Get Updates
Get notified of breaking news, exclusive insights, and must-see stories!

ಹಿಜಾಬ್ ವಿವಾದ; ದಾವಣಗೆರೆ ಎಸ್‌ಪಿ ಖಡಕ್‌ ಸೂಚನೆ

ದಾವಣಗೆರೆ, ಫೆಬ್ರವರಿ 10; " ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಟ್ಸಪ್, ಫೇಸ್ ಬುಕ್, ಇನ್ ಸ್ಟ್ರಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪೋಸ್ಟರ್ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಬಾರದು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ನಡುವಿನ ಸಮರ ತಾರಕಕ್ಕೇರಿದ್ದು, ಹರಿಹರ, ದಾವಣಗೆರೆ, ಹೊನ್ನಾಳಿ, ಚನ್ನಗಿರಿ ಹಾಗೂ ಮಲೇಬೆನ್ನೂರಿನಲ್ಲಿ‌ ಕೆಲ ಅಹಿತಕರ ಘಟನೆ ನಡೆದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ಗುಂಪುಗಾರಿಕೆ, ಗಲಾಟೆ, ದೊಂಬಿ ಸೇರಿದಂತೆ ಸಮಾಜದಲ್ಲಿ ಅಹಿತಕರ ಘಟನೆಗೆ ಪ್ರಚೋದನೆ ನೀಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ರೌಡಿಶೀಟರ್ ಹಾಗೂ ಕಮ್ಯುನಲ್ ಗೂಂಡಾ ಶೀಟರ್ ಗಳನ್ನು ತೆರೆಯಲಾಗುವುದು. ಒಂದು ವೇಳೆ ಇದರ ಬಗ್ಗೆ ಮಾಹಿತಿ ಇದ್ದಲ್ಲಿ ಕಾನೂನು ಕೈಗೆತ್ತಿಕೊಳ್ಳದೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಸಿ. ಬಿ. ರಿಷ್ಯಂತ್ ಮನವಿ ಮಾಡಿದ್ದಾರೆ.

Hijab Issue Provocative Social Media Post Davanagere SP Warned

ಗುಂಪು ಘರ್ಷಣೆ, ಮೂವರಿಗೆ ಗಾಯ; ಹಿಜಾಬ್ ಹಾಗೂ ಕೇಸರಿ ಶಾಲು ಸಮರ ತಾರಕಕ್ಕೇರುತ್ತಿದ್ದು, ಅಡಿಕೆ ನಾಡು ಚನ್ನಗಿರಿಗೂ ಕಾಲಿಟ್ಟಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದ್ದು, ಮೂವರು ಗಾಯಗೊಂಡ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಲಾಗಿದೆ ಎಂದು ಆರೋಪಿಸಿ ಒಂದು ಕೋಮಿನ ಗುಂಪು ಯುವಕನ ಮನೆ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದೆ. ಈ ವೇಳೆ ವೃದ್ದೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯೊಂದಕ್ಕೆ ನುಗ್ಗಿದ ವೇಳೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ. ಗಲಾಟೆ ವೇಳೆ ವೃದ್ದೆ ಗಂಭೀರವಾಗಿ ಗಾಯಗೊಂಡಿದ್ದು, ಹಲ್ಲೆಗೊಳಗಾದವರನ್ನು ಚನ್ನಗಿರಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

chhanagiri

ನಂತರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ನಂತರ ಎರಡು ಕೋಮಿನ ಮುಖಂಡರನ್ನು ಕರೆಸಿ ಸಭೆ ನಡೆಸಿದ ಪೊಲೀಸರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ‌.

ಯುವಕನ ಮೇಲೆ ಹಲ್ಲೆ, ಇರಿತ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ಅನ್ಯ ಕೋಮಿನ ಯುವಕರ ಗುಂಪೊಂದು ಯುವಕನಿಗೆ ಸ್ಕ್ರೂ ಡ್ರೈವರ್ ನಿಂದ ತಿವಿದಿದ್ದು, ಯುವಕ ಅಪಾಯದಿಂದ ಪಾರಾಗಿದ್ದಾನೆ. 20 ವರ್ಷದ ದಿಲೀಪ್ ಮಾಳಗಿ ಗಾಯಗೊಂಡ ಯುವಕ. ಮಲೇಬೆನ್ನೂರಿನ ಇಂದಿರಾನಗರ ಜ್ಯೋತಿ ಟಾಕೀಸ್ ಹಿಂಭಾಗದ ಜಿಗಳಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ.

