ಉಕ್ರೇನ್‌ನಿಂದ ದಾವಣಗೆರೆಗೆ ಬಂದ ಮನು ಹೇಳಿದ್ದೇನು? ಅಲ್ಲಿನ ಪರಿಸ್ಥಿತಿ ಹೇಗಿದೆ?
ದಾವಣಗೆರೆ, ಫೆಬ್ರವರಿ 26: "ನಮಗೆ ಮೊದಲೇ ಯುದ್ಧದ ಸೂಚನೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿದೆ. ನನ್ನ ಜೊತೆಯಲ್ಲಿದ್ದವರೂ ಸಹ ಟಿಕೆಟ್ ಪಡೆಯಲು ಯತ್ನಿಸಿದರು. ಅವರಿಗೆ ಸಿಗಲಿಲ್ಲ. ನನಗೆ ಸಿಕ್ಕಿತು. ಆದ ಕಾರಣ ನಾನು ತವರಿಗೆ ಸುರಕ್ಷಿತವಾಗಿ ಮರಳಿ ಬಂದಿದ್ದೇನೆ. ಯುದ್ಧ ಆಗುವ ಸೂಚನೆ ಹನ್ನೆರಡು ದಿನಗಳ ಹಿಂದೆ ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರಿಗಳು ಸೂಚನೆ ನೀಡಿದ್ದರು. ನನ್ನ ತಂದೆಗೆ ಫೋನ್ ಮಾಡಿ ಏನು ಮಾಡಬೇಕೆಂದು ಕೇಳಿದೆ. ಹೊರಟು ಬಾ ಅಂದರು, ಹಾಗಾಗಿಯೇ ನಾನು ಬೇಗ ಬಂದೆ''.
ಇದು ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ದಾವಣಗೆರೆ ತಾಲೂಕಿನ ದ್ಯಾಮವ್ವನಹಳ್ಳಿಯ ಮನು ತವರಿಗೆ ವಾಪಸ್ ಬಂದ ಬಳಿಕ ನೀಡಿದ ಪ್ರತಿಕ್ರಿಯೆ. ಯುದ್ಧ ನಡೆಯುತ್ತಿರುವ ಉಕ್ರೇನ್‌ನಲ್ಲಿ ಎಂಬಿಬಿಎಸ್ ಓದುತ್ತಿದ್ದ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿ ಪಾರಾಗಿ ಬಂದಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಫೆ.14ರಂದೇ ಯುದ್ಧದ ಬಗ್ಗೆ ಮಾಹಿತಿ
ದಾವಣಗೆರೆ ತಾಲೂಕಿನ ದ್ಯಾಮವ್ವನಹಳ್ಳಿಯ ಮನು ವಾಪಸ್ ಆದ ವಿದ್ಯಾರ್ಥಿಯಾಗಿದ್ದು, ಮನು ಉಕ್ರೇನ್‌ನ ಚರ್ನಿವಿಸ್ತಿನಲ್ಲಿ ವಾಸವಾಗಿದ್ದರು. "ಪರಿಸ್ಥಿತಿ ಅರಿತು ಮೊದಲೇ ವಿಮಾನ ಬುಕ್ ಮಾಡಿದ್ದರು. ಫೆ.22ರಂದು ಉಕ್ರೇನ್‌ನಿಂದ ಹೊರಟು ತವರಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಫೆ.14ರಂದೇ ಯುದ್ಧದ ಬಗ್ಗೆ ಅಲ್ಲಿನ ರಾಯಭಾರಿಗಳು ಮಾಹಿತಿ ನೀಡಿದ್ದರು. ಭಾರತಕ್ಕೆ ವಾಪಸ್ ಹೋಗುವವರು ಹೋಗುವಂತೆ ಸೂಚಿಸಿದ್ದರು. ಈ ಬಗ್ಗೆ ಮನೆಯಲ್ಲಿ ಹೇಳಿದ್ದೆ. ಮನೆಯವರು ವಾಪಸ್ ಬರುವಂತೆ ಹೇಳಿದ್ದರು. ಹೀಗಾಗಿ ಸುರಕ್ಷಿತವಾಗಿ ಬಂದಿದ್ದೇನೆ. ಆದರೆ, ಉಳಿದವರು ಏನೂ ಆಗಲ್ಲ ಅಂದುಕೊಂಡು ಅಲ್ಲೇ ಉಳಿದರು," ಎಂದು ಹೇಳಿದ್ದಾರೆ.

