ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ನಿಗೂಢ ಸಾವು: ಮೃತದೇಹ ತರಿಸುವಂತೆ ಕುಟುಂಬಸ್ಥರ ಮನವಿ
ದಾವಣಗೆರೆ, ಆಗಸ್ಟ್ 19: ಅವರಿಬ್ಬರು ವೃತ್ತಿಯಲ್ಲಿ ಎಂಜಿನಿಯರ್, ಸಂಪಾದನೆ ಮಾಡಬೇಕು, ಎಲ್ಲರಂತೆ ಬದುಕಬೇಕು ಎಂಬ ಕನಸು ಕಂಡಿದ್ದವರು. ಅಮೆರಿಕಾಕ್ಕೆ ಹೋಗಿ ನೆಲೆಸಿದ್ದರು. ತುಂಬು ಕುಟುಂಬಕ್ಕೆ ಒಂದು ಮುದ್ದಾದ ಮಗು ಇತ್ತು. ಕುಟುಂಬವೂ ಚೆನ್ನಾಗಿಯೇ ಇತ್ತು. ಅಷ್ಟರಲ್ಲಾಗಲೇ ಆ ಕುಟುಂಬಕ್ಕೆ ಬರಸಿಡಿಲು ಬಂದೆರಗಿದೆ. ಅಮೆರಿಕದಲ್ಲಿ ದಂಪತಿಗಳು, ಮಗು ಸೇರಿ ಮೂವರು ಮೃತಪಟ್ಟಿದ್ದಾರೆ ಎನ್ನುವ ಆಘಾತಕಾರಿ ಸುದ್ದಿ ಬಂದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಮೂವರು ಅನುಮಾನಾಸ್ಪದವಾಗಿ ಅಮೆರಿಕಾದಲ್ಲಿ ಸಾವನ್ನಪ್ಪಿದ್ದಾರೆ. ಕಳೆದ 9 ವರ್ಷಗಳ ಹಿಂದೆ ಅಮೆರಿಕಾಕ್ಕೆ ತೆರಳಿದ್ದ ದಂಪತಿ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನಲ್ಲಿ ವಾಸವಿದ್ದರು. ಯೋಗೇಶ್ ಹೊನ್ನಾಳ (37), ಪತ್ನಿ ಪ್ರತಿಭಾ ಹೊನ್ನಾಳ (35), ಪುತ್ರ ಯಶ್ ಹೊನ್ನಾಳ (6) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ನಾಗರಾಜಪ್ಪ ಎಂಬುವವರ ಪುತ್ರರಾದ ಯೋಗೇಶ್ ಹೊನ್ನಾಳ ಅವರು ಎಂಜಿನಿಯರ್ ಆಗಿದ್ದವರು. ಅವರ ಪತ್ನಿ ಪ್ರತಿಭಾ ಹೊನ್ನಾಳ್ ಸಹ ಎಂಜಿನಿಯರ್ ಪದವಿ ಮುಗಿಸಿ ಪತಿ ಜೊತೆ ಅಮೆರಿಕಾಕ್ಕೆ ತೆರಳಿದ್ದರು. ಈ ದಂಪತಿ ಪುತ್ರನ ಜೊತೆ ವಾಸವಾಗಿದ್ದವರು. ಇಬ್ಬರಿಗೆ ಉತ್ತಮ ಸಂಬಳ ಇತ್ತು. ದಂಪತಿ ಅನೋನ್ಯವಾಗಿದ್ದರು. ಆದ್ರೆ, ಅಮೆರಿಕಾದಲ್ಲಿ ಏನಾಯ್ತೋ ಏನೋ ಗೊತ್ತಿಲ್ಲ. ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರು ದಿಗ್ಭ್ರಮೆಗೆ ಒಳಗಾಗಿದ್ದಾರೆ.
ಸಾವಿಗೆ ನಿಖರ ಕಾರಣ ತಿಳಿಸಲು ಮನವಿ
ಯೋಗೇಶ್ ಅವರ ತಂದೆ ನಿವೃತ್ತ ತಹಸಿಲ್ದಾರ್ ಆಗಿದ್ದಾರೆ. ತಾಯಿ ಶೋಭಾ ಹಾಗೂ ತಮ್ಮ ಪುನೀತ್ ಅವರು ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಯೋಗೀಶ್, ಪತ್ನಿ ಪ್ರತಿಭಾ ಹಾಗೂ ಯಶ್ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾವಿನ ನಿಖರ ಕಾರಣ ತಿಳಿಸಬೇಕು ಹಾಗೂ ಮೃತದೇಹಗಳನ್ನು ಭಾರತಕ್ಕೆ ತರಿಸಿಕೊಡುವಂತೆ ಪೋಷಕರು ಮನವಿ ಮಾಡಿದ್ದಾರೆ.

ಕಣ್ಣೀರಿಟ್ಟ ಯೋಗೇಶ್ ತಾಯಿ
ಯೋಗೇಶ್ ತಾಯಿ ಅವರಿಗೆ ಈ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ತನ್ನ ಮಗ ಯೋಗೇಶ್, ಸೊಸೆ ಪ್ರತಿಭಾ ಹಾಗೂ ಮೊಮ್ಮಗ ಯಶ್ ಇನ್ನಿಲ್ಲ ಎಂಬುದನ್ನು ಕೇಳಿ ಅವರು ಆಘಾತಗೊಂಡಿದ್ದಾರೆ. ಯೋಗೇಶ್ ಅಮೆರಿಕಾಕ್ಕೆ ಹೋದ ಬಳಿಕ ಆಗಾಗ್ಗೆ ಫೋನ್ ಮಾಡುತ್ತಿದ್ದ. ಆರೋಗ್ಯ ವಿಚಾರಿಸುತ್ತಿದ್ದ. ಸೊಸೆ ಸಹ ಚೆನ್ನಾಗಿಯೇ ಮಾತನಾಡಿಸುತ್ತಿದ್ದಳು. ಮೊಮ್ಮಗನೂ ಸಹ ಅಷ್ಟೇ. ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಆಘಾತ ಆಗಿದೆ. ಹೇಗಾಯ್ತು ಅನ್ನೋದು ಗೊತ್ತಾಗುತ್ತಿಲ್ಲ. ಚೆನ್ನಾಗಿದ್ದ ಸಂಸಾರ ಇಲ್ಲ ಎಂದರೆ ಹೇಗೆ ಅರಗಿಸಿಕೊಳ್ಳುವುದು ಎಂದು ಯೋಗೇಶ್ ತಾಯಿ ಶೋಭಾ ಅವರು ಕಣ್ಣೀರಿಟ್ಟರು.
ಪುತ್ರ, ಸೊಸೆ, ಮೊಮ್ಮಗನ ಮೃತದೇಹ ದಾವಣಗೆರೆಗೆ ತರಿಸಿಕೊಡಿ. ಕೊನೆಯದಾಗಿ ಅವರ ಮುಖ ನೋಡುತ್ತೇನೆ. ಏನಾಯ್ತು ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ನೋವು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಮೃತದೇಹ ತವರಿಗೆ ತರಿಸುವಂತೆ ಆಗ್ರಹ:
ಯೋಗೇಶ್, ಪ್ರತಿಭಾ ಹಾಗೂ ಯಶ್‌ರ ಮೃತದೇಹ ದಾವಣಗೆರೆಗೆ ತರಿಸುವಂತೆ ಕುಟುಂಬಸ್ಥರು, ಸ್ನೇಹಿತರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೂವರ ಸಾವಿನ ಕುರಿತಂತೆ ತನಿಖೆ ಆಗಬೇಕು. ಅವರಿಗೇನಾಯ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಗೃಹ ಸಚಿವ ಜಿ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸರ್ಕಾರವು ಮೃತದೇಹ ತರಿಸಿಕೊಡಲು ಕ್ರಮ ಕೈಗೊಳ್ಳಬೇಕು. ಸಾವಿಗೆ ಕಾರಣ ಗೊತ್ತಾಗಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.












Click it and Unblock the Notifications