ತೊಟ್ಟಿಲು ಕಾರ್ಯಕ್ರಮದಲ್ಲಿ ಊಟ ಸೇವಿಸಿ ಆರುಂಡಿ ಗ್ರಾಮದ 80 ಜನ ಅಸ್ವಸ್ಥ
ದಾವಣಗೆರೆ, ನವೆಂಬರ್, 07: ತೊಟ್ಟಿಲು ಕಾರ್ಯಕ್ರಮದ ವೇಳೆ ಆಹಾರ ಸೇವಿಸಿ 80ಕ್ಕೂ ಹೆಚ್ಚಿನ ಜನರು ಅಸ್ವಸ್ಥಗೊಂಡ ಘಟನೆ ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದಿದೆ. ಈ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿತ್ತು. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸದ್ಯ ವಿಷಯುಕ್ತ ಆಹಾರ ಸೇವಿಸಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದ ಕಬ್ಬಾರ ರಂಗಪ್ಪ ಎಂಬುವವರ ಮನೆಯಲ್ಲಿ ತೊಟ್ಟಿಲು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಂಬಂಧಿಕರು, ಸ್ಥಳೀಯರು ಸೇರಿದಂತೆ ನೂರಾರು ಜನರು ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಸಿಹಿ ಊಟ ಸೇವಿಸಿದ್ದು, ಈ ಪೈಕಿ 80ಕ್ಕೂ ಹೆಚ್ಚು ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿತು. ನಂತರ ಒಬ್ಬೊಬ್ಬರೇ ಅಸ್ವಸ್ಥಗೊಂಡಿದ್ದಾರೆ. ಗ್ರಾಮದ ಹಿರಿಯರು, ಕಿರಿಯರು, ಯುವಕರು, ಯುವತಿಯರು, ಅಕ್ಕಪಕ್ಕದ ಮನೆಯವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು.

80ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಏರುಪೇರು
ಅಸ್ವಸ್ಥಗೊಂಡವರನ್ನು ಕೂಡಲೇ ನ್ಯಾಮತಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. 80ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅಸ್ವಸ್ಥಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡರ ಕಿರಿಯ ಪುತ್ರ ಸುರೇಂದ್ರಗೌಡರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯವನ್ನು ವಿಚಾರಿಸಿದರು.
ಬಳಿಕ ದೂರವಾಣಿ ಮೂಲಕ ವೈದ್ಯರ ಜೊತೆ ಮಾತುಕತೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು. ಹೆಚ್ಚಿನ ಜನರು ಅಸ್ವಸ್ಥರಾದ ಕಾರಣ ಅನಾನುಕೂಲ ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾ ಆಸ್ಪತ್ರೆ ಮತ್ತು ಹೊನ್ನಾಳಿ ಆಸ್ಪತ್ರೆಗೆ ಕಳುಹಿಸುಕೊಡುವಂತೆ ಸಲಹೆ ನೀಡಿದರು.

ಇನ್ನು ಹೊನ್ನಾಳಿ ಆಸ್ಪತ್ರೆಯ ವೈದ್ಯರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಅಸ್ವಸ್ಥಗೊಂಡಿರುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ ಎಂದಿದ್ದಾರೆ.












Click it and Unblock the Notifications