Davangere Rain: ದಾವಣಗೆರೆಯಲ್ಲಿ ಭಾರೀ ಗಾಳಿ ಮಳೆ, ನೆಲಕಚ್ಚಿದ ಭತ್ತದ ಬೆಳೆ, ರೈತ ಕಂಗಾಲು
ದಾವಣಗೆರೆ, ನವೆಂಬರ್ 09: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಹೊಡೆತದಿಂದ ಭತ್ತದ ಬೆಳೆ ನೆಲಕಚ್ಚಿದ್ದು, ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಬೆಳೆದ ಬೆಳೆಯೂ ಹೋಯ್ತು, ಮಾಡಿದ ಸಾಲವು ಹೆಚ್ಚಾಯ್ತು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಬಹಳ ಕಷ್ಟ ಪಟ್ಟು ಜಮೀನುಗಳಿಗೆ ನೀರುಣಿಸಿ ಭತ್ತ ಬೆಳೆದಿದ್ದಾರೆ. ಆದರೆ ಈಗ ಸುರಿದಿರುವ ಮಳೆಯಿಂದ ಗಾಳಿಯ ರಭಸಕ್ಕೆ ಭತ್ತದ ಬೆಳೆ ಉರುಳಿ ನೆಲಕ್ಕೆ ಬಿದ್ದಿದೆ. ನೋಡಲು ಚಾಪೆ ಹಾಸಿದಂತೆ ಹಾಸಿದೆ. ಇದರಿಂದ ಬಹಳಷ್ಟು ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಇದೆ. ತಾಲ್ಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ವಿಪತ್ತು ನಿರ್ವಹಣೆ ಕಾರ್ಯಪಡೆ ಇದೆ. ಇವರೆಡು ಸಮಿತಿಗಳಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಇದ್ದಾರೆ. ಆದರೆ ಇಂತಹ ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಸಮೀಕ್ಷೆ ನಡೆಸಿಲ್ಲ.
ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಿ, ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾದ ರೈತರ ಹಿತಾಸಕ್ತಿ ಕಾಪಾಡಬೇಕು ಎಂಬ ಆಗ್ರಹ ರೈತ ಮುಖಂಡರದ್ದಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಕಡ್ಲೆಬಾಳ್, ಅರಸಾಪುರ, ಕಕ್ಕರಗೊಳ್ಳ, ಕೋಡಿಹಳ್ಳಿ, ಅವರಗೊಳ್ಳ ಮುಂತಾದ ಗ್ರಾಮಗಳ ರೈತರಿಗೆ ಭತ್ತದ ಬೆಳೆಯೇ ಜೀವನಾಡಿಯಾಗಿದೆ. ಸರ್ಕಾರ ಆವರ್ತ ನಿಧಿಯಲ್ಲಿರುವ ಅನುದಾನ ಬಿಡುಗಡೆ ಮಾಡಿ ಬೆಳೆ ಹಾನಿಯಿಂದ ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ. ಮಳೆ ಮುಂದುವರಿದಿದ್ದು, ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದೆ. ಇದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಸ್ವಲ್ಪ ಮಟ್ಟಿಗೆ ಮಂದಹಾಸ ಮೂಡುವಂತೆ ಮಾಡಿದೆ.

ಭದ್ರಾ ಡ್ಯಾಂನ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ಭದ್ರಾ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತಿತ್ತು. ಇದರಿಂದಾಗಿ ಡ್ಯಾಂ ನೀರಿನ ಮಟ್ಟ 150 ಅಡಿಗೂ ಕಡಿಮೆ ಸಂಗ್ರಹ ಆಗಬಹುದು ಎಂಬ ಆತಂಕವೂ ಮನೆ ಮಾಡಿತ್ತು.
ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ. 2257 ಕ್ಯೂಸೆಕ್ ಒಳಹರಿವಿದೆ. 1864 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಬಲದಂಡೆ ನಾಲೆಯಲ್ಲಿ 1864 ಕ್ಯೂಸೆಕ್ ನೀರು ಹೊರ ಹರಿವಿದ್ದು, ಭದ್ರಾ ಎಡದಂಡೆ ನಾಲೆಯಲ್ಲಿ ನೀರು ಸ್ಥಗಿತಗೊಳಿಸಲಾಗಿದೆ. ನಿರ್ವಹಣೆಗೆ 100 ಕ್ಯೂಸೆಕ್ ಬಳಕೆ ಮಾಡಲಾಗುತ್ತಿದೆ.
ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 152.4 ಅಡಿ ಇದ್ದು, ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂನ ನೀರಿನ ಮಟ್ಟ 184.7 ಅಡಿ ನೀರು ಸಂಗ್ರಹವಾಗಿತ್ತು. ಡ್ಯಾಂ ಕೆಪಾಸಿಟಿ 69.838 ಟಿಎಂಸಿ ಇದೆ. ಇಂದು ಒಳಹರಿವು ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಮಳೆ ಮುಂದುವರಿದರೆ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನಾಲೆ ನೀರು ಬಂದ್ ಮಾಡಿ
ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿದಿದ್ದು, ಭೂಮಿಯೂ ಹದವಾಗಿದೆ. ಈ ಕಾರಣಕ್ಕೆ ಒಂದು ವಾರದ ಮಟ್ಟಿಗೆ ಭದ್ರಾ ಡ್ಯಾಂ ನೀರಿನ ಹೊರ ಹರಿವು ನಿಲ್ಲಿಸಿದರೆ ರೈತರಿಗೆ ಅನುಕೂಲವಾಗಿದೆ. ಈಗಾಗಲೇ ಮೆಕ್ಕೆಜೋಳ ಸಂಪೂರ್ಣವಾಗಿ ನಾಶವಾಗಿದೆ. ಮೆಕ್ಕೆಜೋಳ ಬೆಳೆ ಬೆಳೆದವರ ರೈತರು ತುಂಬಾನೇ ನಷ್ಟ ಅನುಭವಿಸಿದ್ದಾರೆ. ಶೇಕಡಾ 70 ರಷ್ಟು ದಾವಣಗೆರೆಯ ಜಿಲ್ಲೆಯ ರೈತರು ಭದ್ರಾ ಡ್ಯಾಂ ನೀರನ್ನೇ ಅವಲಂಬಿಸಿದ್ದಾರೆ.
ಭತ್ತ ನಾಟಿ ಮಾಡಿರುವ ರೈತರಿಗೆ ಇನ್ನು ನಾಲ್ಕೈದು ದಿನಗಳಿಗೆ ನೀರಿನ ಅವಶ್ಯಕತೆ ಇಲ್ಲ. ಈ ಕಾರಣದಿಂದ ಡ್ಯಾಂ ನೀರು ನಿಲುಗಡೆ ಮಾಡಿ. ಆ ನಂತರ ನಿರಂತರವಾಗಿ ನೀರು ಹರಿಸಿದರೆ ಅನುಕೂಲವಾಗುತ್ತದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ, ಜಗಳೂರು, ಹರಿಹರ ತಾಲೂಕಿನಲ್ಲಿಯೂ ಉತ್ತಮ ವರ್ಷಧಾರೆಯಾಗಿದೆ.
ಡ್ಯಾಂ ನೀರಿನ ಹೊರ ಹರಿವು ನಿಲ್ಲಿಸಿದರೆ ಜಲಾಶಯದ ನೀರಿನ ಮಟ್ಟವೂ ಹೆಚ್ಚಾಗಲಿದೆ. ಈ ಕಾರಣದಿಂದ ಭದ್ರಾ ಎಡದಂಡೆ ನಾಲೆಗೆ ಹರಿಸುತ್ತಿರುವ ನೀರು ಸದ್ಯಕ್ಕೆ ನಿಲ್ಲಿಸಿ. ಆ ಬಳಿಕ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಬಾರಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಮಳೆ ಕೈ ಕೊಟ್ಟ ಕಾರಣ ಭತ್ತ ಬೆಳೆಗಾರರಲ್ಲಿ ಆತಂಕ ಮನೆ ಮಾಡಿತ್ತು. ಈಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಭತ್ತ ಬೆಳೆಗಾರರಿಗೆ ಖುಷಿ ತಂದಿದೆ.
ಡ್ಯಾಂ ನೀರು ಅವಲಂಬಿಸಿರುವ ರೈತರು ಭತ್ತ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ವರುಣ ಕೃಪೆ ತೋರಿದ್ದು, ಇನ್ನು ಸ್ವಲ್ಪ ದಿನಗಳ ಕಾಲ ಮಳೆ ಸುರಿದರೆ ಅನುಕೂಲವಾಗುತ್ತದೆ. ಜಲಾಶಯದ ನೀರಿನ ಮಟ್ಟ 152 ಅಡಿ ಇದ್ದು, ಇನ್ನು ಕಡಿಮೆಯಾದರೆ ಮತ್ತೆ ಸಮಸ್ಯೆ ಆಗಲಿದೆ. ಕುಡಿಯುವ ನೀರಿಗೂ ಹಾಹಾಕಾರ ಆಗಲಿದೆ. ಈ ಹಿನ್ನೆಲೆಯಲ್ಲಿ ಡ್ಯಾಂ ನೀರು ಸದ್ಭಳಕೆ ಆಗಬೇಕು ಎಂದು ರೈತ ಮುಖಂಡರು ಹೇಳುತ್ತಿದ್ದಾರೆ.
ಈ ಬೆಳವಣಿಗೆ ನಡುವೆ ದಾವಣಗೆರೆ ಜಿಲ್ಲಾಡಳಿತವು ಮೇವು ಸಂಗ್ರಹಿಸುವಂತೆ ರೈತರಿಗೆ ಸೂಚನೆ ನೀಡಿದೆ. ಮಳೆ ಕೊರತೆಯಿಂದ ದಾವಣಗೆರೆ ಜಿಲ್ಲೆಯ 6 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದೆ.
ಭತ್ತ, ಮೆಕ್ಕೆಜೋಳ ಮತ್ತು ಇತರೆ ಬೆಳೆಗಳ ಕಟಾವು ಮಾಡುವ ವೇಳೆ ಮೇವು ಮೇವು ಹಾಳಾಗದಂತೆ ಶೇಖರಣೆ ಮಾಡಿಟ್ಟುಕೊಳ್ಳಲು ಜಿಲ್ಲೆಯಲ್ಲಿ ಕ್ರಮವಹಿಸುವಂತೆ ರೈತರಿಗೆ ಜಿಲ್ಲಾಧಿಕಾರಿ.ಡಾ. ಎಂ. ವಿ. ವೆಂಕಟೇಶ್ ಮನವಿ ಮಾಡಿದ್ದಾರೆ.
ಮೇವನ್ನು ಒಣಗಿಸಿ ಹುಲ್ಲು ಹಾಳಾಗದಂತೆ ಶೇಖರಣೆ ಮಾಡುವುದು. ಬೇಲಿಂಗ್ ಯಂತ್ರಗಳಿಂದ ಭತ್ತದ ಹುಲ್ಲು ಸುರುಳಿ ಕಟ್ಟಿ ಶೇಖರಿಸಿಟ್ಟುಕೊಳ್ಳಬೇಕು. ಅವಶ್ಯಕ ಸಂದರ್ಭದಲ್ಲಿ ರೈತರು ಸರ್ಕಾರಕ್ಕೆ ಮೇವನ್ನು ಮಾರಾಟ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ವಾಡಿಕೆ ಮಳೆಗಿಂತ ತೀವ್ರತರ ಕಡಿಮೆ ಮಳೆಯಾಗಿ ಬರ ಉಂಟಾಗಿದೆ. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ಪ್ರಮುಖ ವಿಷಯವಾಗಿದೆ. ರೈತರು ತಮ್ಮ ಜಮೀನಿಲ್ಲಿರುವ ಯಾವುದೇ ತರಹದ ಮೇವನ್ನು ಸುಟ್ಟು ಹಾಕದೇ ಬಣವೆ ಹಾಕಿ ಶೇಖರಿಸಬೇಕು ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications