ಗೋವಾದಲ್ಲಿ ಬಿಜೆಪಿ ಸರ್ಕಾರ ಶ್ರೀರಾಮ ಸೇನೆ ಪ್ರವೇಶಿಸಲು ಬಿಡಲಿಲ್ಲ ಯಾಕೆ?: ಡಿ.ಕೆ. ಶಿವಕುಮಾರ್ ಪ್ರಶ್ನೆ
ದಾವಣಗೆರೆ:, ಮೇ, 05: ಬಿಜೆಪಿಯವರು ಏನೂ ಬೇಕಾದರೂ ಮಾಡಲಿ. ಪಠಣ ಮಾಡಿದರೆ ಬೇಡವೆನ್ನಲ್ಲ. ಹನುಮಾನ ಚಾಲೀಸ ಮಾಡಿರುವುದು ತುಂಬಾ ಸಂತೋಷ. ಗೋವಾದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಶ್ರೀರಾಮ ಸೇನೆ ಪ್ರವೇಶಿಸಲು ಬಿಡಲಿಲ್ಲ. ಆಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಧ್ವನಿ ಎಲ್ಲಿ ಹೋಗಿತ್ತು ಎಂದು ಡಿ.ಕೆ.ಶಿವಕುಮಾರ್ ಹೊನ್ನಾಳಿಯಲ್ಲಿ ಪ್ರಶ್ನಿಸಿದರು. ಹಾಗೆಯೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿದ ಬಳಿಕ ಬಿಜೆಪಿ, ನರೇಂದ್ರ ಮೋದಿ ಅಲೆ ಕೊಚ್ಚಿಕೊಂಡು ಹೋಗುತ್ತದೆ ಎಂದು ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡರ ಪರ ಪ್ರಚಾರಕ್ಕೆ ಆಗಮಿಸುವ ಮುನ್ನ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆಯನ್ನು ಗೋವಾ ಸರ್ಕಾರ ಬಲವಂತವಾಗಿ ಹಿಂದಿಕ್ಕಿತ್ತು. ರಾಮನ ಭಂಟ ಹನುಮಂತ. ಆದರೆ ಬಿಜೆಪಿ ಸರ್ಕಾರ ರಾಮಸೇನೆ ಬಿಡಲಿಲ್ಲ. ನಾವು ದೇಶದ್ರೋಹಿಗಳು, ಅಶಾಂತಿ ಕೆಡಿಸುವವರ ಬಗ್ಗೆ ಮಾತನಾಡುತ್ತಿದ್ದೇವೆ. ಬಜರಂಗಿ ಬಜರಂಗದಳಕ್ಕೂ ವ್ಯತ್ಯಾಸ ಇದೆ. ಈ ಹೆಸರೇಳಿಕೊಂಡು ದೇಶ ಲೂಟಿ ಮಾಡಿ ಕಾನೂನು ಕೈಗೆ ತೆಗೆದುಕೊಂಡು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡದಲ್ಲಿ ಬಜರಂಗದಳದಲ್ಲಿದ್ದ ಎಷ್ಟೋ ನಾಯಕರು, ಅಮಾಯಕರು ಬಲಿಯಾಗಿದ್ದಾರೆ. ಬಡ ಕುಟುಂಬದವರನ್ನು ಹಾಳು ಮಾಡಿದ್ದೇ ಬಿಜೆಪಿ. ನಿಮ್ಮ ಪಕ್ಷ ಬೆಳೆಸಿಕೊಳ್ಳಿ, ನಮ್ಮದೇನೂ ಅಭ್ಯಂತರವೇನಿಲ್ಲ. ಪ್ರಣಾಳಿಕೆಯಲ್ಲಿ ಅಂಗನವಾಡಿ, ಯುವಕರು, ರೈತರು, ಹಿರಿಯರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಏನು ನೀಡುತ್ತೇವೆ ಎಂಬ ಭರವಸೆ ಕೊಟ್ಟಿದ್ದೇವೆ. ಪ್ರಧಾನ ಮಂತ್ರಿ ಅವರು ಬಜರಂಗಿ ಹನುಮಾನ್ ಎಂದು ಕೂಗಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಜೊತೆಗೆ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀವಿ. ಎಷ್ಟು ಹೆಣ್ಣು ಮಕ್ಕಳು ಸತ್ತು ಹೋಗಿದ್ದಾರೆ. ಕೊರೊನಾ ಬಂದಾಗ ಎಷ್ಟೋ ಮಹಿಳೆಯರು ಸತ್ತು ಹೋಗಿದ್ದಾರೆ. ಸುರೇಶ್ ಅಂಗಡಿಯವರ ಮೃತದೇಹ ನೋಡಲು ಜನರಿಗೆ ಅವಕಾಶ ಮಾಡಿಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ 65 ವರ್ಷ ಏನೂ ಮಾಡಿಲ್ಲ ಅಂತಾರೆ. ನೀವು ಅಧಿಕಾರಕ್ಕೆ ಬಂದಿಲ್ವಾ. ಗೆದ್ದಿದ್ದು ಹೇಗೆ? ಜವಾಹರಲಾಲ್ ಅವರು ಪ್ರಧಾನಿ ಆಗಿದಾಗಿನಿಂದ ಮನಮೋಹನ್ ಸಿಂಗ್ ಕಾಲಾವಧಿಯವರೆಗೆ ನೂರಾರು ಕಾರ್ಯಕ್ರಮಗಳನ್ನು ಕೊಟ್ಟಿರುವ ಪಕ್ಷವೆಂದರೆ ಕಾಂಗ್ರೆಸ್. 2013ರವರೆಗೆ ಭಾರತ ಬಲಿಷ್ಠವಾಗಿತ್ತು ಎಂದು ತಿರುಗೇಟು ನೀಡಿದರು.
