Vani Vilasa Sagara Dam: ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಗೆ ಇನ್ನೆಷ್ಟು ಅಡಿ ಬಾಕಿಯಿದೆ?
Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯ ಮತ್ತೊಮ್ಮೆ ತುಂಬಲಿದೆ ಎಂಬ ಆಶಾಭಾವನೆ ಚಿತ್ರದುರ್ಗ ಜಿಲ್ಲೆ, ಹಿರಿಯೂ ತಾಲ್ಲೂಕಿನ ರೈತರಲ್ಲಿ ಮೂಡುತ್ತಿದೆ. ಹಾಗಾದರೆ ಇದೀಗ ಪ್ರಸ್ತುತ ಡ್ಯಾಂ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೀಗ ಭದ್ರಾ ಜಲಾಶಯದಿಂದ ಬರುವ 700 ಕ್ಯೂಸೆಕ್ ನೀರು ಬರುತ್ತಿದ್ದು, ಜೊತೆಗೆ ಇದೀಗ ಎತ್ತಿನಹೊಳೆಯಿಂದ 1,500 ಕ್ಯೂಸೆಕ್ ನೀರು ಹರಿದುಬಂದರೆ, ಈ ಮೂಲಕ ಮುಂದಿನ ದಿನಗಳಲ್ಲಿ ವಾಣಿ ವಿಲಾಸ ಸಾಗರ ಮತ್ತೆ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೆಪ್ಟೆಂಬರ್ 6ರ ಗೌರಿಹಬ್ಬದಂದು ಎತ್ತಿನ ಹೊಳೆ ನೀರು ಮೇಲೆತ್ತುವ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. 48 ಕಿಲೋ ಮೀಟರ್ ತೆರೆದ ಕಾಲುವೆಯಲ್ಲಿ ವೇದ ವ್ಯಾಲಿ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತದೆ. ಆದ್ದರಿಂದ ತಾಲ್ಲೂಕಿನ ಮತ್ತು ಜಿಲ್ಲೆಯ ಜನರು ವಿವಿ ಸಾಗರ ಕೋಡಿ ಬೀಳುವ ದೃಶ್ಯವನ್ನು ಆದಷ್ಟು ಶೀಘ್ರ ಕಣ್ತುಂಬಿಕೊಳ್ಳುವ ತವಕದಲ್ಲಿದ್ದಾರೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 118.08ರಷ್ಟಿದ್ದು, ಜುಲೈ ತಿಂಗಳ ಅಂತ್ಯದಲ್ಲಿ 113.50 ಅಡಿಯಷ್ಟಿದ್ದ ನೀರಿನ ಮಟ್ಟ ಇದೀಗ 118.08ಕ್ಕೆ ಏರಿದೆ. ಒಂದೂವರೆ ತಿಂಗಳ ಅಂತರದಲ್ಲಿ ಸುಮಾರು 5 ಅಡಿಯಷ್ಟು ನೀರು ಶೇಖರಣೆ ಆಗಿದ್ದು, ಭದ್ರಾ ಜಲಾಶಯದಿಂದ 700 ಕ್ಯೂಸೆಕ್ ನೀರಿನ ಜೊತೆಗೆ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿತ್ತು.
ಬರ ಪ್ರದೇಶ ಎಂದು ಕರೆಸಿಕೊಳ್ಳುವ ಈ ಭಾಗದಲ್ಲಿ ವಾಣಿ ವಿಲಾಸ ಸಾಗರ ಜಲಾಶಯವೇ ನೀರಿಗೆ ಆಧಾರ ಸ್ಥಂಭವಾಗಿದ್ದು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ವ್ಯಾಪ್ತಿಯ ಜನರ ಕುಡಿಯುವ ನೀರಿನ ಬವಣೆ ನೀಗಿಸಿದೆ. ಇದೀಗ ಎತ್ತಿನಹೊಳೆಯ 1,500 ಕ್ಯೂಸೆಕ್ ನೀರು, ಭದ್ರಾದ 700 ಕ್ಯೂಸೆಕ್ ನೀರು ಮತ್ತೆ ಮಳೆ ಏನಾದರೂ ಒಲಿದರೆ, ಜಿಲ್ಲೆಯ ಜನ ಕೇವಲ ಎರಡೇ ವರ್ಷದಲ್ಲಿ ಕೆರೆ ಕೋಡಿ ಬೀಳುವ ಸಮಯಕ್ಕೆ ಸಾಕ್ಷಿ ಆಗಲಿದ್ದಾರೆ.
