ನೀವೇನಾದರೂ ಒಂದು ಆಕಳು, ಕುದುರೆ, ಎತ್ತು ಸಾಕಿದ್ದೀರಾ?: ಬಿಜೆಪಿ ನಾಯಕರಿಗೆ ಶಾಮನೂರು ಶಿವಶಂಕರಪ್ಪ ಪ್ರಶ್ನೆ
ದಾವಣಗೆರೆ, ಡಿಸೆಂಬರ್, 30: ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಜೀವಿ ಪತ್ತೆ ಪ್ರಕರಣ ಸಂಬಂಧ ಹೋರಾಟ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಮಾಡಲು ಕೆಲಸ ಇಲ್ಲ. ಹಾಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ಆಕಳು, ಕುದುರೆ, ಎತ್ತು ಸಾಕಿದ್ದಾರಾ? ನಮ್ಮ ಬಳಿ 100 ಹಸುಗಳಿವೆ. 40 ಕುದುರೆಗಳಿವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದರು.
ನಗರದ ಬಾಪೂಜಿ ಕಾಲೇಜಿನ ಎಂಬಿಎ ಗ್ರೌಂಡ್‌ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವನ್ಯಜೀವಿ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕೆಂದು ಹೋರಾಟ ಮಾಡುತ್ತಿರುವ ಜಿಲ್ಲಾ ಬಿಜೆಪಿ ನಾಯಕರ ವರ್ತನೆಗೆ ಕಿಡಿಕಾರಿದರು. ನಾವು ಹಸು, ಕುದುರೆ, ಎತ್ತುಗಳನ್ನು ಸಾಕುತ್ತಿದ್ದೇವೆ. ಬಿಜೆಪಿಯವರು ಏನು ಸಾಕುತ್ತಿದ್ದಾರೆ? ಹೋರಾಟ ಮಾಡುವ ನಾಯಕರು ಮೊದಲು ಕೆಲಸ ಮಾಡಲಿ. ಅದನ್ನು ಬಿಟ್ಟು ಪ್ರತಿಭಟನೆ ಮಾಡಿದರೆ ಏನು ಉಪಯೋಗ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಬಗ್ಗೆ ಶಿವಶಂಕರಪ್ಪ ಹೇಳಿದ್ದೇನು?
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ನೀಡಿರುವ ಹಾಗೂ ಲಿಂಗಾಯತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಮೀಸಲಾತಿ ಎಲ್ಲವೂ ತಿರುಗ ಮುರುಗ ಆಗಿದೆ. ನಾವು ಅಂದುಕೊಂಡಂತೆ ಮೀಸಲಾತಿ ನೀಡಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು.

ಮಲ್ಲಿಕಾರ್ಜುನ್ ವಿರುದ್ಧ ಯಶವಂತರಾವ್ ಆಕ್ರೋಶ
ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸಲಾಗಿದೆ. ಕಲ್ಲೇಶ್ವರ ರೈಸ್ ಮಿಲ್‌ನ ಮಾಲೀಕರು ಯಾರು? ವನ್ಯಜೀವಿಗಳನ್ನು ಸಾಕಲು ಅನುಮತಿ ಪಡೆಯಲಾಗುತ್ತದೆ ಎಂಬ ಸತ್ಯವನ್ನು ಹೇಳಲಿ. ಸೂಕ್ತ ದಾಖಲಾತಿ ತೋರಿಸಲಿ. ಆಗ ಬಿಜೆಪಿ ತನ್ನ ಹೋರಾಟ ನಿಲ್ಲಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಅಕ್ರಮವಾಗಿ ವನ್ಯಜೀವಿ ಸಾಕಿರುವ ಕಲ್ಲೇಶ್ವರ ರೈಸ್ ಮಿಲ್ ಮಾಲೀಕ ಮೊದಲ ಆರೋಪಿಯಾಗಬೇಕು. ಹೊಟ್ಟೆಪಾಡಿಗೆ ಕೆಲಸ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಸರಿಯಲ್ಲ. ಮಲ್ಲಿಕಾರ್ಜುನ್ ಅವರ ಒಡೆತನದ ಜಾಗ ಎಂಬುದು ದಾಖಲೆಗಳಲ್ಲಿ ಇದೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದರು.












Click it and Unblock the Notifications