ಮೋದಿ ಹೇಳಿರುವುದು ಶುದ್ಧ ಸುಳ್ಳು, ನಾವ್ಯಾರು ಅವರ ಸಾವು ಬಯಸಿಲ್ಲ- ಸಿದ್ದರಾಮಯ್ಯ

ದಾವಣಗೆರೆ, ಮಾರ್ಚ್ 13: ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾವು ಬಡವರ ಕೆಲಸಕ್ಕೆ ಮಾಡುತ್ತಿದ್ದರೆ, ಕಾಂಗ್ರೆಸ್ ನನ್ನನ್ನು ಸಮಾಧಿ ಮಾಡಲು ಕಾಯುತ್ತಿದೆ ಎಂದು ಹೇಳಿರುವುದು ಶುದ್ಧ ಸುಳ್ಳು. ನಾವ್ಯಾರು ಮೋದಿ ಸಾವು ಬಯಸಿಲ್ಲ. ನೂರಲ್ಲ, ನೂರ ಇಪ್ಪತ್ತು ವರ್ಷ ಬದುಕಲಿ ಎಂಬುದಾಗಿ ಹಾರೈಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹೊನ್ನಾಳಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಳ್ಳು, ಆಶ್ವಾಸನೆ ಈಡೇರಿಸದ ಬಿಜೆಪಿಗೆ ಮತ ಹಾಕಬೇಡಿ. ಮಾತು ತಪ್ಪಿದ ಇಂಥ ಪಕ್ಷಕ್ಕೆ ಮತ ಚಲಾಯಿಸಲು ಬಿಡಬೇಡಿ. ಮೋದಿ ಅವರು ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯಕ್ಕೆ ಬಂದಾಗಲೆಲ್ಲಾ ಸುಳ್ಳು ಹೇಳಿ ಹೋಗುತ್ತಿದ್ದಾರೆ. ಭಾವಾನಾತ್ಮಕ, ಕರುಣೆಯ ಮೂಲಕ ಮತ ಪಡೆಯಲು ಹವಣಿಸುತ್ತಿದೆ ಎಂದರು.

Congress Prajavani Yatra At Davanagere Honnali Pattana

ಮೋದಿ ಅಧಿಕಾರಕ್ಕೆ ಬಂದು 9 ವರ್ಷ ಆದರೂ ಅಚ್ಚೆ ದಿನ್ ಬರಲಿಲ್ಲ. ಬೆಲೆ ಏರಿಕೆ ಕಡಿಮೆ ಆಗಲಿಲ್ಲ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ. ಭ್ರಷ್ಟಾಚಾರದಿಂದ ಹುಟ್ಟಿದ, ಪ್ರೋತ್ಸಾಹಿಸುತ್ತಿರುವ ಪಕ್ಷ. ಸುಮಾರು 45 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ರಾಜಕೀಯ ಜೀವನದಲ್ಲಿ ಬಿಜೆಪಿಯಂಥ ಭ್ರಷ್ಟ ಸರ್ಕಾರ ನೋಡೇ ಇರಲಿಲ್ಲ ಎಂದು ಕಿಡಿಕಾರಿದರು.

ಜನರು ಶೇ. 40 ಕಮಿಷನ್‌ ಸರ್ಕಾರ ಎಂದು ಸುಮ್ಮನೆ ಕರೆಯಲ್ಲ. ವಿಪಕ್ಷದವರು ಹೇಳಿದ್ದಲ್ಲ. ರಾಜ್ಯ ಗುತ್ತಿಗೆದಾರ ಸಂಘದವರು ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ. ಶೇ. 40ರಷ್ಟು ಕಮೀಷನ್ ಕೊಟ್ಟರೆ ಗುಣಮಟ್ಟದ ಕೆಲಸ ಮಾಡಲು ಆಗಲ್ಲ. ರಕ್ಷಣೆ ಮಾಡಿ ಎಂದು ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದು ಒಂದೂವರೆ ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಸವರಾಜ ಬೊಮ್ಮಾಯಿ ಅವರು ಪತ್ರ ಬರೆದಿದ್ದರೂ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುತ್ತೇನೆ ಎನ್ನುತ್ತಾರೆ. ಪತ್ರ ಬರೆದಿರುವುದು ದಾಖಲಾತಿ ಅಲ್ಲವೇ ಎಂದು ಪ್ರಶ್ನಿಸಿದರು.

ಸಂತೋಷ್ ಪಾಟೀಲ್ ಸಾವಿಗೆ ಡೆತ್‌ನೋಟ್‌ಕ್ಕಿಂತ ಸಾಕ್ಷಿ ಬೇಕಾ..?

ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಗುತ್ತಿಗೆದಾರರಾಗಿದ್ದರು. ಕೆ.ಎಸ್. ಈಶ್ವರಪ್ಪ ಮಂತ್ರಿ. ಶೇಕಡಾ 40 ರಷ್ಟು ಕಮಿಷನ್‌ ಕೇಳಿದ್ದರಿಂದ ಕೊಡಲು ಆಗದೇ ಉಡುಪಿ ಹೋಗಿ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ಈಶ್ವರಪ್ಪ ವಿರುದ್ಧ ಹಗಲು ರಾತ್ರಿ ಗಲಾಟೆ ಮಾಡಿದೆವು. ಅನಿವಾರ್ಯವಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟರು. ಕಮಿಷನ್‌ ಕೇಳಿದ ಕಾರಣಕ್ಕೆ ತಲೆದಂಡವಾಗಿತ್ತು ಎಂದರು.

Congress Prajavani Yatra At Davanagere Honnali Pattana

ಇನ್ನು ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಎಂದು ಸಂತೋಷ್ ಪಾಟೀಲ್ ಡೆತ್‌ನೋಟ್‌ನಲ್ಲಿ ಬರೆದಿದ್ದರು. ಇದಕ್ಕಿಂತ ಸಾಕ್ಷಿ ಬೇಕಾ? ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮನೆಯಲ್ಲಿ ಕೋಟಿ ಕೋಟಿಗಟ್ಟಲೇ ಹಣ ಸಿಕ್ಕಿದೆ. ಪೊಲೀಸರು ಮಾಡಾಳ್ ತಪ್ಪಿಸಿಕೊಂಡಿದ್ದಾರೆ ಎನ್ನುತ್ತಾರೆ. ಮಾಡಾಳ್ ಮನೆಯಲ್ಲಿಯೇ ಇದ್ದೆ ಎನ್ನುತ್ತಾನೆ. ಸಿಎಂ ಬೊಮ್ಮಾಯಿಯೇ ರಕ್ಷಣೆ ಮಾಡಿರುವುದು. ಇಂತಹ ಸರ್ಕಾರ ನಿಮಗೆ ಬೇಕಾ ಎಂದು ಪ್ರಶ್ನಿಸಿದರು.

ಅಶ್ವತ್ಥ್‌ ನಾರಾಯಣ್ ಮನುಷ್ಯನಾ..ರಾಕ್ಷಸನಾ..?

ಟಿಪ್ಪು ಸುಲ್ತಾನ್ ಮುಗಿಸಿದಂತೆ ಸಿದ್ದರಾಮಯ್ಯನನ್ನು ಮುಗಿಸಿ ಎಂದು ಸಚಿವ ಅಶ್ವತ್ಥ್‌ ನಾರಾಯಣ್ ಕಾರ್ಯಕರ್ತರಿಗೆ ಕರೆ ಕೊಟ್ಟ. ನಾವೇನೂ ಬಿಜೆಪಿಯವರನ್ನು ಮುಗಿಸಿ ಎಂದು ಕರೆ ಕೊಟ್ಟೆವಾ. ಇವನು ಮನುಷ್ಯನಾ, ರಾಕ್ಷಸನಾ. ನರೇಂದ್ರ ಮೋದಿ ಜವಾಬ್ದಾರಿ ಪ್ರಧಾನಿಯಾಗಿದ್ದರೆ ಸಚಿವ ಸ್ಥಾನದಿಂದ ಕೆಳಗಿಳಿಸಬೇಕಾಗಿತ್ತು. ಆದರೆ ಈ ಕೆಲಸ ಮಾಡಿಲ್ಲ. ರಾಕ್ಷಸಿ ಪ್ರವೃತ್ತಿ ಪ್ರದರ್ಶನ ಮಾಡುವ ಬಿಜೆಪಿಗೆ ಮತ ಹಾಕ್ತೀರಾ. ಮತ ಹಾಕಲು ಬಿಡಕೂಡದು. ಇಂಥ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾ? ಯಾವುದೇ ಕಾರಣಕ್ಕೂ ಬರಬಾರದು ಎಂದು ಜನರಲ್ಲಿ ಮನವಿ ಮಾಡಿದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ಎಲ್ಲೆಡೆ ಈಗ ಕಾಂಗ್ರೆಸ್ ಗಾಳಿ ಬೀಸುತ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಬೆಲೆ ಏರಿಕೆಗಳು ಗಗನಕ್ಕೇರಿವೆ. ಪೆಟ್ರೋಲ್, ಡೀಸೆಲ್, ಗೊಬ್ಬರ, ಗ್ಯಾಸ್, ಅಡುಗೆ ಎಣ್ಣೆ, ಕಬ್ಬಿಣ, ಸಿಮೆಂಟ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಕೈಸುಡುತ್ತಿವೆ. ಡಬಲ್ ಇಂಜಿನ್ ಸರ್ಕಾರ ಬಡವರ ರಕ್ತ ಕುಡಿಯುತ್ತಿದೆ. ಪರಿಪರಿಯಾಗಿ ಕೇಳಿಕೊಳ್ಳುತ್ತೇನೆ. ಬಿಜೆಪಿ ಕಿತ್ತೊಗೆಯಿರಿ, ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದರು.

Congress Prajavani Yatra At Davanagere Honnali Pattana

ಜನರ ಆಶೀರ್ವಾದ ಪಡೆದು ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್ ಕಮಲ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೇರೆ ಪಕ್ಷದ ಶಾಸಕರನ್ನು ಖರೀದಿಸಿ ಅನೈತಿಕವಾಗಿ ಅಧಿಕಾರಕ್ಕೆ ಬಂದ ಪಕ್ಷ ಬಿಜೆಪಿ. 2014ರಲ್ಲಿ ನರಸಿಂಹಯ್ಯ ಅಧ್ಯಕ್ಷತೆ ಸಮಿತಿಯ ವರದಿ ಆಧರಿಸಿ ತಾಂಡಾದಲ್ಲಿ ವಾಸ ಮಾಡುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಕ್ರಮ ಕೈಗೊಂಡೆವು. ತಾಂಡಾಗಳು, ಕುರುಬರಟ್ಟಿ, ನಾಯಕರಹಟ್ಟಿಗಳು, ಹಾಡಿಗಳನ್ನು ಕಂದಾಯ ಗ್ರಾಮವನ್ನಾಗಿಸಬೇಕೆಂದು ನಿರ್ಣಯ ಮಾಡಿದ್ದು ನಾವು. ಆದರೆ, ಕಲ್ಬುರ್ಗಿಯ ಸೇಡಂನಲ್ಲಿ ಪ್ರಧಾನಿ ಹಕ್ಕು ಪತ್ರ ಪ್ರದಾನ ಮಾಡಿದರು. ಸಾರು, ಪಲ್ಯ, ರೊಟ್ಟಿ, ಮುದ್ದೆ ಮಾಡಿದವರು ನಾವು, ಬಡಿಸಲು ಬಂದದ್ದು ಅವರು ಎಂದು ಹೇಳಿದರು.

ಮಾಜಿ ಸಂಸದ ಧ್ರುವನಾರಾಯಣ್ ಅವರ ನಿಧನ ಹಿನ್ನೆಲೆಯಲ್ಲಿ ಭಾವಚಿತ್ರಕ್ಕೆ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ವೇದಿಕೆಯಲ್ಲಿ ಶಾಸಕ ಜಮೀರ್ ಅಹ್ಮದ್, ಪ್ರಕಾಶ್ ರಾಥೋಡ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಸೂಡಾ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+