ಅವರಿಗೊಂದು, ನಮಗೊಂದು
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿದ ಬಳಿಕ ಬಿಜೆಪಿ, ನರೇಂದ್ರ ಮೋದಿ ಅಲೆ ಕೊಚ್ಚಿಕೊಂಡು ಹೋಗುತ್ತಿದೆ. ಅದಕ್ಕೆ ಏನೇನೋ ದಾರಿ ಹುಡುಕುತ್ತಿದ್ದಾರೆ. ಮೋದಿ ಅವರ ಬಳಿ ಕೇಂದ್ರ, ರಾಜ್ಯ ಸರ್ಕಾರ ಇದೆ. ಪ್ರಿಯಾಂಕಾ ಗಾಂಧಿ ಅವರಿಗೆ ರೋಡ್ ಶೋ ನಡೆಸಲು ಒಂದೇ ದಾರಿಯಿರುವ ಮಾರ್ಗ ನೀಡುತ್ತಾರೆ.
ಅದೇ ಪ್ರಧಾನಿಯವರಿಗೆ ಡಬಲ್ ರಸ್ತೆ ನೀಡುತ್ತಾರೆ. ರೋಡ್ ಶೋಗೆ ಒಂದು ರಸ್ತೆ, ಮೋದಿ ನೋಡಲು ಬರುವ ಜನರಿಗೆ ಮತ್ತೊಂದು ರಸ್ತೆ ನೀಡುತ್ತಾರೆ. ಆದರೆ ಕಾಂಗ್ರೆಸ್‌ನವರಿಗೆ ಒತ್ತಡ ಮತ್ತು ಅನುಮತಿ ನೀಡಲು ಬಿಜೆಪಿ ಸರ್ಕಾರ ಮತ್ತು ಅಧಿಕಾರಿಗಳು ಸತಾಯಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿ ಶೋಗೆ ತೊಂದರೆ ಕೊಡಲ್ಲ
ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಬೆಲೆ ಏರಿಕೆ, ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ರಾಜಕಾರಣ ಎದುರುಗಡೆ ಮಾಡುತ್ತೇವೆ. ಆ್ಯಂಬುಲೆನ್ಸ್ ಬಿಟ್ಟು ಮೋದಿ ಶೋಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಶೋಭಾ ಕರಂದ್ಲಾಜೆ ಸುಳ್ಳು ಹೇಳಬಾರದು. ಕೇಂದ್ರ ಸರ್ಕಾರ ಅವರದ್ದೇ ಇದೆ. ಇಂತಹ ಕುತಂತ್ರ ಮಾಡುವವರನ್ನು ಕೂಡಲೇ ಬಂಧಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರಿಗೆ ಬೆದರಿಕೆ
ಪೇಪರ್, ಟಿವಿಯವರಿಗೆ ಹೆದರಿಸಿ ಬೆದರಿಸಿದ್ದಾರೆ. ಪ್ರಮುಖ ಚಾನೆಲ್‌ಗಳು ಜನರ ನಾಡಿಮಿಡಿತ ಅರಿತು ಕಾಂಗ್ರೆಸ್ ಪರ ಸಮೀಕ್ಷೆ ಪ್ರಕಟಿಸಿದ ಬಳಿಕ ತೊಂದರೆ ಕೊಡಲು ಶುರು ಮಾಡಿದ್ದಾರೆ. ಕಾಂಗ್ರೆಸ್ ಪರ ನಿಲ್ಲುವವರಿಗೆ ಭಯಪಡುವಂತೆ ಮಾಡುವ ಕುತಂತ್ರ ನಡೆಸಿದ್ದಾರೆ. ನೀವು ಬರೆದುಕೊಳ್ಳಿ, 141 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಆದಾಯ ತೆರಿಗೆ ಅಧಿಕಾರಿಗಳು ಬಿಜೆಪಿಯ ಏಜೆಂಟ್‌ನಂತೆ ವರ್ತಿಸುತ್ತಿದ್ದು, ಇನ್ನೆರಡು ದಿನಗಳ ಕಾಲ ಪ್ರಚಾರಕ್ಕೆ ಹೋಗದಂತೆ ಕಾಂಗ್ರೆಸ್ ನಾಯಕರನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಡಿ. ಜಿ. ಶಾಂತನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications