ಹೊನ್ನಾಳಿ: ಹೆಚ್ಚುತ್ತಲೇ ಇದೆ ಚಂದ್ರಶೇಖರ್ ಸಾವಿನ ನಿಗೂಢತೆ, ಹಲವು ಶಂಕೆ ವ್ಯಕ್ತ
ದಾವಣಗೆರೆ, ನವೆಂಬರ್, 07: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣದ ನಿಗೂಢತೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಅಪಘಾತವೋ, ಕೊಲೆಯೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ದೊರಕುತ್ತಿಲ್ಲ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ್ ಸಾವಿನ ಹಿಂದೆ ಸಲಿಂಗ ಕಾಮವಿರಬಹುದು ಎನ್ನುವ ಶಂಕೆ ಹರಿದಾಡತೊಡಗಿದೆ.
ಇದಕ್ಕೆ ಪ್ರಮುಖ ಕಾರಣ ಶಿವಮೊಗ್ಗದಲ್ಲಿ ಪೊಲೀಸರ ವಶದಲ್ಲಿದ್ದ ಕಿರಣ್ ಎಂಬಾತನ ಚಲನವಲನಗಳಾಗಿವೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಕಿರಣ್ ಸರ್ಕಾರಿ ನೌಕರನಾಗಿದ್ದು, ಈತನ ನಡವಳಿಕೆ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಹಾಗಾಗಿಯೇ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಶಂಕೆ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿದೆ. ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಅಕ್ಟೋಬರ್ 30ರಂದು ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಹೋಗಿದ್ದರು. ಅಲ್ಲಿಂದ ಕಿರಣ್ ಜೊತೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಗೆ ತೆರಳಿದ್ದರು. ಬಳಿಕ ಕಿರಣ್ ಜೊತೆಗೆ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ.
ಅಂದು ಶಿವಮೊಗ್ಗದಿಂದ ಹೊನ್ನಾಳಿಗೆ ಬರುವ ಮಾರ್ಗದ ಮಧ್ಯೆಯೇ ಹೆಚ್. ಕಡದಕಟ್ಟೆ ಬಳಿ ನಾಲೆಯಲ್ಲಿ ಕ್ರೀಸ್ಟಾ ಕಾರು ಬಿದ್ದಿತ್ತು ಎನ್ನುವ ಮಾಹಿತಿ ಬಹಿರಂಗಗೊಂಡಿತ್ತು. ನಾಲ್ಕು ದಿನಗಳ ಬಳಿಕ ಕಾರಿನ ಜೊತೆಗೆ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಕಾರು ವೇಗವಾಗಿ ಚಲಿಸಿದ ಕಾರಣ ಅಪಘಾತ ಸಂಭವಿಸಿರಬಹುದು ಎಂಬ ಸಂದೇಹ ಪೊಲೀಸರದ್ದು ಆದರೆ, ರೇಣುಕಾಚಾರ್ಯ, ರಮೇಶ್ ಕುಟುಂಬ ಇದೊಂದು ವ್ಯವಸ್ಥಿತ ಕೊಲೆ ಎಂದು ಹೇಳುತ್ತಿದ್ದಾರೆ.

