ಅಯ್ಯಯ್ಯೋ.. ಸಿಎಂ ಸಿದ್ದರಾಮಯ್ಯನವರೇ ನಿಮ್ಗೆ ಕಾನೂನು ಗೊತ್ತಿಲ್ವಾ?: ಎಂಪಿ ರೇಣುಕಾಚಾರ್ಯ ಹೀಗೆ ಪ್ರಶ್ನಿಸಿದ್ದೇಕೆ ತಿಳಿಯಿರಿ
ದಾವಣಗೆರೆ, ಜನವರಿ, 05: ಸುಪ್ರೀಂಕೋರ್ಟ್ ತೀರ್ಪಿನನ್ವಯ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಜನವರಿ 22ಕ್ಕೆ ಮಂದಿರ ಉದ್ಘಾಟನೆ ನೆರವೇರಲಿದ್ದು, ಇಡೀ ದೇಶವೇ ಕಾತರರಿಂದ ಕಾಯುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಅಯೋಧ್ಯೆಯ ರಾಮಮಂದಿರ ಕುರಿತಂತೆ ಸ್ಥಳ ವಿವಾದ ಇನ್ನೂ ಇದೆ ಎಂದಿದ್ದಾರೆ. ಸುಪ್ರೀಂಕೋರ್ಟ್ ಗಿಂತ ಸಿದ್ದರಾಮಯ್ಯ ದೊಡ್ಡವರಾ? ಕಾನೂನು ಪದವಿ ಪಡೆದಿದ್ದಾರೆ. ಕಾನೂನು ಗೊತ್ತಿಲ್ಲವೇ?. ರಾಜ್ಯದಲ್ಲಿ ಕರಸೇವಕರು, ರಾಮಭಕ್ತರು, ಹಿಂದೂಗಳನ್ನು ಕೆಣಕಿದರೆ ದಂಗೆ ಏಳಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಈ ದೇಶದ ಕಾನೂನು ಗೌರವಿಸಲಿಲ್ಲ ಎಂದರೆ ಹೇಗೆ? ರಾಮಮಂದಿರ ಜಾಗ ವಿವಾದ ಎನ್ನುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಇಲ್ಲ, ಟಿಪ್ಪು, ಘಜ್ನಿ ಮೊಹಮ್ಮದ್, ಬಾಬರ್, ಔರಂಗಜೇಬ್, ತಾಲಿಬಾನ್ ಆಡಳಿತ ಇದೆ. ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳು ಈ ದೇಶದಲ್ಲಿ ಕಾಂಗ್ರೆಸ್‌ಗೆ ಮತ ಹಾಕಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಮುಸ್ಲಿಮರ ತುಷ್ಟೀಕರಣ ಹೆಚ್ಚಾಗುತ್ತಿದೆ. ಕರಸೇವಕರ ಪರವಾಗಿ ಸರ್ಕಾರ ನಡೆಸಲಾಗುತ್ತಿದೆಯೋ ಭಯೋತ್ಪಾದಕರ ಪರವೋ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸ್ಪಷಪಡಿಸಬೇಕು. ಇದು ನನ್ನ ಸವಾಲು ಎಂದು ಹೇಳಿದರು. ರಾಜ್ಯದಲ್ಲಿ ಗೋ ಹತ್ಯೆ ಮಾಡಿದವರು, ಕುಕ್ಕರ್‌ನಲ್ಲಿ ಬಾಂಬ್ ಸ್ಫೋಟ ಮಾಡಿದವರು, ಬಾಬರ್, ಘಜ್ನಿ ಮೊಹಮದ್, ಟಿಪ್ಪುನಂತಹ ತಾಲಿಬಾನ್ ಆಡಳಿತ ಇದೆ. ಭಯೋತ್ಪಾದಕರ ಅಟ್ಟಹಾಸ ಹೆಚ್ಚಾಗಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅತಿಯಾದ ಮುಸ್ಲಿಮರ ತುಷ್ಟೀಕರಣವೇ ಕಾರಣ ಎಂದು ಆರೋಪಿಸಿದರು.
ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಆಗುತ್ತದೆ. ಈ ವೇಳೆ ಜನರಲ್ಲಿ ಭಯ ಹುಟ್ಟಿಸಲು, ಬೆದರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿಯೇ ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿದೆ. ಹಿಂದೂಗಳ ತಂಟೆಗೆ ಬಂದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ವೇಳೆ ಗೋದ್ರಾ ಹತ್ಯಾಕಾಂಡ ನಡೆದಂತೆ ಮತ್ತೆ ಗಲಭೆ ಆಗುತ್ತದೆ ಎಂದಿರುವ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಗಮನಿಸಿದರೆ ಈ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ಈಗ ದೇಶ ಶಾಂತಿಯುತವಾಗಿದೆ. ಭಾರತ ಮಾತ್ರವಲ್ಲ, ಬೇರೆ ದೇಶಗಳಲ್ಲಿಯೂ ಈ ಬಗ್ಗೆ ಕುತೂಹಲ ಮನೆ ಮಾಡಿದೆ ಎಂದರು.
ಇದು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಇತರೆ ಸಂಘಟನೆಗಳು ಆಯೋಜಿಸಿರುವ ಕಾರ್ಯಕ್ರಮ. ಬಿಜೆಪಿ ಆಯೋಜನೆ ಮಾಡಿಲ್ಲ. ಯಾವ ಮುಖ್ಯಮಂತ್ರಿಗಳನ್ನೂ ಕರೆದಿಲ್ಲ. ಸಿದ್ದರಾಮಯ್ಯ ಅವರನ್ನು ಯಾಕೆ ಕರೆಯಬೇಕು? ಕಾರ್ಯಕ್ರಮದ ಸಂಘಟಕರು ಆಹ್ವಾನ ನೀಡಿದವರು ಹೋಗುತ್ತಾರೆ ಎಂದರು.
ಹಿಂದೂ ರಾಷ್ಟ್ರವಾಗಲು ಬಿಡಬಾರದು ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಜಿ.ಪರಮೇಶ್ವರ್ ಸೇರಿದಂತೆ ಇತರೆ ಸಚಿವರು ಸೇರಿದಂತೆ ಕಾಂಗ್ರೆಸ್ ಮುಖಂಡರ ಹೇಳಿಕೆ ಗಮನಿಸಿದರೆ, ಇವರಿಗೆ ರಾಮಮಂದಿರ ನಿರ್ಮಾಣ ಆಗುವುದು ಇಷ್ಟವಿಲ್ಲ ಎನಿಸುತ್ತದೆ. ಕಾಂಗ್ರೆಸ್‌ನ ಒಳ ಹೊಡೆತ ಜೋರಾಗಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್‌ನವರೇ ನಡೆಸುತ್ತಿರುವ ಷಡ್ಯಂತ್ರ ಇರಬಹುದು ಎಂದರು.
ವೀರೇಂದ್ರ ಪಟೇಲ್ ಸಿಎಂ ಆಗಿದ್ದಾಗ ಅವರನ್ನು ಕೆಳಗಿಳಿಸಲು ತನ್ವೀರ್ ಸೇಠ್ ತಂದೆ ನೇತೃತ್ವದಲ್ಲಿ ಕೋಮುಗಲಭೆ, ದೊಂಬಿ ನಡೆದಿದ್ದವು. ಈಗ ಸಿದ್ದರಾಮಯ್ಯರನ್ನೂ ಸಿಎಂ ಸ್ಥಾನದಿಂದ ಕೆಳಗಿಳಿಸಲು ಈ ರೀತಿಯ ತಂತ್ರ ನಡೆಸಲಾಗುತ್ತಿದೆ. ಹರಿಪ್ರಸಾದ್ ಸೈಡ್ ಲೈನ್ ಆಗಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲ ಎಂದು ಹತಾಶೆಗೊಂಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.
ದೇವಸ್ಥಾನಗಳ ಜೀರ್ಣೋದ್ಧಾರ, ರೈತರಿಗೆ ಬರ ಪರಿಹಾರ ನೀಡಲು ಸರ್ಕಾರದಲ್ಲಿ ಹಣ ಇಲ್ಲ. ದೇವಸ್ಥಾನಗಳಲ್ಲಿ ಬಂದ ಆದಾಯ ವಕ್ಫ್ ಬೋರ್ಡ್‌ಗೆ ನೀಡುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುತ್ತೇವೆ. ಅಭಿವೃದ್ಧಿಗೆ 1 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇವೆ ಎನ್ನುವ ಸಿದ್ದರಾಮಯ್ಯ ಅವರು ಯಾರ ಪರ ಆಡಳಿತ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.
