ವಚನಾನಂದ ಶ್ರೀಗಳಿಗೆ ಅವಹೇಳನ ಮಾಡುತ್ತಿರುವುದು ಬೇಸರವಾಗಿದೆ-ಹೆಚ್. ಎಸ್. ನಾಗರಾಜ್
ದಾವಣಗೆರೆ, ಡಿಸೆಂಬರ್ 14: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಎರಡು ಪೀಠಗಳು ಒಂದಾದರೆ ಮಾತ್ರ 2 ಎ ಮೀಸಲಾತಿ ಪಡೆಯಲು ಸಾಧ್ಯ. ಆಗ ಸರ್ಕಾರದ ಮೇಲೆ ಒತ್ತಡ ಹೇರಿ ಬೇಡಿಕೆ ಈಡೇರಿಸಿಕೊಳ್ಳಲು ಸಹಾಯ ಆಗುತ್ತದೆ. ಟೀಕೆ ಮಾಡುವುದನ್ನು ಬಿಟ್ಟು 2 ಎ ಮೀಸಲಾತಿಗೋಸ್ಕರ ಸಂಘಟಿತ ಹೋರಾಟ ನಡೆಯಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡ ಹೆಚ್. ಎಸ್. ನಾಗರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ 2 ಎ ಮೀಸಲಾತಿಗೆ ಸಂಬಂಧಿಸಿದಂತೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಸ್ವಾಮೀಜಿಗಳ 2ಎ ಮೀಸಲಾತಿ ಹೋರಾಟದ ಸಭೆಗಳು ಸಮಾಜದ ನಾಯಕರನ್ನು ಬೈಯ್ಯುವಂತಹ ಸಭೆಗಳಾಗಿ ಪ್ರತಿಬಿಂಬಿಸುತ್ತಿವೆ . ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಹೋರಾಟದ ಹೆಸರಿನಲ್ಲಿ ವೈಯಕ್ತಿಕ ಟೀಕೆ ಟಿಪ್ಪಣಿ, ಸರ್ಕಾರಕ್ಕೆ ಗಡುವು ನೀಡುವುದು ಹಾಗೂ ಮುಖ್ಯಮಂತ್ರಿಗಳಿಗೆ ಬ್ಲಾಕ್‌ಮೇಲ್ ಮಾಡುವ ತಂತ್ರ ಹೆಣೆಯುತ್ತಿರುವುದು ಸರಿಯಲ್ಲ ಎಂದರು.
ಸರ್ಕಾರ ಯಾವುದೇ ಒಂದು ಸಮಾಜಕ್ಕೆ ಸೀಮಿತವಾದುದಲ್ಲ. ರಾಜ್ಯದ 6.50 ಕೋಟಿ ಜನತೆಗೆ ಸಂಬಂಧಿಸಿದೆ. ನಾವು ನಮ್ಮ ಹಕ್ಕನ್ನು ಪಡೆಯಲು ಸರ್ಕಾರಕ್ಕೆ ಮನವಿಯನ್ನು ಮಾಡಬೇಕೇ ವಿನಃ ಗಡುವು ನೀಡುವುದು, ಹೆದರಿಸುವ ತಂತ್ರ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಸಂಘಟಿತ ಹೋರಾಟದ ಮೂಲಕ ಸರ್ಕಾರವನ್ನು ಓಲೈಸುವ ಕೆಲಸ ಮಾಡಬೇಕು. ಬದಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು , ಸಚಿವ ಮುರುಗೇಶ ನಿರಾಣಿ ಹಾಗೂ ಯುವನಾಯಕ ವಿಜಯೇಂದ್ರ ಸೇರಿದಂತೆ ಸಮಾಜದ ನಾಯಕರ ನಿಂದನೆ ಸರಿಯಲ್ಲ. ಅನ್ಯ ಸಮಾಜದ ಗುರುಗಳು ಹೋರಾಟ ನಡೆಸಿ ಯಾವ ರೀತಿ ಮೀಸಲಾತಿ ಪಡೆದಿದ್ದಾರೆ ಎಂಬುದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಯಮೃತ್ಯುಂಜಯ ಸ್ವಾಮಿಗಳು ನಡೆಸುತ್ತಿರುವ ಹೋರಾಟ ಅರ್ಥ ಕಳೆದುಕೊಳ್ಳುತ್ತಿದೆ
ಪಂಚಮಸಾಲಿ ಸಮಾಜದ ಹೋರಾಟದ ಸಭೆಗಳಲ್ಲಿ ಹರಿಹರದ ಜಗದ್ಗುರು ವಚನಾನಂದ ಶ್ರೀಗಳಿಗೆ ಅವಹೇಳನ ಮಾಡುತ್ತಿರುವುದು ಸಮಾಜ ಬಾಂಧವರಿಗೆ ಬೇಸರ ತರಿಸಿದೆ . ಬೆರಳೆಣಿಕೆಯಷ್ಟು ವ್ಯಕ್ತಿಗಳ ಓಲೈಕೆಗೋಸ್ಕರ ಜಯಮೃತ್ಯುಂಜಯ ಸ್ವಾಮಿಗಳು ನಡೆಸುತ್ತಿರುವ ಹೋರಾಟ ಅರ್ಥ ಕಳೆದುಕೊಳ್ಳುತ್ತಿದೆ . ಅಲ್ಲದೇ ಅವರ ಈ ನಡವಳಿಕೆಯಿಂದ ಸಮಾಜದ ಗೌರವಕ್ಕೆ ಧಕ್ಕೆ ಬಂದಿದೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಪಡೆಯುವ ಸಂಬಂಧ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಾಣಲಾಗಿದೆ. ಯಾವ ನಾಯಕರನ್ನು ಕಂಡು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸುಮ್ಮನೆ ಬೈಯುವಂತಹ ಸಭೆಗಳನ್ನು ನಡೆಸುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ಸರ್ಕಾರ ಮಣಿಯುತ್ತದೆ
ಸಮಾಜದ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಗೌರವವಿದೆ. ಆದರೆ ಅವರು ಹರಿಹರ ಪೀಠದ ಜಗದ್ಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದು ಸಮಾಜಕ್ಕೆ ಬೇಸರ ತರಿಸಿದೆ. ಇಬ್ಬರು ಗುರುಗಳು ಸಮಾಜದ ಆಸ್ತಿ , ಇಬ್ಬರು ಶ್ರೀಗಳ ಕುರಿತು ಯಾರೇ ಹಗುರವಾಗಿ ಮಾತನಾಡಿದರೆ ಸಹಿಸಲಾಗದು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಹರಿಹರ ಹಾಗೂ ಕೂಡಲಸಂಗಮದ ಇಬ್ಬರು ಮಠಾಧೀಶರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ಸರ್ಕಾರ ಮಣಿಯುತ್ತದೆ. ಸುಮಾರು ಎರಡು ವರ್ಷಗಳಿಂದ ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಹೋರಾಟ ನಡೆದಿತ್ತು. ಆಗ ಕೂಡಲ ಸಂಗಮದಿಂದ ಬೆಂಗಳೂರಿಗೆ ಜಯಮೃತ್ಯುಂಜಯ ಶ್ರೀಗಳು ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಐತಿಹಾಸಿಕ ಸಭೆ ನಡೆಸುವ ಮೂಲಕ ಪಂಚಮಸಾಲಿ ಸಮಾಜದಿಂದ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಭಿನ್ನಾಭಿಪ್ರಾಯ ಬದಿಗೊರಿಸಿ ಇಬ್ಬರೂ ಶ್ರೀಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದ್ದೆವು. ಆ ನಂತರ ಅದು ಮುಂದುವರಿಯಲಿಲ್ಲ ಎಂದು ತಿಳಿಸಿದರು.

