ಬಸವರಾಜ ಬೊಮ್ಮಾಯಿ ಕರ್ನಾಟಕದ ಅತ್ಯಂತ ಕೋಮುವಾದಿ ಸಿಎಂ: ನಟ ಚೇತನ್ ಆರೋಪ
ದಾವಣಗೆರೆ, ಡಿಸೆಂಬರ್ 25: ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡಲು ಬಿಜೆಪಿ ಸರ್ಕಾರ ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಮುಗಿಬಿದ್ದಿದೆ. ಈ ಕಾಯ್ದೆ ಮಂಡನೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಅದರಲ್ಲಿಯೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತಾಂತರ ನಿಷೇಧ ವಿಧೇಯಕ ಜಾರಿಯಾಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಳಮನೆಯಲ್ಲಿ ಮಂಡನೆಯಾಗಲು ಬಿಟ್ಟಿಲ್ಲ. ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಪರಿಷತ್ ಸಭಾನಾಯಕ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಆದರೆ ಈ ಕಾಯ್ದೆ ಪರ ಹಾಗೂ ವಿರೋಧ ವ್ಯಕ್ತವಾಗುತ್ತಲೇ ಇದೆ.
ಇನ್ನು ದಾವಣಗೆರೆಗೆ ಆಗಮಿಸಿದ್ದ ಚಿತ್ರನಟ ಚೇತನ್ ಮತಾಂತರ ನಿಷೇಧ ವಿಧೇಯಕ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆ ಮಂಡನೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಪ್ರಗತಿಪರ ಚಿಂತನೆಯುಳ್ಳವರು ಎಂಬ ಅಭಿಪ್ರಾಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಾಂತರ ನಿಷೇಧ ವಿಧೇಯಕ ಕಾಯ್ದೆ ಜಾರಿಗೆ ಮುಂದಾಗಿರುವುದನ್ನು ಗಮನಿಸಿದರೆ ಕರ್ನಾಟಕ ಇತಿಹಾಸದಲ್ಲೇ ಕೋಮುವಾದಿ ಮುಖ್ಯಮಂತ್ರಿ ಎನಿಸಿಸಿಕೊಂಡಿದ್ದಾರೆ. ಜನತಾ ಪರಿವಾರದಿಂದ ಬಂದವರು, ಜಾತ್ಯತೀತ ವಿಚಾರಗಳಲ್ಲಿ ನಂಬಿಕೆ ಇಟ್ಟವರು, ಪ್ರಗತಿಪರ ಚಿಂತನೆಯುಳ್ಳವರು ಎಂಬ ಅಭಿಪ್ರಾಯ ನಮ್ಮೆಲ್ಲರಲ್ಲಿಯೂ ಇತ್ತು. ಅವರು ಸಿಎಂ ಆಗಿದ್ದಾಗ ಸಾಕಷ್ಟು ವಿಶ್ವಾಸ, ನಂಬಿಕೆ ಇತ್ತು. ಅತ್ಯುತ್ತಮ
ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವೂ ಇತ್ತು. ಆದರೆ ಈಗ ಅವರು ನಡೆದುಕೊಳ್ಳುತ್ತಿರುವ ರೀತಿ ಗಮನಿಸಿದರೆ ಅವರೊಬ್ಬ ಕೋಮುವಾದಿ ಮುಖ್ಯಮಂತ್ರಿ ಎಂದು ಆರೋಪಿಸಿದರು.

ಮತಾಂತರ ನಿಷೇಧ ಕಾಯ್ದೆ ವಿಧೇಯಕ ಅನ್ನುವುದೇ ಅಸಂವಿಧಾನ
ಬಸವರಾಜ ಬೊಮ್ಮಾಯಿ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು, ಪ್ರಗತಿಪರ ವಿಚಾರಗಳಲ್ಲಿಯೂ ಹೆಸರು ಗಳಿಸಿದ್ದರು. ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದರು. ಒಳ್ಳೆಯ ರಾಜಕಾರಣಿ ಎನಿಸಿಕೊಂಡಿದ್ದರು. ಇವರೂ ಸಹ ತಂದೆಯ ಹಾದಿಯಲ್ಲಿಯೇ ಬೊಮ್ಮಾಯಿ ಅವರು ಕೆಲಸ ಮಾಡುತ್ತಾರೆ ಎಂಬುದು ಸುಳ್ಳಾಗಿದೆ. ಆರ್‌ಎಸ್‌ಎಸ್‌ನವರು ಹೇಳಿದ ರೀತಿಯಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿಗೆ ಮುಂದಾಗಿರುವುಕ್ಕೆ ನಮ್ಮ ವಿರೋಧ ಇದೆ
ಎಂದು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ವಿಧೇಯಕ ಅನ್ನುವುದೇ ಅಸಂವಿಧಾನ. ಧರ್ಮ ಆಯ್ಕೆ ಮಾಡಿಕೊಳ್ಳುವುದು ಆರ್ಟಿಕಲ್ 25, 28ರಲ್ಲಿದೆ. ಹೀಗಿದ್ದಾಗ ಮತಾಂತರ ನಿಷೇಧ ಅನ್ನುವ ಪ್ರಶ್ನೆ ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.

ಅಂಬೇಡ್ಕರ್ ಬೌದ್ಧ ಧರ್ಮ ಸೇರಿದರು
ಎಲ್ಲರಿಗೂ ಅವರದ್ದೇ ಆದ ಹಕ್ಕಿದೆ. ಬಸವಣ್ಣನವರು ಅವರದ್ದೇ ಆದ ಸ್ವಂತ ಧರ್ಮ ಕಟ್ಟಿದರು. ಅಂಬೇಡ್ಕರ್ 4 ಲಕ್ಷ ಜನರೊಂದಿಗೆ ಬೌದ್ಧ ಧರ್ಮ ಸೇರಿದರು. ಇವೆಲ್ಲಾ ನಮ್ಮ ಅಡಿಪಾಯದಲ್ಲಿದೆ. ಬಲವಂತದ ಮತಾಂತರಕ್ಕೆ ಕಾನೂನು ರೀತಿ ಕ್ರಮವನ್ನು ಕೈಗೊಳ್ಳಬಹುದು. ಮತಾಂತರ ನಿಷೇಧ ಕಾಯ್ದೆ ಕ್ರಿಶ್ಚಿಯನ್‌ರನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದಿರುವ ಕಾಯ್ದೆಯಾಗಿದೆ. ಈ ರೀತಿ ಹೆದರಿಸುವುದು, ಬೆದರಿಸುವುದು ಸರಿಯಲ್ಲ ಎಂದು ಹೇಳಿದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಚೇತನ್, ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಎಂಇಎಸ್ ಹಾಗೂ ಶಿವಸೇನೆ ಪುಂಡಾಟ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವಾಣಿಜ್ಯ ಚಲನಚಿತ್ರ ಮಂಡಳಿ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ. ಬಂದ್‌ನಲ್ಲಿ ನೇರವಾಗಿ ಪಾಲ್ಗೊಳ್ಳುವುದು, ನೈತಿಕ ಬೆಂಬಲ ನೀಡುವ ವಿಚಾರ ಮಂಡಳಿಗೆ ಬಿಟ್ಟಿದ್ದು. ಆದರೆ ಹೋರಾಟದಲ್ಲಿ ಪಾಲ್ಗೊಳ್ಳಲೇಬೇಕು ಎಂಬುದು ಸರಿಯಲ್ಲ. ಕನ್ನಡ ನಾಡು, ನುಡಿ, ನೆಲ, ಜಲ ವಿಚಾರವಾಗಿ ಬಂದಾಗ ನಟರೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ನಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತೇವೆ, ಹೋರಾಟ ಮಾಡುತ್ತೇವೆ. ಪ್ರತಿಭಟನೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು.

