ಪರಮೇಶ್ವರ್ ಆಪ್ತ ಸಹಾಯಕನನ್ನು ಮುಗಿಸಲಾಗಿದೆ: ರೇಣುಕಾಚಾರ್ಯ
ದಾವಣಗೆರೆ, ಅಕ್ಟೋಬರ್ 13: "ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಆಪ್ತ ಸಹಾಯಕ ರಮೇಶ್ ಸಾವು ಸಹಜ ಸಾವು ಅಲ್ಲ. ಆತನನ್ನು ಮುಗಿಸಲಾಗಿದೆ" ಎಂದು ಭಾನುವಾರ ದಾವಣಗೆರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆ ನಗರದ ನಾಯಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಗೆ ಆಗಮಿಸಿ, ವಾಲ್ಮೀಕಿ ಛಾಯಾಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದರು. ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ ಸಾವು ಸಹಜ ಸಾವು ಅಲ್ಲ. ಆತನನ್ನು ಮುಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆತನ ಸಾವಿಗೆ ಬೇರೆ ಬೇರೆ ಕಾರಣಗಳು ಇವೆ. ಇದಕ್ಕೆಲ್ಲ ಡಾ. ಜಿ. ಪರಮೇಶ್ವರ್ ಉತ್ತರಿಸಬೇಕು. ಅಲ್ಲದೆ ಸಾವಿಗೆ ಐ. ಟಿ. ಅಥವಾ ಕೇಂದ್ರ ಸರ್ಕಾರ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಐಟಿ ಇಲಾಖೆಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮೇಲಾಗಿ ಪರಮೇಶ್ವರ ಅವರು ಬೆಂಗಳೂರಿನಲ್ಲಿಯೇ ಇದ್ದರು. ಆದರೂ ಅಧಿವೇಶನದಲ್ಲಿ ಏಕೆ ಭಾಗವಹಿಸಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಸದನದಲ್ಲಿ ಭಾಗವಹಿಸಿ, ಈ ಬಗ್ಗೆ ಮಾತಾಡಬಹುದಿತ್ತು. ರಮೇಶ ಸಾವಿನ ಬಗ್ಗೆ ನಾನಾ ಸಂಶಯಗಳಿವೆ. ಇದು ತನಿಖೆಯಿಂದ ಬೆಳಕಿಗೆ ಬರಲಿದೆ ಎಂದು ಹೇಳಿದ್ದಾರೆ.












Click it and Unblock the Notifications