18 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರಿದ್ದರು
"ಭಯ ಪಡಬೇಡಿ. ಬಾಂಬ್ ಡಿಟೆಕ್ಟರ್ ಇದೆ ಎಂಬ ಭರವಸೆಯನ್ನು ಉಕ್ರೇನ್‌ನ ಅಧಿಕಾರಿಗಳು ನೀಡಿದ್ದರು. ಯುದ್ಧ ಅಂದ ಮೇಲೆ ಯಾವ ವೇಳೆ ಏನಾಗುತ್ತೆ ಎಂಬುದು ಯಾರುಗೂ ಗೊತ್ತಾಗಲ್ಲ. ಯುದ್ಧ ಘೋಷಣೆಯಾದ ಬಳಿಕ ತಂದೆಗೆ ಕರೆ ಮಾಡಿದ್ದೆ. ವಾಪಸ್ ಬನ್ನಿ ಎಂದರು. ನಾನು ಬಂದ ಮಾರನೇ ದಿನ ಏರ್‌ಪೋರ್ಟ್ ಬಂದ್ ಆಗಿತ್ತು. ಎಲ್ಲರಿಗೂ ಬರಬೇಕು ಎಂಬ ಅಪೇಕ್ಷೆ ಇತ್ತು. 18 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರಿದ್ದರು. ಎಲ್ಲರೂ ವಿಮಾನದ ಟಿಕೆಟ್ ಬುಕ್ ಮಾಡುತ್ತಿದ್ದರು. ಹಂತ ಹಂತವಾಗಿ ಟಿಕೆಟ್ ಸಿಗುತಿತ್ತು. ವಿಮಾನ ಪ್ರಯಾಣ ದರ ಹೆಚ್ಚಾದ ಕಾರಣ ಕೆಲವರು ಟಿಕೆಟ್ ಮಾಡಿಸಿರಲಿಲ್ಲ. ಮತ್ತೆ ಕೆಲವರು ಮಾರ್ಚ್ ತಿಂಗಳಿನಲ್ಲಿ ಬರಬೇಕೆಂದು ಅಂದುಕೊಂಡಿದ್ದರು. ಆದರೆ ಈಗ ವಿಮಾನ ಹಾರಾಟ ನಿಲ್ಲಿಸಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ," ಎಂದು ವಿವರಿಸಿದ್ದಾರೆ.
ಈಗ ಫ್ಲೈಟ್ ಬಂದ್ ಆಗಿ ನಮ್ಮವರಿಗೆ ಸಮಸ್ಯೆಯಾಗಿದೆ. ಸದ್ಯ ಉಕ್ರೇನ್‌ನಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ನಮ್ಮವರು ಸುರಕ್ಷಿತವಾಗಿ ಭಾರತಕ್ಕೆ ಬರಲಿ ಎಂದು ಯುವಕ ಮನು ಪ್ರಾರ್ಥಿಸಿದ್ದಾರೆ.

ವೆಸ್ಟರ್ನ್ ಪಾರ್ಟ್‌ನಲ್ಲಿದ್ದ ಕಾರಣ ಸಮಸ್ಯೆ ಏನಿಲ್ಲ ಎಂದುಕೊಂಡೆವು
"ಯುದ್ಧ ಏನಾಗಲ್ಲ ಎಂದುಕೊಂಡು ಕೆಲವರು ಮಾರ್ಚ್‌ಗೆ ಬರೋಣ ಎಂದುಕೊಂಡಿದ್ದರು. ವೆಸ್ಟರ್ನ್ ಪಾರ್ಟ್‌ನಲ್ಲಿದ್ದ ಕಾರಣ ಸಮಸ್ಯೆ ಏನಿಲ್ಲ ಎಂದುಕೊಂಡಿದ್ದೆವು. ಜೊತೆಗಿದ್ದೇ ಟಿಕೆಟ್ ಬುಕ್ ಮಾಡಿಕೊಂಡಿದ್ದೆವು. ಎಲ್ಲರೂ ಬುಕ್ ಮಾಡಲು ಪ್ರಯತ್ನ ಮಾಡಿದ ಕಾರಣ ಟಿಕೆಟ್ ಎಲ್ಲರಿಗೂ ಸಿಕ್ಕಿಲ್ಲ. ಹೋಗುವವರು ಹೋಗಿ ಎಂದಿದ್ದರು. ಕರ್ನಾಟಕದವರು 50ಕ್ಕೂ ಹೆಚ್ಚು ಜನ ಸೇರಿ ಭಾರತದವರು ಮೂರು ಸಾವಿರ ವಿದ್ಯಾರ್ಥಿಗಳಿದ್ದರು. ರೊಮಾನಿಯಾ ಗಡಿ ಭಾಗದಲ್ಲಿದ್ದೆವು. ಯಾರೇ ವಿದ್ಯಾರ್ಥಿಗಳಿದ್ದರೂ ಅವರಿಗೆ ಬಸ್ ವ್ಯವಸ್ಥೆ ಮಾಡಿ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗಿತ್ತು. ಕೆಲವರು ಬಂದರೆ, ಮತ್ತೆ ಕೆಲವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ," ಎಂದು ವಿವರಿಸಿದರು.
