ಭೂ ಸುರಕ್ಷಾ ಯೋಜನೆ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ ಮಹತ್ವದ ಮಾಹಿತಿ
Bhu Suraksha Project: ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆ ಅಭಿಯಾನ ಆರಂಭಿಸಿದೆ. ಈ ಯೋಜನೆಯಡಿ ಕಂದಾಯ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿಯೇ ನೀಡಲಾಗುತ್ತದೆ ಎಂದು ದಾವಣಗೆರೆ ಡಿಸಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗಳ ಸೇವೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿನ ಹಳೇ ಪಹಣಿ, ಮುಟೇಷನ್, ಲ್ಯಾಂಡ್ ಗ್ರಾಂಟ್ ರಿಜಿಸ್ಟರ್, ಬಗರ್‍ಹುಕುಂ ಕಡತ ಸೇರಿದಂತೆ ಭೂಮಿಯ ಎಲ್ಲಾ ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಎಲ್ಲಾ ತಾಲ್ಲೂಕುಗಳಲ್ಲಿನ ಅಭಿಲೇಖಾಲಯದ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕೆಲಸ ನಡೆಯುತ್ತಿದ್ದು, ಇಲ್ಲಿವರೆಗೆ 1.13 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಅಪ್ಲೋಟ್ ಮಾಡಲಾಗಿದೆ ಎಂದು ಹೇಳದರು.

ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲು ದಾವಣಗೆರೆ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ತೆಗೆದುಕೊಳ್ಳಲಾಗಿತ್ತು. ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ಇರುವ ಒಟ್ಟು 1,05,466 ಕಡತಗಳಲ್ಲಿ 83,802 ಕಡತಗಳ 52,80,765 ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಮಾದರಿಯಲ್ಲಿ ಅಪ್ಲೋಡ್ ಮಾಡಲಾಗಿದೆ.
ಹರಿಹರ 11,06,372, ಜಗಳೂರು 13,23,129, ಹೊನ್ನಾಳಿ 12,98,228, ಚನ್ನಗಿರಿ 11,48,183, ನ್ಯಾಮತಿ ತಾಲ್ಲೂಕು ಕಚೇರಿಯಲ್ಲಿನ 11,51,723 ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಅಪ್ಲೋಡ್ ಮಾಡಲಾಗಿದೆ. ಬಾಕಿಯಿರುವ ಕಡತಗಳನ್ನು ಮುಂದಿನ ವರ್ಷದೊಳಗೆ ಎಲ್ಲಾ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಈ ಪ್ರಕ್ರಿಯೆಯಿಂದ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ವಿಳಂಬ ಇಲ್ಲದೆ ಅತೀ ಬೇಗ ಪಡೆಯಲು ಸಾಧ್ಯ ಆಗಲಿದೆ. ಹಾಗೂ ರೆಕಾರ್ಡ್ ರೂಂನಲ್ಲಿ ಕೆಲವರು ಕಂದಾಯ ದಾಖಲೆಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದರು. ಇದು ಕೂಡ ಮುಂದಿನ ದಿನಗಳಲ್ಲಿ ತಪ್ಪಲಿದ್ದು, ಸುಲಭವಾಗಿ ದಾಖಲೆಗಳನ್ನು ಪಡೆಯಲು ಸರ್ಕಾರ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ತಹಶೀಲ್ದಾರರ ಕಚೇರಿ ಸೇರಿದಂತೆ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇ-ಕಚೇರಿಯಲ್ಲಿಯೇ ಕಡತಗಳ ನಿರ್ವಹಣೆ ಮಾಡಲಾಗುತ್ತದೆ. ಈಗಾಗಲೇ ಕಂದಾಯ ದಾಖಲೆಗಳ ಸ್ಯ್ಕಾನಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕರು ಕೇಳುವ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮೂಲಕವೇ ನೀಡಲಾಗುತ್ತದೆ.
ದಾಖಲೆಗಳನ್ನು ಪಡೆಯಲು ಭೂ ಸುರಕ್ಷಾ ವೆಬ್‍ಸೈಟ್ https;//recordroom.karnataka.gov.in/ ಸ್ವಯಂ ಸೇವಾ ಪೋರ್ಟಲ್ ಮೂಲಕ ಲಾಗಿನ್ ಆಗಿ ತಾವು ಬಯಸಿದ ದಾಖಲೆ ಆಯ್ಕೆ ಮಾಡಿ ಅದಕ್ಕೆ ಪ್ರತಿ ಪುಟಕ್ಕೆ ತಗಲುವ 8 ರೂಪಾಯಿ ಹಣವನ್ನು ಪಾವತಿಸಿ ದಾಖಲೆಗಳನ್ನು ಪಡೆಯಬಹುದಾಗಿದೆ.
ಆನ್‍ಲೈನ್‍ನಲ್ಲಿ ದಾಖಲೆಗಳು ಇಲ್ಲದಿದ್ದರೆ, 7 ದಿನಗಳಲ್ಲಿ ಸ್ಕ್ಯಾನ್ ಮಾಡಿ ನೀಡಲಾಗುತ್ತದೆ. ಇದರಿಂದ ಸಾರ್ವಜನಿಕರು ತಾಲ್ಲೂಕು ಕಚೇರಿಗಳನ್ನು ಅಲೆದಾಡುವುದು ತಪ್ಪುತ್ತದೆ. ಡಿಜಿಟಲ್ ದಾಖಲೆಗಳಿಗೆ ಮೂಲ ದಾಖಲೆಗಳ ಪ್ರತಿಗೆ ಇದ್ದ ಮೌಲ್ಯವೇ ಇರಲಿದ್ದು, ನ್ಯಾಯಾಲಯ ಸೇರಿದಂತೆ ಎಲ್ಲಾ ಅಗತ್ಯ ಇರುವ ಕಡೆ ಮಾನ್ಯ ಮಾಡಲಾಗುತ್ತದೆ. ಇದಕ್ಕೆ ಸರ್ಕಾರ ಆದೇಶ ನೀಡಿದೆ ಎಂದರು.
ಇನ್ನು ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕೆಲಸದಲ್ಲಿ ದಾವಣಗೆರೆ ಜಿಲ್ಲೆಯ ಪ್ರಥಮ ಸ್ಥಾನದಲ್ಲಿದೆ. ಮತ್ತು ಪಹಣಿಯೊಂದಿಗೆ ಆಧಾರ್ ಜೋಡಣೆಯಲ್ಲಿಯೂ ಮೊದಲನೇ ಸ್ಥಾನದಲ್ಲಿದ್ದು, ಅಧಿಕಾರಿಗಳು ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಇನ್ನು ಜಿಲ್ಲೆಯಲ್ಲಿ ಈಗಾಗಲೇ 104 ಕಂದಾಯ ಗ್ರಾಮಗಳನ್ನು ರಚಿಸುವ ಮೂಲಕ ಮನೆಗಳ ಹಕ್ಕುಪತ್ರ ನೀಡಲಾಗಿದೆ. ಇನ್ನೂ 200 ಕಂದಾಯ ಗ್ರಾಮಗಳನ್ನು ತೆಗೆದುಕೊಂಡಿದ್ದು ಒಟ್ಟು 25,OOO ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ.
ದರಖಾಸ್ತು ಪೋಡಿ ಅಭಿಯಾನದ ಮೂಲಕ ಒಟ್ಟುಗೂಡಿದ್ದ ಪಹಣಿಗಳನ್ನು ಬೇರ್ಪಡಿಸಲಾಗುತ್ತಿದೆ. ಈಗಾಗಲೇ 2,000 ದರಖಾಸ್ತು ಪೋಡಿ ಮೂಲಕ ಪ್ರತ್ಯೇಕ ಪಹಣಿ ವಿಂಗಡಣೆ ಮಾಡಲಾಗಿದೆ. 5,000-6,000 ಪಹಣಿಯನ್ನು ಒಟ್ಟುಗೂಡಿಸಿ ಬೇರ್ಪಡಿಸಲಾಗುತ್ತದೆ ಎಂದರು.












Click it and Unblock the Notifications