ಅಪ್ಪ ಮಗನ ತಂತ್ರ ಇದು ಎಂದು ಜಾಡಿಸಿದ ಆಯನೂರು ಮಂಜುನಾಥ್
ದಾವಣಗೆರೆ, ನವೆಂಬರ್ 26: "ಯಡಿಯೂರಪ್ಪನವರನ್ನು ಎತ್ತಾಕುವ ವಿದ್ಯೆಯನ್ನು ಅಪ್ಪ ಮಗ ಸೇರಿ ಹೆಣೆಯುತ್ತಿದ್ದಾರೆ" ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಎಚ್ ಡಿ ದೇವೇಗೌಡ ಅವರ ವಿರುದ್ಧ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, "ಬಿಜೆಪಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತ. ಈ ಕಾರಣಕ್ಕಾಗೇ ಜೆಡಿಎಸ್ ಬಿಜೆಪಿಯನ್ನು ಸಮರ್ಥಿಸಿಕೊಂಡು ಬರುತ್ತಿದೆ. ಒಂದು ಕಡೆ ಅನರ್ಹ ಶಾಸಕರನ್ನು ಸೋಲಿಸುತ್ತೇವೆ ಎನ್ನುತ್ತಾರೆ, ಮತ್ತೊಂದು ಕಡೆ ಯಡಿಯೂರಪ್ಪನವರ ಸರ್ಕಾರ ಬೀಳಲು ಬಿಡೋಲ್ಲ ಎನ್ನುತ್ತಿದ್ದಾರೆ. ಯಾಕಂದ್ರೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಇವರ ಬೆನ್ನ ಮೇಲೆ ಯಡಿಯೂರಪ್ಪನವರನ್ನು ಕೂರಿಸಿಕೊಳ್ಳಬೇಕು ಎನ್ನುವ ತಂತ್ರ ರೂಪಿಸಿದ್ದಾರೆ" ಎಂದು ಹೇಳಿದರು.

"ಹಿಂದಿನ ಸಾರಿ ಎತ್ತಾಕಿದರಲ್ಲ, ಈಗಲೂ ಅದನ್ನೇ ಮಾಡೋಕೆ ಹೊರಟಿದ್ದಾರೆ. ಇಂಥ ಎತ್ತಾಕುವಂತಹ ವಿದ್ಯೆಯನ್ನು ಅಪ್ಪ ಮಗ ಹೆಣೆದಿದ್ದಾರೆ. ಆದರೆ ಜನರಿಗೆ ಇದೆಲ್ಲ ಗೊತ್ತಿದೆ, ಆದಕಾರಣ ಬಿಜೆಪಿಯನ್ನು ಸೋಲಿಸಲು ಬಿಡೋದಿಲ್ಲ. ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಮುಂದುವರೆಯುತ್ತದೆ. ಯಡಿಯೂರಪ್ಪನವರ ನೇತೃತ್ವದಲ್ಲಿ 15ಕ್ಕೆ 15 ಅನ್ನು ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications