ಕೋಟೆ ನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ
ಚಿತ್ರದುರ್ಗ. ಜೂನ್ 03: ಹಲವು ವರ್ಷಗಳಿಂದ ತೀವ್ರ ಬರಕ್ಕೆ ತುತ್ತಾಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮಳೆರಾಯ ಭರ್ಜರಿ ಎಂಟ್ರಿ ಕೊಟ್ಟಿದ್ದಾನೆ. ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕು ಸೇರಿದಂತೆ ಹಲವೆಡೆ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗಿದ್ದು, ಸತತ ಬರಗಾಲಕ್ಕೆ ಕಂಗೆಟ್ಟಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ
ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಉತ್ಸಾಹದಿಂದ ಆರಂಭವಾಗುತ್ತಿವೆ, ಈ ನಡುವೆ ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಲವೆಡೆ ಅವಾಂತರವೂ ಸೃಷ್ಟಿಯಾಗಿದೆ, ಜಿಲ್ಲೆಯಾದ್ಯಂತ ಬಿರುಗಾಳಿ ಬೀಸುತ್ತಿದ್ದು, ಸಿಡಿಲಿನ ಅಬ್ಬರಕ್ಕೆ ಹಿರಿಯೂರಿನಲ್ಲಿ ತೆಂಗಿನ ಮರ ಹೊತ್ತಿ ಉರಿದಿದೆ. ತಾಲ್ಲೂಕಿನ ಜೆಜಿ ಹಳ್ಳಿ ಹೋಬಳಿಯ ಸೂರಪ್ಪನಹಟ್ಟಿ ಗ್ರಾಮದ ಮೇಣಪ್ಪನವರಿಗೆ ಸೇರಿದ ಕುರಿಗಳು ಹೊಲದಲ್ಲಿ ಬೀಡುಬಿಟ್ಟಿದ್ದರಿಂದ ಸಿಡಿಲು ಬಡಿದು 30 ಕುರಿಗಳು ಸಾವನ್ನಪಿವೆ. ಓಣಿಹಟ್ಟಿ ಸರ್ಕಾರಿ ಶಾಲಾ ಕಟ್ಟಡ ಮೇಲೆ ಮರ ಬಿದ್ದ ಪರಿಣಾಮ ಕಟ್ಟಡಕ್ಕೆ ಹಾನಿಯಾಗಿದೆ. ಮಾಯಸಂದ್ರ ಗೊಲ್ಲರಹಟ್ಟಿಯಲ್ಲಿ ಮರ ಉರುಳಿದ ಪರಿಣಾಮ ಆಟೋವೊಂದು ಜಖಂಗೊಂಡಿದೆ.

ಹಲವು ಕಡೆ ಮನೆಯ ಶೀಟುಗಳು ಹಾರಿಹೋಗಿವೆ, ಇನ್ನೂ ಕೆಲವೆಡೆ ಮನೆಯ ಚಾವಣಿ ಕುಸಿದಿದ್ದು, ಗಾಳಿಯ ರಭಸಕ್ಕೆ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ, ಕಾಟನಾಯಕನಹಳ್ಳಿ, ಓಣಿಹಟ್ಟಿ, ಎಂ.ಡಿ. ಕೋಟೆ, ಮಸ್ಕಲ್, ಈಶ್ವರಗೆರೆ, ಧರ್ಮಪುರ ಸೇರಿದಂತೆ ಮತ್ತಿತರ ಭಾಗಗಳಲ್ಲಿ ರೈತರು ಬೆಳೆದಿದ್ದ ಅಡಿಕೆ, ಬಾಳೆ ತೋಟ ನೆಲ ಕಚ್ಚಿದೆ. ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಒಟ್ಟಾರೆ ಈ ಬಾರಿ ತಡವಾಗಿಯಾದರೂ ಎಂಟ್ರಿ ಕೊಟ್ಟಿರುವ ಮುಂಗಾರು, ರೈತರ ಮೊಗದಲ್ಲಿ ನಿರೀಕ್ಷೆ ಹುಟ್ಟಿಸಿದ್ದು ಮಾತ್ರವಲ್ಲದೇ ಅವಾಂತರವನ್ನೂ ಸೃಷ್ಟಿಸಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಮಳೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಮಳೆಯ ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮಾಹಿತಿ ಪಡೆದಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಹಾಗೂ ಹಾನಿಯಾದ ಪ್ರದೇಶಗಳಿಗೆ ಮತ್ತು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.












Click it and Unblock the Notifications