ಮೈತ್ರಿ ಸರ್ಕಾರ ಏನಾಗುತ್ತದೆ ಎಂದು ಹೇಳುವುದು ಕಷ್ಟ: ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಜುಲೈ 08: ಮೈತ್ರಿ ಸರ್ಕಾರ ಇರುತ್ತದೆಯೋ, ಉರುಳುತ್ತದೆಯೋ ಹೇಳುವುದು ಕಷ್ಟವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ಅವರಂತಹಾ ಹಿರಿಯರೇ ಹೀಗೆ ರಾಜೀನಾಮೆ ಕೊಟ್ಟು ಹೋಗಿರುವುದು ನೋಡಿದರೆ ಬೇಸರವಾಗುತ್ತದೆ , ಆದರೇನು ಮಾಡುವುದು ಮನುಷ್ಯನಿಗೆ ಆಸೆ ಎಂಬುದು ಸಾಮಾನ್ಯ ಎಂದು ಹೇಳಿದರು.
ನೀವು ಬೆಂಗಳೂರಿಗೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ ಅವರು, ನನ್ನನ್ನು ಯಾರೂ ಬೆಂಗಳೂರಿಗೆ ಕರೆದೇ ಇಲ್ಲ, ನಾನೇಕೆ ಬೆಂಗಳೂರಿಗೆ ಹೋಗಲಿ ಎಂದು ಹಾಸ್ಯ ಮಾಡಿದರು.

ಸಿದ್ದರಾಮಯ್ಯ ಅಥವಾ ಖರ್ಗೆ ಸಿಎಂ ಆಗುತ್ತಾರಂತೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ, ಅದೆಲ್ಲಾ ಸುಳ್ಳು, ಕುಮಾರಸ್ವಾಮಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.












Click it and Unblock the Notifications