ಪುಡಿ ರೌಡಿಗಳ ಹಾವಳಿ: ರಾಷ್ಟ್ರೀಯ ರೈತರ ದಿನದಂದೇ ರಸ್ತೆಗಿಳಿದು ಪ್ರತಿಭಟಿಸಿದ ಅನ್ನದಾತರು
ದಾವಣಗೆರೆ, ಡಿಸೆಂಬರ್ 23: ಡಿಸೆಂಬರ್ 23 ವಿಶ್ವ ರೈತ ದಿನ. ರೈತರಿಗೆ ರಾಜಕೀಯ ನಾಯಕರಿಂದ ಆರಂಭವಾಗಿ ಎಲ್ಲೆಡೆಯಿಂದ ಶುಭಾಶಯಗಳು ಹರಿದು ಬಂದವು. ಆದರೆ ದಾವಣಗೆರೆಯಲ್ಲಿ ಬೆಳಗ್ಗೆಯೇ ಅನ್ನದಾತರು ರಸ್ತೆಗಿಳಿದು ಪ್ರತಿಭಟಿಸಿ ತಮಗೆ ತೊಂದರೆ ಕೊಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಮಾರಾಟ ಮಾಡಲು ಹೂವು ತಂದಿದ್ದರು. ಆದರೆ ನಗರದ ಹೂವಿನ ಮಾರುಕಟ್ಟೆಯಲ್ಲಿ ಕೆಲ ಪುಡಿ ರೌಡಿಗಳು ಹಾಗೂ ಪುಡಾರಿಗಳು ಹೂವು ಬೆಳೆಗಾರರಿಗೆ ಚಾಕು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ದೌರ್ಜನ್ಯ ಎಸಗಿದ್ದಾರೆ. ಮಾತ್ರವಲ್ಲ, ಕೆಲವರು ಹಣ ಕಿತ್ತು ಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ರೈತರು ಪಿ. ಬಿ. ರಸ್ತೆಯಲ್ಲಿನ ತಹಶೀಲ್ದಾರ್ ಕಚೇರಿ ಬಳಿ ಆಗಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನಗರದ ಭಾರತ್ ಕಾಲೋನಿಯಲ್ಲಿರುವ ಕೃಷಿ ಮಾರುಕಟ್ಟೆ ಸಮಿತಿಯ ಆವರಣದಲ್ಲಿನ ಕೃಷಿ ಇಲಾಖೆಯ ಹಿಂಭಾಗದ ಮಾರುಕಟ್ಟೆಯಲ್ಲಿ ರೈತರು ಬೆಳೆದ ಹೂಗಳನ್ನು ಮಾರಾಟ ಮಾಡುತ್ತಾರೆ. ನಿತ್ಯವೂ ಇಲ್ಲಿ ಕೆಲ ಪುಡಿ ರೌಡಿಗಳು,ಕಿಡಿಗೇಡಿಗಳು ಬಂದು ರೈತರು ಮತ್ತು ಮಾರಾಟಗಾರರಿಂದ ಹಣ ವಸೂಲಿ ಮಾಡುತ್ತಾರೆ. ಒಂದು ವೇಳೆ ಹಣ ನೀಡದಿದ್ದರೆ ಥಳಿಸಿ ಚಾಕು ತೋರಿಸಿ ದೌರ್ಜನ್ಯ ಮಾಡುತ್ತಾರೆ. ನಮಗೆ ರಕ್ಷಣೆ ನೀಡುವವರು ಯಾರು..? ಈ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ರೈತರು ಒತ್ತಾಯಿಸಿದರು.

ರೈತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ. ಗಜೇಂದ್ರಪ್ಪ ಹಾಗೂ ಪೊಲೀಸ್ ಸಿಬ್ಬಂದಿ ರೈತರು ಹಾಗೂ ಹೂವಿನ ಮಾರಾಟಗಾರರ ಮನವೊಲಿಸಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಮಾರಾಟಗಾರರು ಹಾಗೂ ರೈತರು ತಕ್ಷಣವೇ ಅಲ್ಲಿನ ಪುಡಿರೌಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಬಿಗಿ ಪಟ್ಟುಹಿಡಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟ ಬಳಿಕ ರೈತರು ಹಾಗೂ ಮಾರಾಟಗಾರರು ಪ್ರತಿಭಟನೆ ಕೈಬಿಟ್ಟರು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ರೈತರು, "ನಾವು ವರ್ತಕರಿಗೆ ಹೂ ಮಾರಾಟ ಮಾಡಿ ದಾರಿಯಲ್ಲಿ ಹೋಗುವಾಗ ಪುಂಡರ ಹಾವಳಿ ಜಾಸ್ತಿಯಾಗಿದೆ. ಚಾಕುವಿನಿಂದ ಹಲ್ಲೆಗೆ ಯತ್ನಿಸಿ ಹಣ ದೋಚುತ್ತಾರೆ. ಹಲವಾರು ದಿನಗಳಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ಹೂವಿನ ಮಾರುಕಟ್ಟೆಯನ್ನು ಸ್ಥಳಾಂತರಿಸಿ" ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಹೂ ಬೆಳೆಯುವ ರೈತರ ಜೊತೆ ವರ್ತಕರು ಕೂಡ ಇದ್ದರು. ಆರ್ ಎಂಸಿ ಹಾಗೂ ಕೆಟಿಜೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೊನೆಗೂ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು.












Click it and Unblock the Notifications