ಮೂರು ಕಂಬಗಳು ಮೈಮೇಲೆ ಬಿದ್ದರೂ ಅದೃಷ್ಟವಶಾತ್ ಬದುಕುಳಿದ ಯುವಕ: ಅಷ್ಟಕ್ಕೂ ನಡೆದಿದ್ದೇನು?
ದಾವಣಗೆರೆ, ಅಕ್ಟೋಬರ್ 05: ಆತನ ಮೈಮೇಲೆ ಮೂರು ವಿದ್ಯುತ್ ಕಂಬಗಳು ಬಿದ್ದವು. ನೀರು ತುಂಬಿದ್ದ ಹೊಂಡದಲ್ಲಿ ಯುವಕ ಬಿದ್ದಿದ್ದ. ಆತ ಬದುಕುಳಿದಿದ್ದೇ ಪವಾಡಸದೃಶವಾಗಿ. ದೊಡ್ಡದಾದ ಮೂರು ಕಂಬಗಳು ಬಿದ್ದರೂ ಅದೃಷ್ಟವಶಾತ್ ಯುವಕ ಬದುಕುಳಿದಿದ್ದಾನೆ.
ಈ ಘಟನೆ ನಡೆದಿರುವುದು ಹೊನ್ನಾಳಿ ತಾಲೂಕಿನ ಹರಳಹಳ್ಳಿ ಬಳಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ಯುವಕ ಅಪಾಯದಿಂದ ಪಾರಾಗಿದ್ದು, ಈಗ ಚೇತರಿಸಿಕೊಂಡಿದ್ದಾನೆ.

ಟ್ರ್ಯಾಕ್ಟರ್‌ನಲ್ಲಿ ವಿದ್ಯುತ್ ಕಂಬಳಗಳನ್ನು ತೆಗೆದುಕೊಂಡು ಹೋಗಲಾಗುತಿತ್ತು. ಈ ವೇಳೆ ಟ್ರ್ಯಾಕ್ಟರ್ ಗದ್ದೆಯಲ್ಲಿ ಪಲ್ಟಿಯಾಗಿದೆ. ಒಟ್ಟು ಐದು ವಿದ್ಯುತ್ ಕಂಬಗಳನ್ನು ತೆಗೆದುಕೊಂಡು ಹೋಗಲಾಗುತಿತ್ತು. ಈ ವೇಳೆ ಟ್ರ್ಯಾಕ್ಟರ್‌ನ ಹಿಂಬದಿಯಲ್ಲಿ ಯುವಕನು ಕುಳಿತಿದ್ದ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗದ್ದೆಗೆ ನುಗ್ಗಿತು. ಮಾತ್ರವಲ್ಲ, ಪಲ್ಟಿಯಾಯಿತು. ಇದರಿಂದಾಗಿ ಅಲ್ಲೇ ಇದ್ದ ಯುವಕನು ಕೆಳಗಡೆ ಬಿದ್ದಿದ್ದಾನೆ. ಟ್ರ್ಯಾಕ್ಟರ್ ನಲ್ಲಿದ್ದ ಕಂಬಗಳು ಆತನ ಮೇಲೆ ಬಿದ್ದಿವೆ.
ತಲೆಮೇಲೆ ವಿದ್ಯುತ್ ಕಂಬ ಬಿದ್ದಿದ್ದರೆ ಅನಾಹುತವಾಗುತಿತ್ತು. ಅದೃಷ್ಟವಶಾತ್ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಯುವಕನ ಮೈಮೇಲೆ ಕಂಬಗಳು ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಆತಂಕಗೊಂಡಿದ್ದ ಯುವಕ ಈಗ ಸುಧಾರಿಸಿಕೊಂಡಿದ್ದಾನೆ.
ಕೆಸರು ಗದ್ದೆಯಲ್ಲಿ ಯುವಕ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿದರು. ವಿದ್ಯುತ್ ಕಂಬಗಳನ್ನು ತೆಗೆದು ಯುವಕನನ್ನು ಮೇಲಕ್ಕೆತ್ತಿದರು. ಆತನನ್ನು ಕೂಡಲೇ ರಕ್ಷಿಸುವ ಮೂಲಕ ಜೀವ ಉಳಿಸಿದರು. ಹೊನ್ನಾಳಿ
ತಾಲೂಕು ಆಸ್ಪತ್ರೆಯಲ್ಲಿ ಯುವಕ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಟ್ರ್ಯಾಕ್ಟರ್‌ನಲ್ಲಿ ವಿದ್ಯುತ್ ಕಂಬ ಕೊಂಡೊಯ್ಯುವಾಗ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರಣಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಚಾಲಕನೂ ಸಹ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications