ಬರೀ ನಿಮ್ಮ ಬಗ್ಗೆ ಮಾತಾಡುವುದನ್ನು ಬಿಟ್ಟು, ಮೊದಲು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ: ಮೋದಿಗೆ ರಾಹುಲ್ ಗಾಂಧಿ ಟಾಂಟ್
ದಾವಣಗೆರೆ, ಮೇ, 02: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಇದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುವ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಎಲ್ಲೇ ಹೋದರೂ ತಮ್ಮ ಬಗ್ಗೆಯೇ ಮಾತ್ರ ಮಾತನಾಡುತ್ತಾರೆ. ಜನರ ಸಮಸ್ಯೆಗಳ ಬಗ್ಗೆ ಏನೂ ಚಕಾರವನ್ನೇ ಎತ್ತಲ್ಲ ಎಂದು ರಾಹುಲ್ ಗಾಂಧಿ ಹರಿಹರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶೇಕಡಾ 60ರಷ್ಟು ಹೇಳಿಕೊಳ್ಳಿ. ಕನಿಷ್ಠ 30 ರಷ್ಟಾದರೂ ಅಭಿವೃದ್ಧಿ, ಜನಪರ ಕಾಳಜಿ ಬಗ್ಗೆ ತಿಳಿಸಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಹರಿಹರ ಪಟ್ಟಣದ ಗಾಂಧಿನಗರ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಪರ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

24 ಗಂಟೆಯೂ ಕುಡಿಯುವ ನೀರಿನ ಸೌಕರ್ಯ ಕೊಡುವ ಯೋಜನೆ ಜಲಸಿರಿಯನ್ನು ದಾವಣಗೆರೆಯಲ್ಲಿ ಅನುಷ್ಠಾನಗೊಳಿಸಿಲ್ಲ. ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೂ ಪ್ರಧಾನಿ ಮೋದಿ ಅವರು ಮಾತನಾಡಬೇಕು. 600 ಮನೆಗಳನ್ನು ಹಂಚಿಕೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಆದರೆ ಇದುವರೆಗೂ ಭೂಮಿಯೂ ಖರೀದಿಯಾಗಿಲ್ಲ. ಅಷ್ಟೇ ಅಲ್ಲ, ರೈತರ ಕಡೆಯಿಂದ ಭೂಮಿಯನ್ನು ಕಸಿದುಕೊಳ್ಳುವ ಯತ್ನವನ್ನು ಕೂಡ ನಡೆಸಲಾಗುತ್ತಿದೆ. ಪ್ರಧಾನಿಯವರು ಇಂತಹ ವಿಚಾರಗಳ ಬಗ್ಗೆಯೂ ಮಾತನಾಡಬೇಕು ಎಂದು ಸವಾಲು ಹಾಕಿದರು.
ಬಿಜೆಪಿಯವರಿಗೆ 40 ಸಂಖ್ಯೆ ತುಂಬಾ ಇಷ್ಟ
ಪ್ರಧಾನಿ ಮೋದಿ ಅವರಿಗೆ ಅವರ ಬಗ್ಗೆ ಹೇಳಿಕೊಳ್ಳುವುದು ತುಂಬಾನೇ ಖುಷಿ ಆಗಬಹುದು. ಎಲ್ಲಿ ಹೋದರೂ ನಿಮ್ಮ ಬಗ್ಗೆಯೇ ಹೇಳಿಕೊಳ್ಳುತ್ತೀರಾ. ಜನರಿಗೆ ಏನು ಮಾಡಿದ್ದೀರಾ? ಏನು ಮಾಡಬೇಕು ಎಂದುಕೊಂಡಿದ್ದೀರಾ. ಏನು ತಪ್ಪು ಮಾಡಿದ್ದೀರಾ ಎಂಬ ಬಗ್ಗೆ ರಾಜ್ಯದ ಜನರಿಗೆ ಮಾಹಿತಿ ನೀಡಿ. ಬಿಜೆಪಿಯವರಿಗೆ 40 ಸಂಖ್ಯೆ ತುಂಬಾನೇ ಇಷ್ಟ. ಎಲ್ಲಿ ಹೋದರೂ 40 ಮಾತ್ರನೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನಗಳನ್ನು ನೀಡಿ
ಇನ್ನು ಸರ್ಕಾರಿ ಕೆಲಸ, ಕಾಲೇಜಿಗೆ ಸೇರಲು, ಸಬ್ ಇನ್ಸ್‌ಸ್ಪೆಕ್ಟರ್ ನೇಮಕಾತಿ, ಗುತ್ತಿಗೆದಾರರು ಸೇರಿದಂತೆ ಎಲ್ಲದರಲ್ಲಿಯೂ ಶೇಕಡಾ 40 ರಷ್ಟು ಕಮಿಷನ್ ಕೇಳುತ್ತಾರೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸ್ಥಾನಗಳನ್ನು ಮಾತ್ರ ನೀಡುವ ಕೆಲಸ ಮಾಡಿ. 150 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ. ಇಲ್ಲದಿದ್ದರೆ ಬಿಜೆಪಿಯು ಆಪರೇಷನ್ ಮಾಡುವ ಸಾಧ್ಯತೆಯಿದೆ. ಬಹುಮತಕ್ಕಿಂತ ಹೆಚ್ಚು ಸ್ಥಾನ ಬಂದರೆ ಸರ್ಕಾರ ಕೆಡವಲು ಆಗದು ಎಂದು ಹೇಳಿದರು.
ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಲೂಟಿ ಹೊಡೆದಿದೆ. ಬರುವ ಐದು ವರ್ಷಗಳಲ್ಲಿ ಜನರ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯಲು ಯೋಜನೆ ಹಾಕಿಕೊಂಡಿದ್ದಾರೆ. ಮುಂಬರುವ ಸರ್ಕಾರ ಅಭದ್ರಗೊಳಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ದೊಡ್ಡ ಬಹುಮತ ಕೊಡಿ. ಆಗ ಸರ್ಕಾರ ಅಭದ್ರಗೊಳಿಸಲು ಸಾಧ್ಯವಾಗಲ್ಲ. ಇದಕ್ಕಾಗಿ ಕೋಟ್ಯಂತರ ಹಣ ವ್ಯಯಿಸಲು ಬಿಜೆಪಿ ಸಿದ್ಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಿ ನೋಡಿದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ. ಸಿಲಿಂಡರ್, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ದರಗಳು ಏರಿಕೆಯಾಗಿವೆ. ಇಂದು ದೇಶದಲ್ಲಿ 40 ಕೋಟಿ ಜನರು ಬಡತನ ರೇಖೆಗಿಂತ ಕೆಳಗಡೆ ಹೋಗಿದ್ದಾರೆ. ಇಂದು ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಗೌರವದಿಂದ ಕಾಣುತ್ತೇನೆ. ಮೋದಿ ಕರ್ನಾಟಕಕ್ಕೆ ಬಂದಾಗ ಯಾವ ಮುಖಂಡರನ್ನು ವಿಶ್ವಾಸಕ್ಕೆ ಪಡೆಯುವುದಿಲ್ಲ ಎಂದರು.
ಹಾಗೂ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಾಗ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹೆಸರು ತೆಗೆದುಕೊಳ್ಳುವುದಿಲ್ಲ. ಕೇವಲ ಅವರದ್ದೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ ರೈತರು, ಯುವಕರು, ಮಹಿಳೆಯರು, ಬಡವರ ಬಗ್ಗೆ ಮೋದಿ ಅವರು ಮಾತನಾಡಬೇಕು. ಶೇಕಡಾ 40ರಷ್ಟು ಕಮಿಷನ್ ಸರ್ಕಾರವಾಗಿದ್ದರೂ ಯಾರ್ಯಾರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಏನೆಲ್ಲಾ ತನಿಖೆ ನಡೆಸಿದ್ದೀರಾ ಎಂಬುದರ ಬಗ್ಗೆ ಜನರಿಗೆ ತಿಳಿಸಿ.
2018ರ ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಪ್ರಣಾಳಿಕೆಯಲ್ಲಿ ಶೇಕಡಾ 60ರಷ್ಟು ಈಡೇರಿಸಿಲ್ಲ. ಪ್ರವಾಹ ಬಂದಾಗ ಏನೂ ಮಾಡಿಲ್ಲ. ಕೇಂದ್ರದಿಂದ ಜಿಎಸ್‌ಟಿ ಹಣ ರಾಜ್ಯಕ್ಕೆ ಬಂದಿಲ್ಲ. ಕರ್ನಾಟಕ - ಮಹಾರಾಷ್ಟ್ರ ನಡುವೆ ಕಲಹ ಆದಾಗ ಮಾತನಾಡಿಲ್ಲ. ಕಳೆದ ಮೂರು ವರ್ಷಗಳ ಕಾಲ ಲೂಟಿ ಹೊಡೆಯುವುದರಲ್ಲಿಯೇ ನಿರತವಾಗಿದೆ. ಕಾಂಗ್ರೆಸ್ ಸರ್ಕಾರ ಏನು ಮಾಡಬೇಕು ನೀವೇ ಹೇಳಿ. ಲೂಟಿ ಹೊಡೆದಿರುವ ಹಣವನ್ನು ಜನರಿಗೆ ವಾಪಸ್ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಭರವಸೆ ನೀಡಿದರು.
ಭರವಸೆಗಳನ್ನು ವಿವರಿಸಿದ ರಾಹುಲ್
ಕಾಂಗ್ರೆಸ್ ಐದು ಗ್ಯಾರಂಟಿ ಕೊಟ್ಟಿದೆ. ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರತಿ ತಿಂಗಳು ಮನೆ ಯಜಮಾನಿಗೆ 2,000 ರೂಪಾಯಿ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಬಸ್ ಪ್ರಯಾಣ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ, ಡಿಪ್ಲೊಮೊ ಓದಿದವರಿಗೆ 1,500 ರೂಪಾಯಿ ನೀಡುತ್ತೇವೆ ಎಂದರು.
ನಾವು ಅಧಿಕಾರಕ್ಕೆ ಬಂದರೆ ಈ ಭರವಸೆಗಳನ್ನು ಈಡೇರಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಂತಹ ಯೋಜನೆಗಳನ್ನು ನೀಡುತ್ತದೆಯೇ ಎಂದು ಪ್ರಶ್ನಿಸಿದರು.
ನಂತರ ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ನಾಲ್ಕು ಸಾವಿರ ಕಿಲೋ ಮೀಟರ್‌ವರೆಗೆ ಭಾರತ್ ಜೊಡೋ ಯಾತ್ರೆ ನಡೆಸಿದ ಗಂಡುಮಗ. ಬಿಜೆಪಿಯಲ್ಲಿ ಇಂತಹ ಯಾವ ಗಂಡುಮಗಾನೂ ಇಲ್ಲ. ಬಿಜೆಪಿಯವರು 4,000 ಕಿಲೋಮೀಟರ್ ಯಾತ್ರೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ತನಗೆ ಹರಿಹರದಿಂದ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೈ ತಪ್ಪಿದೆ. ನಾಲ್ಕು ದಿನ ಬೇಸರ ಆಗಿತ್ತು. ಅದರಲ್ಲಿ ಎರಡು ಮಾತಿಲ್ಲ. ಈ ಬಾರಿ ಹರಿಹರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಅವರನ್ನು ಗೆಲ್ಲಿಸಲು ನಾವೆಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ಅವಿನಾಶ್ ಪಾಂಡೆ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಕಾಂಗ್ರೆಸ್ ಅಭ್ಯರ್ಥಿಗಳಾದ ದೇವೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್, ಡಿ.ಜಿ. ಶಾಂತನಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಂಚಮಸಾಲಿ ಪೀಠಕ್ಕೆ ಭೇಟಿ
ಹರಿಹರ ತಾಲೂಕಿನಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ, ಶ್ರೀ ವಚನಾನಂದ ಸ್ವಾಮೀಜಿ ಅವರ ಜೊತೆ ಸಮಾಲೋಚನೆ ನಡೆಸಿದರು. ಶ್ರೀಗಳು ಶಾಲು ಹೊದಿಸಿ ಗುಲಾಬಿ ಹೂವು ಸುರಿಸಿ ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಿದರು. ಈ ವೇಳೆ ಶ್ರೀಗಳ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಅವರು, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದರು.











Click it and Unblock the Notifications