ಚನ್ನಗಿರಿಯಲ್ಲಿ ಪಕ್ಷೇತರನಾಗಿ ಮಾಡಾಳ್ ಪುತ್ರ ಚುನಾವಣಾ ಕಣಕ್ಕೆ!
ದಾವಣಗೆರೆ, ಏಪ್ರಿಲ್ 16; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಎರಡು ಪಟ್ಟಿ ಬಿಡುಗಡೆಯಾಗಿದೆ. ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನ ಟಿಕೆಟ್ ಕೈ ತಪ್ಪಿದವರ ಮುಂದಿನ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರವೂ ಸೇರಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಕೈತಪ್ಪಿದೆ. ಪುತ್ರನ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅವರು ಶನಿವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪ್ರಕರಣ ಬೆಳಕಿಗೆ ಬಂದಾಗಲೇ ಅವರಿಗೆ ಟಿಕೆಟ್ ಕೈತಪ್ಪಲಿ ಎಂಬ ಸುದ್ದಿ ಹಬ್ಬಿತ್ತು. ಆದರೆ ಅವರ ಮತ್ತೊಬ್ಬ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಈ ಬಾರಿಯ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಮಾಡಾಳ್ ಮಲ್ಲಿಕಾರ್ಜುನ್ ತಯಾರಿ ನಡೆಸಿದ್ದರು. ಚುನಾವಣಾ ದಿನಾಂಕ ಘೋಷಣೆಯಾಗದಿದ್ದರೂ ಸಹ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು. ಆದರೆ ಬಿಜೆಪಿ ಎಚ್. ಎಸ್. ಶಿವಕುಮಾರ್‌ಗೆ ಟಿಕೆಟ್ ನೀಡಿದೆ.
ಬೆಂಬಲಿಗರ ಸಭೆ; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಶನಿವಾರ ಜೈಲಿನಿಂದ ಬಿಡುಗಡೆಯಾಗುತ್ತಲೇ ಭಾನುವಾರ ಮಾಡಾಳ್ ಮಲ್ಲಿಕಾರ್ಜುನ್ ಚನ್ನಗಿರಿಯ ಚನ್ನೇಶಪುರ ಗ್ರಾಮದಲ್ಲಿ 'ಸಂಕಲ್ಪ ಸಭೆ'ಯನ್ನು ಕರೆದಿದ್ದರು. ಈ ಸಭೆಯಲ್ಲಿ ಚನ್ನಗಿರಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ತೀರ್ಮಾನ ಕೈಗೊಂಡಿದ್ದಾರೆ. ಇದರಿಂದಾಗಿ ಚನ್ನಗಿರಿ ಕ್ಷೇತ್ರದ ಚುನಾವಣಾ ಕಣವೇ ಬದಲಾಗಿದೆ.

ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿಗರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗುವ ಘೋಷಣೆ ಮಾಡಿದ್ದಾರೆ. ಏಪ್ರಿಲ್ 20ರ ತನಕ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ಚನ್ನಗಿರಿಯಲ್ಲಿ ಎಚ್. ಎಸ್. ಶಿವಕುಮಾರ್ ಬಿಎಪಿ, ಬಸವರಾಜು ವಿ. ಶಿವಗಂಗಾ ಕಾಂಗ್ರೆಸ್ ಮತ್ತು ಯೋಗೀಶ್ ಜೆಡಿಎಸ್ ಅಭ್ಯರ್ಥಿ. ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನ; ಈ ಬಾರಿಯ ಚುನಾವಣೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. ಅದರಲ್ಲೂ ಪ್ರಶಾಂತ್ ಮಾಡಾಳ್ ಲಂಚ ಪ್ರಕರಣ ಬೆಳಕಿಗೆ ಬಂದ ಬಳಿಕ ತನಗೆ ಅಲ್ಲದಿದ್ದರೆ ಪುತ್ರನಿಗೆ ಟಿಕೆಟ್ ನೀಡಿ ಎಂದು ಪಕ್ಷದ ನಾಯಕರ ಬಳಿ ಮನವಿ ಮಾಡಿದ್ದರು. ಮಾಡಾಳ್ ಮಲ್ಲಿಕಾರ್ಜುನ್ ಪರವಾದ ಪೋಸ್ಟರ್‌ಗಳನ್ನು ಕ್ಷೇತ್ರದಲ್ಲಿ ಹಾಕಲಾಗಿತ್ತು. ಅವರು ಸಹ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಅಂತಿಮ ಹಂತದಲ್ಲಿ ಎಚ್. ಎಸ್. ಶಿವಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು.
ಎಚ್. ಎಸ್. ಶಿವಕುಮಾರ್ ತುಮ್ಕೋಸ್ ಮಾಜಿ ಅಧ್ಯಕ್ಷರು. 2013ರಲ್ಲಿ ಮಾಜಿ ಮುಖ್ಯಮಂತ್ರಿ ಕಟ್ಟಾ ಬೆಂಬಲಿಗ ಮಾಡಾಳ್ ವಿರೂಪಾಕ್ಷಪ್ಪ ಕೆಜೆಪಿಯಿಂದ ಚನ್ನಗಿರಿಯಲ್ಲಿ ಕಣಕ್ಕಿಳಿದಿದ್ದರು. ಆಗ ಎಚ್. ಎಸ್. ಶಿವಕುಮಾರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 4,526 ಮತಗಳನ್ನು ಪಡೆದಿದ್ದರು. ಕೆಜೆಪಿಯ ಮಾಡಾಳ್ ವಿರೂಪಾಕ್ಷಪ್ಪ 51,582 ಮತಗಳನ್ನು ಪಡೆದಿದ್ದರು. ಕೆಜೆಪಿ, ಬಿಜೆಪಿ ಗೊಂದಲದ ಕಾರಣ ಕಾಂಗ್ರೆಸ್‌ನ ವಡ್ನಾಳ್ ರಾಜಣ್ಣ 53,355 ಮತಮಗಳನ್ನು ಪಡೆದು ಜಯಗಳಿಸಿದ್ದರು.
ಈ ಬಾರಿ ಮಾಡಾಳ್ ಕುಟುಂಬದ ಯಾರಿಗೂ ಸಹ ಟಿಕೆಟ್ ಸಿಕ್ಕಿಲ್ಲ. ಆದ್ದರಿಂದ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗುವ ಮೂಲಕ ಚನ್ನಗಿರಿಯಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ.












Click it and Unblock the Notifications