ವಿಡಿಯೋ; ನಮಗೆ ಹಣ ಬೇಡ, ಮಕ್ಕಳಿಗೆ ಅನ್ನ ಕೊಡಿ
ದಾವಣಗೆರೆ, ಮೇ 09; ವಿಜಯಪುರದಿಂದ ದಾವಣಗೆರೆಗೆ ವ್ಯಾಪಾರಕ್ಕೆ ಬಂದು ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದ 150 ಮಂದಿ ಲಾಕ್ ಡೌನ್ ಪರಿಣಾಮ ಊಟವಿಲ್ಲದೇ ನಿತ್ಯವೂ ನರಕಯಾತನೆ ಪಡುತ್ತಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸವಣೂರು ಪ್ಲಾಜಾದ ಕರೂರಿಗೆ ಹೋಗುವ ರಸ್ತೆಯಲ್ಲಿ ಟೆಂಟ್ ಹಾಕಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದೊಂದು ತಿಂಗಳಿನಿಂದ ವ್ಯಾಪಾರ ಇಲ್ಲದೇ, ಹಣವೂ ಇಲ್ಲದೇ ಪರದಾಡುತ್ತಿದ್ದಾರೆ.
ಈ ಕಾರ್ಮಿಕರು ಬಳೆ, ಸರ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಹೆಮ್ಮಾರಿ ಆರ್ಭಟದಿಂದಾಗಿ ಇವರ ಬದುಕೇ ಮೂರಾಬಟ್ಟೆಯಾಗಿದೆ. ಈ ಬಗ್ಗೆ ವಿಜಯಪುರದ ರಾಮು ಎಂಬುವವರು ವಿಡಿಯೋದಲ್ಲಿ ಮಾಡಿರುವ ಮನವಿ ಕಣ್ಣಲ್ಲಿ ನೀರು ತರಿಸುವಂತಿದೆ.

"ಸಣ್ಣ ಸಣ್ಣ ಮಕ್ಕಳಿದ್ದಾರೆ. ಒಂದೊತ್ತಿನ ಕೂಳಿಗೂ ಪರದಾಡ್ತಿದ್ದೇವೆ ಸಾಹೇಬ್ರೆ. ದುಡ್ಡು ಬೇಡ ಏನೂ ಬೇಡ. ನಮಗೆ ಊಟ ಕೊಡಿ ಸಾಕು. ಊಟ ಸಿಗದೇ ಸಾಯುವ ಪರಿಸ್ಥಿತಿ ಬಂದೊದಗಿದೆ. ಇನ್ಮುಂದೆ ಮಣ್ಣು ತಿನ್ನುವ ಪರಿಸ್ಥಿತಿ ಎದುರಾಗಿದೆ. ದಯವಿಟ್ಟು ಸಹಾಯ ಮಾಡ್ರಿ ನಿಮ್ಗೆ ಪುಣ್ಯ ಬರುತ್ತೆ. ಕಳೆದ ವರ್ಷದ ಲಾಕ್ ಡೌನ್ ವೇಳೆ ಆಗಿನ ತಹಶೀಲ್ದಾರ್, ಡಿಸಿ ಸಹಾಯ ಮಾಡಾವ್ರೆ" ಎಂದು ರಾಮು ಹೇಳಿದ್ದಾರೆ.
"ಈ ಬಾರಿ ತಿಂಗಳಾಯ್ತು. ಊಟ ಇಲ್ಲ, ನೀರು ಇಲ್ಲ. ಸಣ್ಣ ಸಣ್ಣ ಮಕ್ಕಳಿದ್ದಾರೆ. ವ್ಯಾಪಾರವೂ ಇಲ್ಲ, ದುಡ್ಡು ಇಲ್ಲ. ಹೊರಗಡೆ ಹೋದರೆ ಪೊಲೀಸರು ಹೊಡೆಯುತ್ತಾರೆ. ಅಂಗಡಿಗಳು ಬಾಗಿಲು ಹಾಕಿವೆ" ಎಂದರು.
"ಜಿಪ್, ಬಳೆ, ಸರ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡ್ತಿದ್ದೇವೆ. ಜನರು ಖರೀದಿ ಮಾಡ್ತಿಲ್ಲ. ಸಣ್ಣ ಸಣ್ಣ ಮಕ್ಕಳು ಉಪವಾಸ ಸಾಯುವಂಥ ಸ್ಥಿತಿ ನಿರ್ಮಾಣ ಆಗಿದೆ. ದುಡ್ಡು ಏನೂ ಬೇಡ. ಊಟ ಕೊಡಿ ಸಾಕು" ಎಂದು ರಾಮು ಮನವಿ ಮಾಡಿದ್ದಾರೆ.












Click it and Unblock the Notifications