು ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಮಾಡಿದ್ದಾರೆ.












Click it and Unblock the Notifications