ಮಳೆಗಾಲದಲ್ಲೂ ನೀರಿಲ್ಲದೆ ಸೊರಗುತ್ತಿರುವ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಿರ್ಮಾಣವಾದ ಜಲಾಶಯ-ಕಾರಣ ಏನು?
ಹಿರಿಯೂರು, ಸೆಪ್ಟೆಂಬರ್, 16: ಮುಂಗಾರು ಮಳೆ ಆರ್ಭಟಕ್ಕೆ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಇನ್ನು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯಕ್ಕೆ ಮಾತ್ರ ಪ್ರಸಕ್ತ ಸಾಲಿನಲ್ಲಿ ಯಾವುದೇ ಒಳಹರಿವು ನೀರು ಬರದೇ ಡ್ಯಾಂ ಬತ್ತಿ ಹೋಗುವ ಹಂತ ತಲುಪಿದೆ. ಹಾಗಾದರೆ ಇದೀಗ ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಯಿರಿ.
ಈಗಾಗಲೇ ಮಳೆಗಾಲ ಆರಂಭವಾಗಿ ಮುಗಿಯುತ್ತಾ ಬಂದರೂ ಜಲಾಶಯಕ್ಕೆ ಮಾತ್ರ ಯಾವುದೇ ಮಳೆ ನೀರು ಹರಿದು ಬಂದಿಲ್ಲ. ಇದೀಗ ಉತ್ತರೆ ಮಳೆ ಆರಂಭವಾಗಿದೆ. ಇನ್ನು ಅತ್ತೆ, ಚಿತ್ತೆ, ಸ್ವಾತಿ ಮತ್ತು ವಿಶಾತಿ ಮಳೆಗಳು ಮಾತ್ರ ಬಾಕಿ ಉಳಿದಿವೆ. ಉತ್ತರೆ ಮಳೆ ಆರಂಭವಾಗಿ ನಾಲ್ಕೈದು ದಿನ ಕಳೆದಿದೆ.

"ಉತ್ತರೆ ಮಳೆ ಬರಬೇಕು ಅಂದರೆ ಉತ್ತದಲ್ಲಿ ಹಾವು ಹೊರಗಡೆ ಬರುವಂತೆ ಬಿಸಿಲು ಕಾಯಬೇಕು" ಎಂಬ ಗಾದೆ ಮಾತಿದೆ. ಆದರೆ ಆಗಿನ ವಾತಾವರಣ ಗಮನಿಸಿದರೆ ಮಳೆ ಬರುವ ಮುನ್ಸೂಚನೆ ಕಡಿಮೆ ಇದೆ ಅನ್ನಿಸುತ್ತಿದೆ. ಬಿಸಿಲು ಕೂಡ ಕಾಯುತ್ತಿಲ್ಲ. ಈಗಾಗಲೇ ಮಳೆ ಇಲ್ಲದೆ ರೈತರ ಬೆಳೆಗಳು ಸೊರಗಿ ಹೋಗುತ್ತಿವೆ. ಡ್ಯಾಂಗೆ ನೀರು ಬಾರದೆ ಇರುವುದರಿಂದ ಇತ್ತ ಜವನಗೊಂಡನಹಳ್ಳಿ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುವರ್ಣಮುಖಿ ನದಿಗೆ 1963ರಲ್ಲಿ ಗಾಯತ್ರಿ ಜಲಾಶಯವನ್ನು ಅಡ್ಡಲಾಗಿ ನಿರ್ಮಿಸಲಾಗಿದೆ. ಗಾಯತ್ರಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವು 0.975 ಟಿ.ಎಂ.ಸಿ ಗಳಾಗಿದ್ದು, ಇದರಲ್ಲಿ 0.337 ಟಿ.ಎಂ.ಸಿ ಬಳಕೆಗೆ ಲಭ್ಯವಿದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 0.638 ಟಿ.ಎಂ.ಸಿ ಇರುತ್ತದೆ.
ಪ್ರಸ್ತುತ ಜಲಾಶಯದ ನೀರಿನ ಸಂಗ್ರಹಣೆಯಲ್ಲಿ ಮೂಲ ಬಧ್ಧತೆಯನುಸಾರ ಹಂಚಿಕೆಯಾದ ನೀರಿನ ಪ್ರಮಾಣದ ವಿವರಗಳ ಗಮನಿಸಿದಾಗ, ಅನುಮೋದಿತ ಮಾಸ್ಟರ್ ಪ್ಲಾನ್‌ನಂತೆ ಗಾಯತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ 0.45 ಟಿಎಂಸಿ ಆಗಿರುತ್ತದೆ. ಗಾಯತ್ರಿ ಜಲಾಶಯದಿಂದ ಜವನಗೊಂಡನಹಳ್ಳಿ ಮತ್ತು 37 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 0.028 ಟಿಎಂಸಿ ನೀರನ್ನು ಬಳಸಲು ಅನುಮತಿಸಲಾಗಿರುತ್ತದೆ.
ಈ ಒಂದು ಜಲಾಶಯ ಸುಮಾರು 7,000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜಲಾಶಯವು 145 ಅಡಿ ಎತ್ತರ ಹೊಂದಿದೆ. ಇನ್ನು 16 ಕಿಲೋ ಮೀಟರ್ ಉದ್ದದ ಬಲನಾಲೆ ಹಾಗೂ 7 ಕಿ.ಮೀ. ಉದ್ದದ ಎಡನಾಲೆ ಎಂಬ ಎರಡು ನಾಲೆಗಳಿವೆ. ಎರಡು ಕಾಲುವೆಗಳ ಮೂಲಕ 0.67 ಟಿಎಂಸಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತದೆ.
ಜಲಾಶಯದ ಒಟ್ಟು ಉದ್ದ 1021.53 ಮೀಟರ್, 9.55 ದಶಲಕ್ಷ ಘನ ಮೀಟರ್ ಹಾಗೂ ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನ ಮೀಟರ್ ಇದ್ದು, ಇದರಲ್ಲಿ ಉಪಯುಕ್ತವಲ್ಲದ ಸಂಗ್ರಹಣಾ ಸಾಮರ್ಥ್ಯ 9.55 ದಶಲಕ್ಷ ಘನ ಮೀಟರ್ ಮತ್ತು ಉಪಯುಕ್ತ ಸಂಗ್ರಹಣ ಸಾಮರ್ಥ್ಯ 18.08 ದಶಲಕ್ಷ ಘನ ಮೀಟರ್ 0.63 ಟಿಎಂಸಿ ಇರುತ್ತದೆ. ಇದರ ಒಟ್ಟು ಜಲಾವೃತ ಪ್ರದೇಶ 1031.00 ಕಿ.ಮೀ. ಇದ್ದು, ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.
ಈ ಜಲಾಶಯದ ನೀರು ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಗೆ ಸೀಮಿತಗೊಳ್ಳದೇ ಪಕ್ಕದ ಶಿರಾ ತಾಲೂಕಿನ ಹುಣಸೆಹಳ್ಳಿ, ಉಜ್ಜನಕುಂಟೆ, ಮೇಳೆ ಕೋಟೆ ಮತ್ತಿತರರ ಗ್ರಾಮದ ರೈತರ ಜಮೀನುಗಳಿಗೆ ಹರಿಯುತ್ತದೆ. ಜಲಾಶಯ ಒಮ್ಮೆ ಭರ್ತಿಯಾದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಆಗುತ್ತದೆ.
ಗಾರೆ ಮತ್ತು ಸಿಮೆಂಟ್ ಬಳಸಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಅಂದಿನ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ.ಕೆಂಚಪ್ಪ ಜಯಚಾಮರಾಜ ಒಡೆಯರ್ ಆಹ್ವಾನಿಸಿ ಜಲಾಶಯಕ್ಕೆ ಅಡಿಗಲ್ಲು ಹಾಕಿಸಿದ್ದರು. ಈ ಡ್ಯಾಂ ಅನ್ನು ಜಯಚಾಮರಾಜ ಒಡೆಯರ್ ಮನೆತನದ ಹೆಣ್ಣುಮಗಳಾದ ಗಾಯತ್ರಿದೇವಿ ನೆನೆಪಿಗಾಗಿ ನಿರ್ಮಾಣ ಮಾಡಿ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.
ಇನ್ನು ಗಾಯತ್ರಿ ಜಲಾಶಯವು 2017ರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಎರಡು ಬಾರಿ ಕೋಡಿ ಬಿದ್ದಿತ್ತು. ತದನಂತರ ಮಳೆ ಇಲ್ಲದ ಕಾರಣ ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರಲು ಸಾಧ್ಯವಾಗಲಿಲ್ಲ. ಡ್ಯಾಂನಲ್ಲಿ ನೀರು ಇಲ್ಲದೆ ದಿನ ಕಳೆದಂತೆ ಜಲಾಶಯ ಬತ್ತಿ ಹೋಗಿತ್ತು. ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ನಾಲ್ಕು ವರ್ಷಗಳ ನಂತರ 2021 ನವೆಂಬರ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಮೈದುಂಬಿ ಕೊಡಿ ಬಿದ್ದಿತು.
ಹಿರಿಯೂರು ತಾಲೂಕಿನ ಮತ್ತೊಂದು ಜಲಾಶವಾದ ವಾಣಿ ವಿಲಾಸ ಡ್ಯಾಂನಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಬೇಕು ಎಂಬುದು ಆ ಭಾಗದ ಜನರ ಒತ್ತಾಯವಾಗಿದೆ. ಕಲ್ಲುವಳ್ಳಿ ಭಾಗ ಎಂದೇ ಕರೆಯಲ್ಪಡುವ ಜವಗೊಂಡನಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದೆ. ಈ ಹಿನ್ನೆಲೆ ವಿವಿ ಸಾಗರ ಡ್ಯಾಂನಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಿ, ಹೋಬಳಿಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು ಕೊಡಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಲ್ಲದೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ ಮೂರು ತಿಂಗಳಿನಿಂದ ವಾಣಿ ವಿಲಾಸ ಸಾಗರ ಡ್ಯಾಂನಿಂದ ಗಾಯತ್ರಿ ಜಲಾಶಯ ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.












Click it and Unblock the Notifications