ನಮ್ಮ ಶಾಸಕರಿಗೆ 50 ಕೋಟಿ ನೀಡುವುದಾಗಿ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ-ಕಾಂಗ್ರೆಸ್ ಶಾಸಕ
ದಾವಣಗೆರೆ, ಅಕ್ಟೋಬರ್ 27: ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಎರಡೂವರೆ ವರ್ಷದ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ. ಇದರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ ಗಾಣಿಗ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕಾಗಿ ಡಿ. ಕೆ ಶಿವಕುಮಾರ್ ದುಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೈಕಮಾಂಡ್‌ನಲ್ಲಿ ಏನು ತೀರ್ಮಾನ ಆಗಿದೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಬಿಜೆಪಿಯವರು ಇಲ್ಲಸಲ್ಲದ ಹೇಳಿಕೆ ನೀಡಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವು ಐದು ಕಲ್ಯಾಣ ಯೋಜನೆಗಳನ್ನು ಕೊಟ್ಟಿದ್ದು, ಜನರಿಗೆ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್‌ನಲ್ಲಿಲ್ಲ, ಬಿಜೆಪಿಗೆ ಹೋಗಿದ್ದಾರೆ. ಅಭ್ಯರ್ಥಿ ನಿಲ್ಲಿಸಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು 50 ಶಾಸಕರ ಸಂಪರ್ಕ ಮಾಡಿದ್ದಾರೆ
ನಾಲ್ಕು ದಿಕ್ಕಿನಲ್ಲೂ ಆಪರೇಷನ್ ಕಮಲ ನಡೆಯುತ್ತಿದೆ. ಈಗಾಗಲೇ ಬಿಜೆಪಿಯವರು 50 ಶಾಸಕರ ಸಂಪರ್ಕ ಮಾಡಿದ್ದಾರೆ ಎಂದು ಹೇಳುವ ಮೂಲಕ ರವಿಕುಮಾರ್ ಗಾಣಿಗ ಮತ್ತೊಂದು ಬಾಂಬ್ ಸಿಡಿಸಿದರು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಆಪ್ತ ಸಹಾಯಕ ಸಂತೋಷ್ ಅವರಿಂದ ಈ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ನೀಡುವುದಾಗಿ ಬಿಜೆಪಿಯವರು ಆಮೀಷವೊಡ್ಡುತ್ತಿದ್ದಾರೆ. ಮೈಸೂರು ಮತ್ತು ಬೆಳಗಾವಿ ಭಾಗದ ಬಿಜೆಪಿ ನಾಯಕರು ಡಿಮ್ಯಾಂಡ್ ಇಡುತ್ತಿದ್ದಾರೆಯ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಮ್ಮ ಶಾಸಕ ಮಿತ್ರರೊಬ್ಬರನ್ನು ಸಂತೋಷ ಭೇಟಿ ಆಗಿದ್ದಾನೆ. ಯಾರು ಕಾಂಗ್ರೆಸ್ ಜೆಡಿಎಸ್‌ಅನ್ನು ತೆಗೆದ್ರೋ ಅದೇ ಟೀಂ ಮತ್ತೆ ಸಕ್ರಿಯವಾಗಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೇ ಆರೋಪಿಸಿದರು.
ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ, ಬೆಳಗ್ಗೆ ಎದ್ದ ತಕ್ಷಣ ಕಾಂಗ್ರೆಸ್ ಅವರನ್ನು ಹುಡುಕುವುದೇ ಕಾಯಕವಾಗಿಬಿಟ್ಟಿದೆ. ನಮ್ಮ ಶಾಸಕರ ಜೊತೆ ಮಾತನಾಡಿದ ಆಡಿಯೋ ಮತ್ತು ವಿಡಿಯೋ ಇದೆ. ಸಂದರ್ಭ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ. ಸ್ಪೆಷಲ್ ಫ್ಲೈಟ್ ಮಾಡ್ತೀವಿ, ಮಂತ್ರಿ ಮಾಡುತ್ತೀವಿ. ಅಮಿತ್ ಶಾ ಭೇಟಿ ಮಾಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಮಿತ್ ಶಾ ಹೆಸರು ಹೇಳಿ ಆಸೆ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ.
49 ಶಾಸಕರು ನಮ್ಮ ಕಡೆ ಇದ್ದಾರೆ. ನೀವು 50ನೇ ಶಾಸಕ ಅಂತಾ ಹೇಳ್ತಾರೆ. ನಾಲ್ಕು ದಿಕ್ಕುಗಳಿಂದಲೂ ಈ ಪ್ರಯತ್ನ ನಡೆಯುತ್ತಿದೆ. ಈ ವಿಚಾರ ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತಂದಿದ್ದೇವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ನಮ್ಮ ಶಾಸಕರು ಸಹ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಗಮನಕ್ಕೆ ತಂದಿದ್ದಾರೆ ಎಂದರು.
ಜಗ್ಗೇಶ್, ದರ್ಶನ್, ರಾಕ್‌ಲೈನ್ ವೆಂಕಟೇಶ್ ಅರೆಸ್ಟ್ ಮಾಡಿ
ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಗ್‌ಬಾಸ್‌ನಲ್ಲಿದ್ದ ವರ್ತೂರು ಸಂತೋಷ್ ಅಮಾಯಕ ಹುಡುಗ. ಬಿಗ್‌ಬಾಸ್ ಮನೆಯಲ್ಲಿ ಸಂತೋಷ್ ಹಿಡ್ಕೊಂಡ್ ಬಂದ ಹಾಗೇ ಉಳಿದವರನ್ನು ಹಿಡ್ಕೊಂಡ್ ಬರಬೇಕು. ಅಮಾಯಕರನ್ನು ಹಿಡಿದು ಒಳಗಡೆ ಹಾಕುವುದು ತಪ್ಪು. ಅವನೊಬ್ಬ ರೈತ. ಅವನಿಗೆ ಕಾನೂನು ಅರಿವು ಇತ್ತೋ ಇಲ್ಲವೋ ಗೊತ್ತಿಲ್ಲ. ಜಗ್ಗೇಶ್, ದರ್ಶನ್, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಉಳಿದವರನ್ನು ಅರೆಸ್ಟ್ ಮಾಡಿ. ರೈತರಿಗೊಂದು ನ್ಯಾಯ ಸೆಲೆಬ್ರಿಟಿಗೆ ಒಂದು ನ್ಯಾಯ ಆಗಬಾರದು ಎಂದು ಹೇಳಿದರು.












Click it and Unblock the Notifications