ತುಂಗಾ ನಾಲೆಯಲ್ಲಿ ಮೃತದೇಹ ಪತ್ತೆ
ಚಂದ್ರಶೇಖರ್ ಶ್ವಾಸಕೋಶದಲ್ಲಿ ನೀರು ಪತ್ತೆ ಆಗಿದೆ. ಹಾಗಾಗಿ ಕಾಲುವೆಗೆ ಬಿದ್ದ ಬಳಿಕ ಚಂದ್ರಶೇಖರ್ ನೀರು ಕುಡಿದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಮತ್ತೊಂದೆಡೆ ಚಂದ್ರಶೇಖರ್ ಕಟ್ಟಿ ಹಾಕಿ ಅಪಘಾತ ಎಸಗಿದಂತೆ ನಾಟಕವಾಡಿರಬದುದು ಎನ್ನುವ ಶಂಕೆಯೂ ಎದ್ದಿದೆ. ಇನ್ನು ಪೊಲೀಸರು ಡಯಾಟಮ್ ಪರೀಕ್ಷೆಯ ಮೊರೆ ಹೋಗಿದ್ದು, ನಾಲೆಯಲ್ಲಿನ ನೀರು ಹಾಗೂ ಚಂದ್ರಶೇಖರ್ ಮೃತದೇಹದಲ್ಲಿದ್ದ ನೀರು ಒಂದೇ ಇದೆಯಾ? ಬೇರೆ ನೀರು ಕುಡಿದಿರಬಹುದಾ? ಮದ್ಯಪಾನ ಇಲ್ಲವೇ ಡ್ರಗ್ಸ್ ಸೇವಿಸಿರಬಹುದಾ? ಎಂಬ ಇತ್ಯಾದಿ ವಿಚಾರಗಳ ಕುರಿತಂತೆ ಟೆಸ್ಟ್ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ದಿನದಿಂದ ದಿನಕ್ಕೆ ಚಂದ್ರಶೇಖರ್ ಸಾವಿನ ನಿಗೂಢತೆಯ ಕೌತುಕತೆ ಹೆಚ್ಚಾಗುತ್ತಲೇ ಇದೆ. ಮರಣೋತ್ತರ ಪರೀಕ್ಷೆ, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಸಾವಿಗೆ ನಿಖರವಾದ ಕಾರಣ ಏನೆಂಬುದು ಗೊತ್ತಾಗುವ ಸಾಧ್ಯತೆ ಇದೆ.

ಆದಷ್ಟು ಬೇಗ ನಿಖರತೆ ನೀಡಲು ಒತ್ತಾಯ
ಹೊನ್ನಾಳಿಯ ಹಿರೇಕಲ್ಮಠದಲ್ಲಿನ ಶಾಸಕ ಎಂ. ಪಿ. ರೇಣುಕಾಚಾರ್ಯರ ನಿವಾಸಕ್ಕೆ ಬಿಜೆಪಿ ಯುವ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಪುತ್ರ ಬಿ. ವೈ. ವಿಜಯೇಂದ್ರ ಭೇಟಿ ನೀಡಿದ್ದರು. ಈ ವೇಳೆ ಬಿ. ವೈ. ವಿಜಯೇಂದ್ರ ಅವರು ರೇಣುಕಾಚಾರ್ಯರಿಗೆ ಸಾಂತ್ವನ ಹೇಳಿದರು. ಘಟನೆಯ ಕುರಿತಂತೆ ಮಾಹಿತಿ ಪಡೆದಿದ್ದು, ರೇಣುಕಾಚಾರ್ಯರ ಪತ್ನಿ ಸುಮಾ, ರಮೇಶ್ ಕುಟುಂಬ ಹಾಗೂ ಸಂಬಂಧಿಕರಿಗೂ ವಿಜಯೇಂದ್ರ ಅವರು ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ವಿಜಯೇಂದ್ರ, ಚಂದ್ರಶೇಖರ್ ಸಾವಿನ ಕುರಿತಾಗಿ ತನಿಖೆ ನಡೆಯುತ್ತಿದೆ. ಬೇರೆ ಬೇರೆ ವಿಚಾರಗಳು ಈ ಮಧ್ಯೆ ಕೇಳಿ ಬರಲಾರಂಭಿಸಿವೆ. ಪೊಲೀಸ್ ಹಿರಿಯ ಅಧಿಕಾರಿಗಳು ಆದಷ್ಟು ಬೇಗ ಪ್ರಕರಣದ ಕುರಿತಂತೆ ಸತ್ಯಾಸತ್ಯತೆ, ನಿಖರತೆಯನ್ನು ಕುಟುಂಬಕ್ಕೆ ನೀಡಬೇಕು. ಚಂದ್ರಶೇಖರ್ ಸ್ಥಾನವನ್ನು ಯಾರೂ ಸಹ ರೇಣುಕಾಚಾರ್ಯರ ಕುಟುಂಬಕ್ಕೆ ತುಂಬಲು ಸಾಧ್ಯವಿಲ್ಲ ಎಂದು ಹೇಳಿದರು.