ಭಾರತಕ್ಕೆ ವಾಪಸ್ ಆಗುವಂತೆ ಮೊದಲೇ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿತ್ತು. ಬಸ್ ವ್ಯವಸ್ಥೆ ಮಾಡಿದ್ದರು. ಸ್ನೇಹಿತರೆಲ್ಲರೂ ಬರುತ್ತಿದ್ದಾರೆ. ನೆಟ್‌ವರ್ಕ್ ಸಿಗದ ಕಾರಣ ಸಂಪರ್ಕಕ್ಕೆ ಸಿಗುತ್ತಿಲ್ಲ. ನೀವೆಲ್ಲಾ ಬಾರ್ಡರ್‌ಗೆ ಬನ್ನಿ. ಕರೆದುಕೊಂಡು ಹೋಗುತ್ತಾರೆ ಎಂದು ನಮಗೆ ಮಾಹಿತಿ ನೀಡಲಾಗಿತ್ತು ಎಂದಿದ್ದಾರೆ.
ನನ್ನ ತಂದೆಗೆ ಫಾರಿನ್‌ನಲ್ಲಿ ನಾನು ಓದಬೇಕು ಎಂಬ ಆಸೆ ಇತ್ತು. ಅಂಕ ಕಡಿಮೆ ಬಂದ ಕಾರಣ ಇಲ್ಲಿ ಸೀಟ್ ಸಿಗಲಿಲ್ಲ. ಪೇಮೆಂಟ್ ಸೀಟ್ ಕೂಡ ಸಿಗುವುದು ಕಷ್ಟವಾಗಿತ್ತು. 5 ವರ್ಷದಲ್ಲಿ ಕಡಿಮೆ ಫೀಸ್ ಉಕ್ರೇನ್‌ನಲ್ಲಿದೆ. ಆದ ಕಾರಣ ಅಲ್ಲಿಗೆ ಓದಲು ತೆರಳಿದ್ದೆ. ಈಗ ಇಲ್ಲಿದ್ದುಕೊಂಡೇ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಹೇಳಿದರು.

ಉಕ್ರೇನ್‌ನಲ್ಲಿರುವ ಕುಂದೂರಿನ ಪ್ರಿಯಾ ಹೇಳಿದ್ದೇನು?
ಇನ್ನು ಉಕ್ರೇನ್‌ನಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರಿನ ವಿದ್ಯಾರ್ಥಿನಿಯೊಬ್ಬರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿಕೊಡುವ ಮೂಲಕ ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿಯನ್ನು ಪ್ರಿಯಾ ವಿವರಿಸಿದ್ದಾರೆ.
ಉಕ್ರೇ್‌ನ ಚರ್ನಿವಿಸ್ಟಿಯಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿ ಪ್ರಿಯಾ, ಯುದ್ಧದ ಪರಿಸ್ಥಿತಿಯಿಂದಾಗಿ ನಮಗೆ ತುಂಬಾ ತೊಂದರೆಯಾಗಿದೆ. ಸದ್ಯ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಕಳೆದ ಎರಡು ದಿನಗಳಿಂದ ಇಲ್ಲಿ ತುಂಬಾ ಗಲಾಟೆ ನಡೆದಿತ್ತು. ಆಗಿನಿಂದ ನಾವು ಯಾರು ಹೊರಗೆ ಹೋಗಿಲ್ಲ ಎಂದು ತಿಳಿಸಿದ್ದಾರೆ.
ಭಾರತೀಯ ರಾಯಭಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ವಾರಕ್ಕೆ ಆಗುವಷ್ಟು ಹಣ, ನೀರು ಮತ್ತು ಆಹಾರ ಸಂಗ್ರಹಣೆಗೆ ಸೂಚನೆ ನೀಡಿದ್ದರು. ಅದರಂತೆ ನಾವು ಎಲ್ಲವನ್ನು ಪಾಲಿಸಿದ್ದೇವೆ. ಇಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಈಗ ನಮ್ಮನ್ನು ಬೇರೆಡೆ ಬಸ್ ಮೂಲಕ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದ್ದಾರೆ. ತಂಡಗಳಂತೆ ಬಸ್ ಮೂಲಕ ಸ್ಥಳಾಂತರ ಮಾಡುತ್ತಿದ್ದಾರೆ. ನಾವು ಇಲ್ಲಿಂದ ಬೇರೆಡೆ ತೆರಳಲು ಸಿದ್ದರಾಗಿದ್ದೇವೆ. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ನಮ್ಮ ಕುಟುಂಬದವರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಪ್ರಿಯಾ ಉಕ್ರೇನ್‌ನ ಸದ್ಯದ ಪರಿಸ್ಥಿತಿ ಹಂಚಿಕೊಂಡಿದ್ದಾರೆ.












Click it and Unblock the Notifications