ಸ್ವಾಮೀಜಿ ನನ್ನ ವಿಚಾರದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ
ಜಯಮೃತ್ಯುಂಜಯ ಸ್ವಾಮಿಗಳನ್ನು ಹರಿಹರದ ಪಂಚಮಸಾಲಿ ಪೀಠಕ್ಕೆ ಕರೆದುಕೊಂಡು ಬಂದು ಎರಡು ಪೀಠಗಳನ್ನು ಒಂದು ಮಾಡುವ ಪ್ರಯತ್ನ ನಡೆದಿತ್ತು. ಆ ನಂತರ ಪಂಚಮಸಾಲಿ ಸಮಾಜದ ಉಭಯ ಜಗದ್ಗುರುಗಳು ಪಾದಯಾತ್ರೆ ಮೂಲಕ ಬೆಂಗಳೂರಿಗೆ ಹೋಗಿ ಬೃಹತ್ ಸಮಾವೇಶದೊಂದಿಗೆ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ತದನಂತರ ಇಬ್ಬರು ಮಠಾಧೀಶರ ಹೋರಾಟದ ಹಾದಿ ಬೇರೆ ಬೇರೆಯಾಗಿದ್ದು , ಸಮಾಜದ ಒಳಿತಿಗೆ ಪ್ರತ್ಯೇಕ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಸವಮೃತ್ಯುಂಜಯ ಸ್ವಾಮೀಜಿ ಅವರು ನನ್ನ ವಿಚಾರದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದು ಮನಸ್ಸಿಗೆ ನೋವುಂಟು ಮಾಡಿದೆ. ಸ್ವಾಮೀಜಿಯವರು ಕೆಲವೇ ವ್ಯಕ್ತಿಗಳ ಮಾತು ಕೇಳಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ಯಾವುದೇ ಸಭೆ, ಸಮಾರಂಭಕ್ಕೆ ಆಹ್ವಾನಿಸಿಲ್ಲ. ಸಮಾಜದ ಒಳಿತಿಗೆ ಯಾರೇ ಹೋರಾಟ ಮಾಡಿದರೂ ನನ್ನ ಬೆಂಬಲ ಇದ್ದೇ ಇರುತ್ತದೆ. ಸಮಾಜದ ಎರಡೂ ಪೀಠಗಳು ಒಂದಾಗಿ ಹೋರಾಟ ಕೈಗೊಳ್ಳುವಂತೆ ಮಾಡಿ 2ಎ ಮೀಸಲಾತಿ ಹೋರಾಟಕ್ಕೆ ಜಯ ತರುವುದು ಸಮಾಜದ ಗುರಿಯಾಗಿದೆ ಎಂದರು.

ಮುಗ್ಧ ಜನರ ಮನಸ್ಸು ಕದಲಿಸಬೇಡಿ
ಹರಿಹರ ಪಂಚಮಸಾಲಿ ಮತ್ತು ಕೂಡಲಸಂಗಮ ಮಠ ಒಂದಾಗಬೇಕು. ಶ್ರೀಗಳಿಗೆ ಒಂದಾಗುವ ಮನಸ್ಸಿದ್ದರೂ ಮಠದ ಕೆಲವರ ಷಡ್ಯಂತ್ರದಿಂದ ಸಾಧ್ಯವಾಗುತ್ತಿಲ್ಲ. ಮಠಗಳು ಒಂದಾದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬ ಕಾರಣಕ್ಕೆ ಒಟ್ಟಾಗಲು ಬಿಡುತ್ತಿಲ್ಲ. ಹಾಗಾಗಿ, ಸಮಾಜದ ಮುಖಂಡರೆಲ್ಲರೂ ಸೇರಿ ಇಂದಿನಿಂದಲೇ ಎರಡೂ ಮಠ ಒಗ್ಗೂಡಿಸಲು ಪ್ರಯತ್ನಿಸಲು ವೇದಿಕೆ ನಿರ್ಮಿಸಿ ಪ್ರಯತ್ನಿಸಲಾಗುವುದು. ರಾಜಕೀಯ ಮಾಡುವುದು ಬೇಡ. ಸಮಾನತೆ ಸಾರುವ ಕೆಲಸ ಮಾಡಿ. ಕೆಲ ಹಿತಾಸಕ್ತಿಗಳು ದಾರಿ ತಪ್ಪಿಸುತ್ತಿವೆ. ಅದು ಯಾರೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದ್ರೆ ದಾಖಲೆಗಳಿಲ್ಲ. ಸಿಕ್ಕ ಕೂಡಲೇ ಈ ಬಗ್ಗೆ ಬಯಲು ಮಾಡುತ್ತೇವೆ ಎಂದು ಹೆಚ್. ಎಸ್. ನಾಗರಾಜ್ ಹೇಳಿದರು.
ಮುಗ್ಧ ಜನರ ಮನಸ್ಸು ಕದಲಿಸಬೇಡಿ. ಸಮಾಜಕ್ಕೆ 2 ಎ ಮೀಸಲಾತಿ ಸಿಗಬೇಕು ಅಷ್ಟೇ. ಕ್ರೆಡಿಟ್ ಯಾರಿಗೆ ಬೇಕಾದರೂ ಹೋಗಲಿ. ಸಮಾಜದ ಜನರಿಗೆ ಒಳ್ಳೆಯದಾಗಬೇಕು. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಮಾಜದ ಒಳಿತಿಗಾಗಿ ಯಾರೇ ಹೋರಾಟ ಮಾಡಿದರೂ ಹೋಗುತ್ತೇನೆ ಎಂದು ತಿಳಿಸಿದರು.












Click it and Unblock the Notifications