ಶಾಸಕರ ನಿವಾಸಕ್ಕೆ ಭೇಟಿ ನೀಡಲಿರೋ ಸಿಎಂ
ಏನಾಗಿದೆ, ಯಾಕಾಗಿದೆ? ಏನಾಗಿರಬಹುದು ಎಂಬುದು ಸಮಗ್ರ ತನಿಖೆಯ ಬಳಿಕ ಹೊರಬರಲಿದೆ. ಪೊಲೀಸರ ತನಿಖೆ ವಿಚಾರ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ನಾನು ಇಷ್ಟಪಡುವುದಿಲ್ಲ. ಕಳೆದ ಮೂರರಿಂದ ನಾಲ್ಕು ದಿನಗಳಿಂದಲೂ ರೇಣುಕಾಚಾರ್ಯರ ಹೇಳಿಕೆಗಳನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅತಿ ವೇಗದಲ್ಲಿ ತನಿಖೆ ಮುಗಿಯಬೇಕು. ಇದರಿಂದ ಸರಿಯಾದ ಉತ್ತರ ಸಿಗಬೇಕು ಎಂದಷ್ಟೇ ಹೇಳುತ್ತೇನೆ ಎಂದು ತಿಳಿಸಿದರು. ಇನ್ನು ರೇಣುಕಾಚಾರ್ಯ ನಿವಾಸಕ್ಕೆ ನವೆಂಬರ್ 9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಲಿದ್ದು, ರೇಣುಕಾಚಾರ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಮುಖ್ಯಮಂತ್ರಿಗಳ ಪರಿಷ್ಕೃತ ಪ್ರವಾಸ ಪಟ್ಟಿಯಲ್ಲಿ ಈ ಬಗ್ಗೆ ಮಾಹಿತಿ ಬಂದಿದ್ದು, ನವೆಂಬರ್ 8ರಂದು ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಅಂದು ಬೆಳಗ್ಗೆ 9:45ಕ್ಕೆ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ನಿಂದ ಹೊನ್ನಾಳಿಗೆ ತೆರಳಲಿರುವ ಬಸವರಾಜ ಬೊಮ್ಮಾಯಿ ಅವರು, ಹೊನ್ನಾಳಿಯ ಹೆಚ್. ಕಡದಕಟ್ಟೆಯ ಹೆಲಿಪ್ಯಾಡ್‌ಗೆ ಹೋಗಲಿದ್ದಾರೆ. ಅಲ್ಲಿಂದ ಸುಮಾರು 10:10ರ ಸುಮಾರಿಗೆ ರೇಣುಕಾಚಾರ್ಯರ ನಿವಾಸಕ್ಕೆ ತೆರಳಲಿದ್ದಾರೆ. ಬಳಿಕ 11 ಗಂಟೆಗೆ ಹೆಚ್. ಕಡದಕಟ್ಟೆಯ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಬೆಳಗಾವಿ ಜಿಲ್ಲೆಯ ರಾಯಭಾಗಕ್ಕೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

ಶಾಸಕ ನಿವಾಸದಲ್ಲಿ ನೆರೆದ ಜನಸಾಗರ
ರೇಣುಕಾಚಾರ್ಯರ ನಿವಾಸಕ್ಕೆ ವಿವಿಧ ಗ್ರಾಮಗಳಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಮಹಿಳಾ ಸಂಘಟನೆಗಳು, ವಿವಿಧ ಸಮಾಜದ ಮುಖಂಡರು, ಪದಾಧಿಕಾರಿಗಳು ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ಅಡುಗೆ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಸಹ ಆಗಮಿಸಿ ಶಾಸಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಕಳೆದ ಒಂದು ವಾರದಿಂದ ಕಂಗೆಟ್ಟಿದ್ದ ರೇಣುಕಾಚಾರ್ಯ ಭಾನುವಾರ ಮತ್ತು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೊನ್ನಾಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಹಕ್ಕು ಪತ್ರವನ್ನು ವಿತರಿಸಿದ್ದಾರೆ.












Click it and Unblock the Notifications