ಬಿಜೆಪಿಯ ಹಗರಣಗಳಿಂದ ಜನ ಬೇಸತ್ತಿದ್ದಾರೆ: ದಾವಣಗರೆಯಲ್ಲಿ ಶಾಮನೂರು ಶಿವಶಂಕರಪ್ಪ ಆಕ್ರೋಶ
ದಾವಣಗೆರೆ, ಜನವರಿ, 18: ಬಿಜೆಪಿ ಹಗರಣಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಪರ ಅಲೆ ಎದ್ದಿದ್ದು, ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷದ ಕಡೆ ಒಲವು ಹೆಚ್ಚಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ ಸರ್ಕಾರ ರಚನೆ ಮಾಡಬೇಕೆಂಬ ಸಂಕಲ್ಪ ಜನರದ್ದಾಗಿದೆ. ಚಿತ್ರದುರ್ಗದ ಗುತ್ತಿಗೆದಾರರ ಸಂಘದವರು ಕಮೀಷನ್ ಕೇಳುತ್ತಾರೆ ಎಂಬ ಆರೋಪ ಮಾಡಿದ್ದಾರೆ. ಸ್ಯಾಂಟ್ರೋ ರವಿ ಸೇರಿದಂತೆ ಹೊಸ ಹೊಸ ಹಗರಣಗಳು ದಿನಕಳೆದಂತೆ ಹೊರಗೆ ಬರುತ್ತಿವೆ. ಸರ್ಕಾರ ಇದ್ದರೆ ಮತ್ತಷ್ಟು ಹಗರಣಗಳು ಹೊರಬರಲಿವೆ ಎಂದು ಭವಿಷ್ಯ ನುಡಿದರು.
200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಘೋಷಣೆ ಮಾಡಲಾಗಿದೆ. ಇನ್ನು ಹಲವು ಭರವಸೆಗಳು ಘೋಷಣೆ ಆಗಲಿವೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಬಂದಾಗ ಜನರ ಸುನಾಮಿ ಎದ್ದಿತ್ತು. ದಾವಣಗೆರೆಯಲ್ಲಿ ನಡೆಯುವ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸಲಿದ್ದಾರೆ ಎಂದರು.

BJPಯ ದುರಾಡಳಿತದಿಂದ ಜನ ಬೇಸತ್ತಿದ್ದಾರೆ
ಇನ್ನು ಫೆಬ್ರವರಿ ತಿಂಗಳಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಉಳಿದೆಡೆ ನಂತರ ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಜನರು ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ನಮಗೇನೂ ಹೊಸದಲ್ಲ
ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾನೇ ಕಣಕ್ಕಿಳಿಯುತ್ತೇನೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳಿಂದ ಜಯಭೇರಿ ಭಾರಿಸಲಿದ್ದೇನೆ. ಚುನಾವಣೆ ನಮಗೇನೂ ಹೊಸದಲ್ಲ. ಜನರು ನಮ್ಮ ಪರ ಇದ್ದಾರೆ. ಬಿಜೆಪಿಯ ಕುತಂತ್ರಕ್ಕೆ ಈ ಬಾರಿ ಮಣೆ ಹಾಕಲ್ಲ ಎಂದು ಹೇಳಿದರು.

ಬಿಜೆಪಿಯವರಿಂದ ವದಂತಿ ಸೃಷ್ಟಿ
ನಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ ಮಾತನಾಡಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ, ಉತ್ತರ ಕ್ಷೇತ್ರದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪರ್ಧೆ ಮಾಡುತ್ತಾರೆ. ಇದರಲ್ಲಿ ಸಂಶಯ ಬೇಡ. ಬಿಜೆಪಿಯವರು ಸೇರಿದಂತೆ ಕೆಲವರು ವದಂತಿ ಸೃಷ್ಟಿ ಮಾಡುತ್ತಿದ್ದು, ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ. ಈಗಾಗಲೇ ಕೆಪಿಸಿಸಿ 2 ಬಾರಿ ಸರ್ವೇ ನಡೆಸಿದೆ. ರಾಜ್ಯ ನಾಯಕರು, ಸ್ಥಳೀಯ ಮುಖಂಡರು ಹಾಗೂ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ಅವರೆಲ್ಲರೂ ಸೇರಿಕೊಂಡು ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಶಿವಶಂಕರಪ್ಪ ಆಕ್ರೋಶ
ಇನ್ನು ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣ ಸಂಬಂಧ ಮಲ್ಲಿಕಾರ್ಜುನ್ ಅವರಿಗೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡ ಶಾಮನೂರು ಶಿವಶಂಕರಪ್ಪ, ಸಗಣಿ ಅವರ ಮುಖಕ್ಕೆ ಬೀಳುತ್ತದೆ ಅಂತಾ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುದುರೆ, ಆಕಳು, 500 ಕುರಿಗಳು ಸೇರಿದಂತೆ ಪ್ರಾಣಿಗಳನ್ನು ಸಾಕುತ್ತಿದ್ದೇವೆ. ವಿನಾಕಾರಣ ಆರೋಪ ಮಾಡುವ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಎಂದು ಕಿಡಿಕಾರಿದರು.












Click it and Unblock the Notifications