ಹಿಂದೂಗಳ ಕೆಣಕಿದರೆ ದಂಗೆ: ರಾಜ್ಯದಲ್ಲಿ ಹಿಂದೂಗಳ ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಡಳಿತ ನಡೆಸುತ್ತಿದೆ. ನಿಮಗೆ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ. ಅದೆಷ್ಟು ಹೆಚ್ಚು ಜೈಲುಗಳನ್ನು ಮಾಡುತ್ತೀರೋ ನೋಡೋಣ ಎಂದು ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು. ಹಿಂದೂಗಳನ್ನು ಕೆಣಕಿದರೆ, ಸುಖಾಸುಮ್ಮನೆ ತೊಂದರೆ ಕೊಟ್ಟರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳು ದಂಗೆ ಏಳುವ ದಿನಗಳು ದೂರ ಇಲ್ಲ. ಗೋ ಶಾಪ, ಹಿಂದುತ್ವದ ಶಾಪದಿಂದ ಕಾಂಗ್ರೆಸ್ ಪಕ್ಷದವರಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ಹಿಂದುತ್ವದ ಪರ, ಕಾನೂನಿನ ಪರವಾಗಿ ಇರುವವರ ವಿರುದ್ಧ ಇರುವ ಸರ್ಕಾರ. ಹಿಂದೂಗಳ ಭಾವನೆಗಳಿಗೆ ವಿರುದ್ಧವಾಗಿರುವ ಸರ್ಕಾರ. ಇದೇ ಧೋರಣೆ ಮುಂದುವರೆಸಿದರೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಹಿಂದೂ ವಿರೋಧಿ ಧೋರಣೆ ತಾಳಲು ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವರು ಪ್ರಯತ್ನ ಮಾಡುತ್ತಿರುವ ಭಾಗವೂ ಆಗಿರಬಹುದು. ವಿಧಾನಸೌಧವನ್ನು ಬೇಕಾದರೆ ಮುಸ್ಲಿಮರಿಗೆ ಕಾಂಗ್ರೆಸ್‌ನವರು ಬರೆದುಕೊಡುತ್ತಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಆರೋಪಿಸಿದರು.
ಆಂಜನೇಯ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಂದು ಒಳ್ಳೆಯ ಹೆಸರು ಇಟ್ಟಿದ್ದಾರೆ. ಆದ್ರೆ, ರಾವಣಸುರರಂತೆ ವರ್ತಿಸುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಆಡಳಿತ ನಡೆಸುವ ಬದಲು ವಿರುದ್ಧವಾಗಿ ಆಡಳಿತ ಕೊಡುತ್ತಿದ್ದಾರೆ. ಯತೀಂದ್ರ ಸಿದ್ದರಾಮಯ್ಯ, ಆಂಜನೇಯ ಸೇರಿದಂತೆ ಸಚಿವರು ಕ್ಷುಲ್ಲಕ ಹೇಳಿಕೆ, ಪ್ರಚೋದನಕಾರಿ ಮಾತು ಆಡುತ್ತಿದ್ದಾರೆ. ಹಿಂದುತ್ವ ರಕ್ಷಣೆ ಮಾಡುವವರು ಕ್ರಿಮಿನಲ್ಸ್ ಎಂದು ಹೇಳುತ್ತಿದ್ದಾರೆ. ಡಿಜೆಹಳ್ಳಿ, ಕೆಜಿಹಳ್ಳಿ ಗಲಾಟೆ, ಪಿಎಫ್ಐ, ಎಸ್‌ಡಿಪಿಐ ಕೇಸ್ ವಾಪಸ್ ಪಡೆಯುತ್ತಿದ್ದೀರಿ. ಭಯೋತ್ಪಾದಕರ ಪರ ಕೆಲಸ ಮಾಡುತ್ತಿರುವುದರಿಂದಲೇ ಭಯೋತ್ಪಾದನೆ ಅಟ್ಟಹಾಸ ಹೆಚ್ಚಾಗಲು ಕಾರಣವಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರೂ ಆದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಟಿ.ಜಿ.ರವಿಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ.ಜೆ.ಅಜಯ್ ಕುಮಾರ್, ಬಿಜೆಪಿ ಮುಖಂಡರಾದ ಕಲ್ಲಿಂಗಪ್ಪ, ತಂದೂರು ದಯಾನಂದ್, ಚಂದ್ರು, ಪ್ರತಾಪ್, ಚಂದ್ರು ಪಾಟೀಲ್, ಅಣಜಿ ಬಸವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications