ದಾವಣಗೆರೆ; ಹಳೇ ಪ್ರವಾಸಿ ಮಂದಿರದಲ್ಲಿ ಅಡಗಿ ಕುಳಿತಿದ್ದ ಚಿರತೆ
ದಾವಣಗೆರೆ, ಅಕ್ಟೋಬರ್ 10: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಹಳೇ ಪ್ರವಾಸಿ ಮಂದಿರದಲ್ಲಿ ಚಿರತೆಯೊಂದು ಅವಿತು ಕುಳಿತಿದ್ದು, ಅದರ ಘರ್ಜನೆ ಕೇಳಿ ಪ್ರವಾಸಿಗರು, ಸ್ಥಳೀಯರು ಬೆಚ್ಚಿಬಿದ್ದ ಸಂಗತಿ ನಡೆದಿದೆ.
ಸೂಳೆಕೆರೆಯ ಹಳೆ ಪ್ರವಾಸಿ ಮಂದಿರದೊಳಗೆ ಚಿರತೆಯೊಂದು ಅವಿತು ಕುಳಿತಿದೆ. ಈ ಪ್ರವಾಸಿ ಮಂದಿರ ಕೆಲವು ಸಮಯದಿಂದ ಬಳಕೆಯಲ್ಲಿರಲಿಲ್ಲ. ಇದೇ ವೇಳೆ ನೆರಳನ್ನು ಹುಡುಕಿಕೊಂಡು ಕೆಲವು ಪ್ರವಾಸಿಗರು ಈ ಮಂದಿರದತ್ತ ತೆರಳಿದ್ದಾರೆ. ಪ್ರವಾಸಿ ಮಂದಿರದ ಒಳಗಿನಿಂದ ಇದ್ದಕ್ಕಿದ್ದಂತೆ ಚಿರತೆ ಘರ್ಜಿಸುವ ಸದ್ದು ಕೇಳಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಪ್ರವಾಸಿಗರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅವಿತಿದ್ದ ಚಿರತೆ ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಕಿಟಕಿಗಳಿಂದ ಪಟಾಕಿ ಸಿಡಿಸಿದ್ದರಿಂದ ಪಟಾಕಿ ಶಬ್ದಕ್ಕೆ ಹೆದರಿದ ಚಿರತೆಯು ಪ್ರವಾಸಿ ಮಂದಿರದ ಮುಂಬಾಗಿಲಿಂದ ಹಾರಿ ಗುಡ್ಡದ ಕಡೆಗೆ ಓಡಿದೆ. ಆತಂಕಗೊಂಡಿದ್ದ ಸ್ಥಳೀಯರು ಚಿರತೆ ಕಾಡಿನೆಡೆ ಓಡಿದ್ದನ್ನು ಕಂಡು ನಿಟ್ಟುಸಿರುಬಿಟ್ಟಿದ್ದಾರೆ.

Recommended Video
ಚಿರತೆ ನೋಡಲು ಜನರು ಸೇರಿದ್ದು, ನೂಕುನುಗ್ಗಲು ಉಂಟಾಗಿತ್ತು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.












Click it and Unblock the Notifications