ಕನ್ನಡ ನಾಡಿನ ಸೇವೆಗೆಂದೇ ವಾಪಸ್ ತವರಿಗೆ ಬಂದಿದ್ದೇನೆ
ಡಿಸೆಂಬರ್ 31ರ ಕರ್ನಾಟಕ ಬಂದ್‌ನಲ್ಲಿ ನೀವು ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡದ ಚೇತನ್, ಪ್ರತಿಭಟನೆ ನಡೆಸಲಿ. ಬಂದ್ ವಿಚಾರದಲ್ಲಿ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಹಲವು ಅಸೋಸಿಯೇಷನ್‌ಗಳು ಇವೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರ ಒಕ್ಕೂಟ ಹೀಗೆ ನಾನಾ ಅಸೋಸಿಯೇಷನ್‌ಗಳಿದ್ದು, ಅವರೆಲ್ಲರೂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕನ್ನಡದ ಅಸ್ಮಿತೆ ಕಾಪಾಡಲು ನಾವು ಶ್ರಮಿಸುತ್ತೇವೆ. ನಾನು ಅಮೆರಿಕದಲ್ಲಿ ಹುಟ್ಟಿ ಬೆಳೆದರೂ, ಕನ್ನಡ ನಾಡಿನ ಸೇವೆಗೆಂದೇ ವಾಪಸ್ ತವರಿಗೆ ಬಂದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ, ಮುಂದೆಯೂ ಮಾಡುತ್ತೇನೆ. ಕನ್ನಡ ವಿಚಾರ ಬಂದಾಗ ನಾನು ಸಹ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ಇನ್ನು ಕರ್ನಾಟಕದ ರಾಜ್ಯದಲ್ಲಿನ ದೇವದಾಸಿಯರ ಬದುಕು ಹಸನಾಗಿಸಲು ಹಾಗೂ ಅವರಿಗೊಂದು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದೇನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿನ ದೇವದಾಸಿಯರನ್ನು ಭೇಟಿ ಮಾಡಿ ಸಂಕಷ್ಟ ಆಲಿಸಿದ್ದೇನೆ. ಅವರಿಗಾಗಿರುವ ಸಮಸ್ಯೆಗಳು, ಎದುರಿಸುತ್ತಿರುವ ಸವಾಲುಗಳು, ಸರಿಯಾಗಿ ಸಿಗದ ಮಾಸಾಶನ, ಕಷ್ಟ ಹೀಗೆ ಎಲ್ಲಾ ರೀತಿಯಲ್ಲಿ ಸಮಾಲೋಚನೆ ಮಾಡಿದ್ದೇನೆ. ದೇವದಾಸಿ
ತಾಯಂದಿರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಐದು ಸಾವಿರ ರೂಪಾಯಿಗೆ ಮಾಸಾಶನ ಹೆಚ್ಚಿಸಬೇಕು
ದೇವದಾಸಿಯರಿಗೆ ಶಾಶ್ವತ ಪರಿಹಾರ ಸಿಗಬೇಕು. ಅವರ ಮಕ್ಕಳಿಗೆ ಈಗಲೂ ಸಮಾಜದಲ್ಲಿ ಸೂಕ್ತ ಸ್ಥಾನ, ಘನತೆ ಇಲ್ಲದಂತಾಗಿದೆ. ನಿಕೃಷ್ಟವಾಗಿ ಅವರನ್ನು ಕಾಣಲಾಗುತ್ತಿದೆ. ಅವರಿಗೆ ಇರಲು ಒಂದು ಮನೆಯೂ ಇಲ್ಲ, ಇನ್ನು ತಿಂಗಳಿಗೆ ನೀಡುವ ಒಂದೂವರೆ ಸಾವಿರ ರೂಪಾಯಿ ಮಾಸಾಶನವೂ ಸರಿಯಾಗಿ ಬರುತ್ತಿಲ್ಲ. ಈ ಹಣವನ್ನು ಐದು ಸಾವಿರ ರೂಪಾಯಿಗೆ ಹೆಚ್ಚಿಸಬೇಕು. ದೇವದಾಸಿಯರಿಗೆ ಸೂರು ಕಲ್ಪಿಸಿಕೊಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.
ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ಸಿಗುವಂತಾಗಬೇಕು ಎಂಬುದೂ ಸೇರಿದಂತೆ ಇವರ ಬದುಕು ಬೆಳಗುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಇನ್ನು ಎಲ್ಲೆಡೆ ಓಡಾಡಿ ಸಂಕಷ್ಟ ಆಲಿಸಿ ಬಳಿಕ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಭೇಟಿ ಮಾಡಿ ದೇವದಾಸಿಯರ ಶ್ರೇಯೋಭಿವೃದ್ಧಿಗೆ ಇರುವ 2018ರ ಕಾಯ್ದೆ ಜಾರಿಗೊಳಿಸುವಂತೆ ಮನವಿ ಮಾಡಲಾಗುವುದು ಎಂದು ನಟ ಚೇತನ್ ತಿಳಿಸಿದರು.












Click it and Unblock the Notifications