ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಮೇಲೆ ಸಿಸಿಬಿ ದಾಳಿ: ಎಸ್.ಎಸ್. ಮಲ್ಲಿಕಾರ್ಜುನ್‌ರನ್ನು ಬಂಧಿಸುವಂತೆ ಒತ್ತಾಯ
ದಾವಣಗೆರೆ, ಡಿಸೆಂಬರ್, 22: ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಮೇಲೆ ಸಿಸಿಬಿ ಅಧಿಕಾರಿಗಳು ಹಾಗೂ ಅರಣ್ಯ ವಲಯಾಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ರೈಸ್ ಮಿಲ್ ಬಳಿ ಕಾಡು ಪ್ರಾಣಿಗಳು, ಮೂಳೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲೇಶ್ವರ ರೈಸ್ ಮಿಲ್ ಮಲ್ಲಿಕಾರ್ಜುನ್ ಅವರ ಒಡೆತನಕ್ಕೊಳಪಟ್ಟಿದೆ. ಮಿಲ್ ಅನ್ನು ಕೂಡಲೇ ಸೀಜ್ ಮಾಡಬೇಕು. ಈ ಸ್ಥಳದಲ್ಲಿ ಜಿಂಕೆ, ಕೃಷ್ಣಮೃಗ, ಎರಡು ನರಿ, ಕಾಡು ಹಂದಿ ಸೇರಿದಂತೆ ಅನೇಕ ಪ್ರಾಣಿಗಳು ಸಿಕ್ಕಿವೆ ಎಂಬುದಾಗಿ ಅರಣ್ಯ ವಲಯಾಧಿಕಾರಿಗಳು ಕರೆ ಮಾಡಿದಾಗ ತಿಳಿಸಿದ್ದಾರೆ. ದರ್ಪದಿಂದ ವರ್ತಿಸುವ ಮಲ್ಲಿಕಾರ್ಜುನ್ ಅವರನ್ನು ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿಸಬೇಕು. ಈ ಪ್ರಕರಣದಲ್ಲಿ ಬೇರೆ ಹೆಸರನ್ನು ಸೇರಿಸಿದರೆ ನಾವು ಸುಮ್ಮನಿರಲ್ಲ. ಕೂಡಲೇ ಬಂಧಿಸದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಂಕೆಯ ಮೂಳೆಗಳು ವಶಕ್ಕೆ
ಜಿಂಕೆಯ ಮೂಳೆಗಳನ್ನು ಕೋರ್ಟ್‌ನ ಆದೇಶದ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಅನಧಿಕೃತವಾಗಿ ಪ್ರಾಣಿಗಳನ್ನು ಇರಿಸಿಕೊಂಡಿರುವುದಲ್ಲದೇ ಅವುಗಳ ಮೂಳೆ ಸಿಕ್ಕಿರುವುದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ. ಆದ್ದರಿಂದ ಕೂಡಲೇ ಈ ಮಿಲ್‌ನ ಮಾಲೀಕ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಕೂಡಲೇ ಬಂಧಿಸಿ, ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ವಲಯ ಅರಣ್ಯ ಅಧಿಕಾರಿ ಮತ್ತು ಸಿಸಿಬಿ ಪೊಲೀಸರ ವಿರುದ್ಧವೂ ದಾವಣಗೆರೆಯಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಿರ್ಲಕ್ಷ್ಯ ವಹಿಸದೆ ಪ್ರಕರಣ ದಾಖಲಿಸಿ
ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರೆ ನಾವು ಸುಮ್ಮನಿರಲ್ಲ. ಮಲ್ಲಿಕಾರ್ಜುನ್ ವಿರುದ್ಧ ಸಿಸಿಬಿ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಶಾಮನೂರು ಶಿವಶಂಕರಪ್ಪರ ಮಗನಿಗೆ ಹೇಳಲು ಅವರ ತಂದೆಗೆ ಶಕ್ತಿ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಕೇಸ್‌ನಲ್ಲಿ ಬೇರೆ ಅನಾಮಧೇಯ ವ್ಯಕ್ತಿಯ ಹೆಸರನ್ನು ಸೇರಿಸಿ ನಿಜವಾದ ಆರೋಪಿಯನ್ನು ಕೈಬಿಡಬಾರದು. ಯಾವುದೇ ಮುಲಾಜು, ಬೆದರಿಕೆಗೆ ಒಳಗಾಗದೇ ನಿರ್ಭಯವಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಕಾನೂನು ಹೋರಾಟದ ಮೂಲಕವಾದರೂ ತಾರ್ಕಿಕ ಅಂತ್ಯ ಮುಟ್ಟಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಲೋಕಿಕೆರೆ ಬಾಗರಾಜ್, ದೂಡಾ ಮಾಜಿ ಅಧ್ಯಕ್ಷರಾದ ದೇವರಮನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಗೋಣೆಪ್ಪ, ಟಿಂಕರ್ ಮಂಜಣ್ಣ, ರಾಕೇಶ್ ಜಾಧವ್, ಮಂಜುನಾಥ್ ಸೇರಿಂದತೆ ಮತ್ತಿತರರು ಹಾಜರಿದ್ದರು.
2ಎ ಮೀಸಲಾತಿ ಜಾರಿಗೆ ಆಗ್ರಹ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದ ಎದುರಿನ ನೂರು ಹೆಕ್ಟೇರ್ ಜಾಗದಲ್ಲಿ ವಿರಾಟ್ ಮಹಾಶಕ್ತಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಶಿವಶಂಕರ್ ಇತ್ತೀಚೆಗಷ್ಟೇ ತಿಳಿಸಿದ್ದರು. ದಾವಣಗೆರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿರಾಟ್ ಮಹಾಶಕ್ತಿ ಸಮಾವೇಶಕ್ಕೆ ಸುಮಾರು 15 ಲಕ್ಷಕ್ಕೂ ಹೆಚ್ಚು ಪಂಚಮಸಾಲಿಗಳು ಆಗಮಿಸಲಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆ ಹುಸಿಯಾಗಿದೆ. ಈ ಕಾರಣಕ್ಕೆ ಪಂಚಮಸಾಲಿಗಳ ಶಕ್ತಿ ತೋರಿಸುತ್ತೇವೆ ಎಂದು ತಿಳಿಸಿದ್ದರು.
ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದೇವೆ. ದಾವಣಗೆರೆ ಜಿಲ್ಲೆಯೊಂದರಿಂದಲೇ ಒಂದು ಸಾವಿರ ಕ್ವಿಂಟಾಲ್ ಅಕ್ಕಿ ನೀಡಲಾಗುತ್ತದೆ. ಅದೇ ರೀತಿಯದಲ್ಲಿ ಸಮಾಜದ ಮುಖಂಡರು ದಾನ ನೀಡುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿದ್ದಾರೆ. ಒಟ್ಟಾರೆ ಸಮಾಜದವರೆಲ್ಲರ ಸಹಕಾರದಿಂದ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶಿಸುತ್ತೇವೆ ಎಂದಿದ್ದರು.












Click it and Unblock the Notifications