ಫೇಸ್ ಬುಕ್ ನಲ್ಲಿ ಹಿಜಾಬ್ ಬಗ್ಗೆ ಹಾಕಿದ್ದ ದಿಲೀಪ್, ಜೈನ ಸಮುದಾಯದವರು ಗೊಮ್ಮಟೇಶ್ವರನನ್ನು ಆರಾಧಿಸುತ್ತಾರೆ. ಜೈನ ಸಮುದಾಯದ ವಿದ್ಯಾರ್ಥಿಗಳು ಗೊಮ್ಮಟೇಶ್ವರನ ಹಾಗೆ ಕಾಲೇಜಿಗೆ ಬರಬೇಕಾಗುತ್ತದೆ ಎಂಬ ಮೆಸೇಜ್ ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪೊಂದು ಪ್ರಶ್ನಿಸಿದೆ.

male bennuru

ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ದಿಲೀಪ್ ಗೆ ಸ್ಕ್ರೂ ಡ್ರೈವರ್ ನಿಂದ ಹೊಟ್ಟೆಗೆ ಚುಚ್ಚಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಯುವಕ ಡಿಸ್ಚಾರ್ಜ್ ಆಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಮಲೇಬೆನ್ನೂರಿನಲ್ಲಿ ಜನರು ಜಮಾಯಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ ವಿಸ್ತರಣೆ; ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಾವಣಗೆರೆ ಮಹಾನಗರಪಾಲಿಕೆ ಹಾಗೂ ಹರಿಹರ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆಯನ್ನು ಫೆಬ್ರರಿ 11ರ ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಣೆಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆದರೆ ಕೆಲವು ವಿದ್ಯಾರ್ಥಿಗಳು, ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದ್ದು, ದಾವಣಗೆರೆ ನಗರದಲ್ಲಿ ಪರ ಮತ್ತು ವಿರೋಧದ ಪ್ರತಿಭಟನೆಗಳು ಜರುಗಿವೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹಿತದೃಷ್ಟಿಯಿಂದ ದಾವಣಗೆರೆ ಮಹಾನಗರಪಾಲಿಕೆ ಹಾಗೂ ಹರಿಹರ ತಾಲ್ಲೂಕಿನಾದ್ಯಂತ ಫೆ. 11 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಿತ ವ್ಯಾಪ್ತಿಯಲ್ಲಿ ಕಾನೂನು ಭಂಗ ಉಂಟುಮಾಡುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಯಾವುದೇ ಮೆರವಣಿಗೆ, ಸಭೆ, ಸಮಾರಂಭ, ವಿಜಯೋತ್ಸವ, ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಲಾಗಿದೆ. ಶಸ್ತ್ರ, ದೊಣ್ಣೆ, ಕತ್ತಿ, ಕಲ್ಲು, ಚಾಕು ಮತ್ತಿತರೆ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆ ಉಂಟುಮಾಡುವ ಯಾವುದೇ ವಸ್ತುಗಳು, ಸ್ಫೋಟಕ ವಸ್ತುಗಳನ್ನು ಒಯ್ಯುವುದು ಅಥವಾ ಶೇಖರಿಸುವುದನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಮಾಡುವುದು, ಪ್ರಚೋದಿಸಬಹುದಾದಂತಹ ಬಹಿರಂಗ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು ಸಂಕೇತಗಳನ್ನು, ಭಿತ್ತಿಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದೆ.

ಯಾವುದೇ ಖಾಸಗಿ, ಸಾರ್ವಜನಿಕ ಆಸ್ತಿಗಳನ್ನು ಹಾನಿಗೊಳಿಸುವ, ವಿರೂಪಗೊಳಿಸುವ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿ ಜಾತಿ, ಧರ್ಮ, ಕೋಮು, ಪಂಥಗಳಿಗೆ ಅಥವಾ ಸಾರ್ವಜನಿಕ ನೈಜಕತೆಗೆ ಬಾಧಕ ಉಂಟು ಮಾಡಬಹುದಾದಂತಹ ಚಟುವಟುಕೆಗಳನ್ನು ನಿಷೇಧಿಸಿದೆ. ಸರ್ಕಾರಿ ಸಂಸ್ಥೆಗಳು, ಸಂಘಟನೆಗಳು, ಹಾಗೂ ಕಾರ್ಯನಿರತ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿಂದಿಸುವಂತಹ ಅವಹೇಳನಕಾರಿಯಾದಂತಹ ಯಾವುದೇ ಘೋಷಣೆ, ಭಾಷಣ, ಪ್ರಕಟಣೆ, ಅವಾಚ್ಯ ಶಬ್ದಗಳ ಬಳಕೆ, ಪ್ರಚೋದನಾಕಾರಿ ಭಾಷಣ, ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ. ಈಗಾಗಲೆ ಸರ್ಕಾರದ ಕಾರ್ಯಕ್ರಮಗಳು ನಿಗದಿಯಾಗಿದ್ದಲ್ಲಿ ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆ ಮುಂದುವರೆಯತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+