1933ರಲ್ಲಿ ಕೋಡಿ ಬಿದ್ದಿದ್ದ ಕೆರೆಯು ಆನಂತರ 89 ವರ್ಷಗಳ ನಂತರ 2022ರಲ್ಲಿ ಕೋಡಿ ಹರಿದಿತ್ತು. ಈಗಾಗಲೇ ಭದ್ರಾ ಜಲಾಶಯವು ತುಂಬಿದ್ದು, 2 ಟಿಎಂಸಿ ನೀರು ಬಿಡಲಾಗುತ್ತದೆ ಎನ್ನಲಾಗಿದ್ದು, ದಿನವೂ 700 ಕ್ಯೂಸೆಕ್‌ನಂತೆ ಇನ್ನೂ ಒಂದು ತಿಂಗಳ ಕಾಲ ಭದ್ರೆ ವಿವಿ ಸಾಗರಕ್ಕೆ ಹರಿಯಲಿದ್ದಾಳೆ ಎನ್ನಲಾಗಿದೆ. ಒಟ್ಟಿನಲ್ಲಿ ಯಾವ ಮೂಲದಿಂದಲಾದರೂ ವಾಣಿ ವಿಲಾಸ ಸಾಗರದ ಒಡಲು ತುಂಬಲಿ ಎಂದು ರೈತರು ಕಾಯುತ್ತಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ಪ್ರತಿದಿನ 1,500 ಕ್ಯೂಸೆಕ್ ನೀರು ಹರಿಯುವುದರಿಂದ ಈ ವರ್ಷವೂ ಸಹ ವಾಣಿ ವಿಲಾಸ ಜಲಾಶಯ ಭರ್ತಿಯಾಗುವ ಎಲ್ಲಾ ನಿರೀಕ್ಷೆಯಿದೆ. ಹಾಗೇನಾದರೂ ಆದಲ್ಲಿ ಕೇವಲ 2 ವರ್ಷದಲ್ಲೇ 2 ಬಾರಿ ಕೋಡಿ ಬೀಳುವಂತಹ ಸನ್ನಿವೇಶ ನೋಡಲು ಸಿಗಲಿದೆ. ಆದಷ್ಟು ಬೇಗ ಆ ದಿನಗಳು ಬರಲಿ ಎಂಬುದೇ ನಮ್ಮೆಲ್ಲರ ಬಯಕೆಯಾಗಿದೆ ಎಂದರು.
ತಾಲ್ಲೂಕಿನಿಂದ 20 ಕಿಲೋ ಮೀಟರ್ ದೂರವಿರುವ ವಾಣಿ ವಿಲಾಸ ಸಾಗರ ಜಲಾಶಯ ಜಿಲ್ಲೆಯ ಜೀವನಾಡಿ ಕೆರೆಯಾಗಿದೆ. 135 ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿರುವ ಜಲಾಶಯ 50 ಮೀಟರ್ ಎತ್ತರವಿದೆ. ತಾಲ್ಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಆಗುತ್ತದೆ. ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ಎದ್ದು ನಿಂತ ಜಲಾಶಯ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕುಗಳಿಗೆ ಕುಡಿವ ನೀರು ಒದಗಿಸುತ್ತದೆ.
ಸಿಮೆಂಟ್ ಬಳಸದೆ, ಕೇವಲ ಗಾರೆಯಿಂದಲೇ ನಿರ್ಮಾಣವಾದ ಜಲಾಶಯವನ್ನು ಕಳೆದ ವರ್ಷ ಭೇಟಿ ನೀಡಿ ಪರಿಶೀಲಿಸಿದ ತಜ್ಞರು ಸುಭದ್ರವಾಗಿದೆ ಎಂದಿದ್ದರು. 1932ರಲ್ಲಿ 125.50 ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ಇತಿಹಾಸ ನಿರ್ಮಿಸಿತ್ತು. ತದನಂತರ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು.
ಇದಾದ ಬಳಿಕ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹ ಆಗಿತ್ತು. 2022ರಲ್ಲಿ 130 ಅಡಿ ತುಂಬಿ ಕೋಡಿ ಬಿದ್ದು ಹೊಸ ದಾಖಲೆಯನ್ನು ನಿರ್ಮಿಸಿತ್ತು.












Click it and Unblock the Notifications