ಚಂದ್ರಶೇಖರ್ ಸಾವು ಪ್ರಕರಣ: ಎಲ್ಲಾ ಆಯಾಮಗಳಲ್ಲೂ ಸಮಗ್ರ ತನಿಖೆಗೆ ಸಿಎಂ ಸೂಚನೆ
ದಾವಣಗೆರೆ, ನವೆಂಬರ್, 09: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ಕುರಿತಂತೆ ಎಲ್ಲಾ ಆಯಾಮದಲ್ಲಿಯೂ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಗೌರಿಗದ್ದೆಯಿಂದ ಹೊನ್ನಾಳಿಯ ಹೆಚ್. ಕಡದಕಟ್ಟೆಯವರೆಗೆ ಚಂದ್ರು ಬರುವವರೆಗಿನ ಘಟನೆ ಮರುಸೃಷ್ಟಿಸಿ ತನಿಖೆ ಮಾಡಲಾಗುವುದು. ಮರಣೋತ್ತರ, ಎಫ್‌ಎಸ್‌ಎಲ್ ವರದಿ ಬರುವವರೆಗೆ ಸ್ಪಷ್ಪತೆ ನೀಡಲು ಆಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೊನ್ನಾಳಿಯಲ್ಲಿ ಹೇಳಿದರು.
Recommended Video
ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಪೂರ್ಣ ತನಿಖೆ ಮುಗಿಯುವವರೆಗೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರುವುದು ಬೇಡ. ಚಂದ್ರಶೇಖರ್ ಜನಪ್ರಿಯತೆ ನೋಡಿದರೆ ಕೊಲೆ ಆಗಿರಬಹುದು ಎಂಬ ಅನುಮಾನ ಮೂಡುತ್ತದೆ. ಕಾರು ಬಿದ್ದಿರುವ ಸ್ಥಳ ನೋಡಿದರೆ ಅಪಘಾತದಂತೆ ಕಾಣುತ್ತದೆ. ಕೊಲೆ ಹಾಗೂ ಅಪಘಾತ ಕುರಿತಂತೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಎಫ್‌ಎಸ್‌ಎಲ್ ವರದಿ ಬರುತ್ತದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಪೊಲೀಸರ ಕೈ ಸೇರಿದ ಬಳಿಕ ತನಿಖೆ ಮತ್ತಷ್ಟು ವೇಗ ಪಡೆಯುತ್ತದೆ. ಘಟನೆಯ ಬಗ್ಗೆ ಇಂಚಿಂಚೂ ಪರಿಶೀಲಿಸಿ ತನಿಖೆ ನಡೆಸುವಂತೆ ಹೇಳಿದ್ದೇನೆ. ಚಂದ್ರಶೇಖರ್ ಮೃತದೇಹದ ಶ್ವಾಸಕೋಶದಲ್ಲಿ ನೀರು ಪತ್ತೆಯಾಗಿರುವು ಕಂಡುಬಂದಿದೆ ಎಂದರು.

ಚಂದ್ರು ಸಾವಿನ ಬಗ್ಗೆ ಊಹಾಪೋಹ ಬೇಡ
ಚಂದ್ರಶೇಖರ್ ಸಾವಿನ ಬಗ್ಗೆ ಊಹಾಪೋಹ ಎಬ್ಬಿಸುವುದು ಬೇಡ. ಸಾಕ್ಷ್ಯಗಳನ್ನು ಕಲೆ ಹಾಕಬೇಕು. ಕಾರಿನ ಮುಂದೆ ಗ್ಲಾಸ್ ಹೊಡೆದಿದ್ದು, ಡ್ಯಾಶ್ ಬೋರ್ಡ್ ಕೂಡ ಹೊಡೆದಿದೆ. ಕಾರು ಜಖಂ ಆಗಿರುವುದನ್ನು ನೋಡಿದರೆ ಅಪಘಾತದಂತೆ ಕಾಣುತ್ತದೆ. ಚಂದ್ರಶೇಖರ್ ಅವರು ಕೊಪ್ಪ ತಾಲೂಕಿನ ಗೌರಿಗದ್ದೆಗೆ ಹೋಗಿ ವಾಪಸ್ ಬರುವವರೆಗೆ ಏನೆಲ್ಲಾ ಆಗಿರಬಹುದು ಎಂಬ ಮಾಹಿತಿ ಕಲೆ ಹಾಕುವಂತೆ ಹೇಳಿದ್ದು, ಮಾಹಿತಿ ಸಿಕ್ಕ ಬಳಿಕ ಪ್ರಕರಣ ಒಂದು ಹಂತಕ್ಕೆ ಬರುತ್ತದೆ. ಆಗ ಯಾವ ಆಯಾಮ, ಯಾವ ದಿಕ್ಕಿನಲ್ಲಿ ತನಿಖೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಪೊಲೀಸರು ಬರುತ್ತಾರೆ ಎಂದರು.

ರೇಣುಕಾಚಾರ್ಯರ ಜೊತೆ ಮಾತಾಡಿದ್ದೇನೆ
ಕೊಲೆಯೋ, ಅಪಘಾತವೋ? ಎಂಬ ಪ್ರಶ್ನೆಗೆ ಉತ್ತರಿಸಲು ನಾನು ತನಿಖಾಧಿಕಾರಿ ಅಲ್ಲ, ನಾನು ಅದನ್ನು ಹೇಳಲು ಆಗುವುದಿಲ್ಲ. ತನಿಖೆ ಯಾವ ರೀತಿ, ಯಾವ ದಿಕ್ಕಿನಲ್ಲಿ ಆಗಬೇಕೆಂಬ ಬಗ್ಗೆ ಪೋಸ್ಟ್‌ಮಾರ್ಟಂ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ಬಳಿಕ ತನಿಖೆ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬ ನಿರ್ಧಾರಕ್ಕೆ ಬರುತ್ತೇವೆ ಎಂದರು. ನಾನು ಈಗಾಗಲೇ ರೇಣುಕಾಚಾರ್ಯರ ಜೊತೆ ಮಾತನಾಡಿದ್ದೇನೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಶಾಸಕರ ಬಲದಂತೆ ನಿಂತಿದ್ದ ಚಂದ್ರಶೇಖರ್ ಸಾವಿನ ಬಳಿಕ ಎಲ್ಲರಿಗೂ ನೋವಿದೆ. ನನಗೂ ಸಹ ತುಂಬಾ ನೋವಿದೆ. ಫೋನ್‌ನಲ್ಲಿ ಈ ಬಗ್ಗೆ ಮಾತನಾಡಿದ್ದೆ. ಮನಸ್ಸು ತಡೆಯಲಿಲ್ಲ ಹಾಗಾಗಿ ಬಂದಿದ್ದೇನೆ. ರೇಣುಕಾಚಾರ್ಯರ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.

7ನೇ ವೇತನ ಆಯೋಗದ ಬಗ್ಗೆ ಸಿಎಂ ಪ್ರತಿಕ್ರಿಯೆ
ಏಳನೇ ವೇತನ ಆಯೋಗ ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ. ನಿವೃತ್ತ ಮುಖ್ಯ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗ ರಚನೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ತಿಳಿಸಿದರು. ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಏಳು ಲಕ್ಷ ಕೋಟಿ ರೂಪಾಯಿ ಬಂಡಾವಳ ಹೂಡಿಕೆ ಮಾಡಲಾಗುತ್ತಿದೆ. ಶೇಕಡಾ 80ರಷ್ಟು ಬೆಂಗಳೂರು ಹೊರತುಪಡಿಸಿ ಹೂಡಿಕೆ ಆಗುತ್ತದೆ. ಹುಬ್ಬಳ್ಳಿ, ಧಾರವಾಡ, ಮಂಗಳೂರು, ಮೈಸೂರು, ದಾವಣಗೆರೆ, ಬೀದರ್ ಸೇರಿದಂತೆ 13 ಜಿಲ್ಲೆಗಳಲ್ಲಿ ಹೂಡಿಕೆ ಆಗಲಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಕೈಗಾರಿಕೆಗಳು ಬರುತ್ತವೆ ಎಂದು ತಿಳಿಸಿದರು.

ಹಣ ಸಂದಾಯದ ಬಗ್ಗೆ ಸಿಎಂ ಹೇಳಿದ್ದೇನು?
ಜಕಾತಿ ಸಂಗ್ರಹಕ್ಕೆ ಟೆಂಡರ್ ನೀಡಲು 3 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ದಾವಣಗೆರೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ವ್ಯವಸ್ಥಾಪಕ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ನಡುವಿನ ಆಡಿಯೋ ಸಂಭಾಷಣೆಯಲ್ಲಿ ಸಚಿವ ಬೈರತಿ ಬಸವರಾಜ್ ಅವರಿಗೆ 15 ಲಕ್ಷ ರೂಪಾಯಿ ಹಣ ಸಂದಾಯವಾಗಿದೆ ಎಂಬ ಆರೋಪವೂ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, "ವಿರೋಧ ಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿರುವುದು ರೂಢಿ ಆಗಿದೆ. ಈಗಾಗಲೇ ಲೋಕಾಯುಕ್ತ ತನಿಖೆಯಡಿ ಬಂದಿದೆ. ಲೋಕಾಯುಕ್ತ ಪೊಲೀಸರು ದಾಳಿ ಮಾಡಿದಾಗ ಆರೋಪಿ ಹೇಳಿಕೆ ಸಮೇತ ತನಿಖೆ ಆಗುತ್ತದೆ. ಯಾರೇ ತಪ್ಪಿತಸ್ಥರು ಇದ್ದರೂ ತನಿಖೆಯಿಂದ ತಿಳಿದು ಬರುತ್ತದೆ," ಎಂದರು.












Click it and Unblock the Notifications