ಕೋಟೆ ನಾಡಿನಲ್ಲಿ ಗಂಧದ ಗುಡಿ ಸಂಭ್ರಮ: ಅಪ್ಪು ಕಟೌಟ್‌ಗೆ ಹಾಲಿನ ಅಭಿಷೇಕ
ಚಿತ್ರದುರ್ಗ, ಅಕ್ಟೋಬರ್ 28: ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಗಂಧದ ಗುಡಿ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಗಂಧದ ಗುಡಿ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಯ ಮೇಲೆ ಕಂಡ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.
ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಗಂಧದ ಗುಡಿ ಚಿತ್ರ ಇಂದು ತೆರೆಕಂಡಿದೆ. ಅಕಾಲಿಕವಾಗಿ ಅಗಲಿದ ನೆಚ್ಚಿನ ನಟನನ್ನು ಹೊಸ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳ ಭಾವುಕತೆಗೆ ಈ ದಿನ ಸಾಕ್ಷಿಯಾಗಿದೆ.

ರಾಜ್ಯದ ಮೂಲೆ ಮೂಲೆಯಲ್ಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಗಂಧದ ಗುಡಿಯನ್ನು ಸಂಭ್ರಮಿಸುತ್ತಿದ್ದಾರೆ. ಇತ್ತ ಕೋಟೆ ನಾಡು ಚಿತ್ರದುರ್ಗದ ಚಿತ್ರ ಮಂದಿರದಲ್ಲಿ ಗಂಧದ ಗುಡಿ ಬಿಡುಗಡೆ ಹಿನ್ನೆಲೆಯಲ್ಲಿ ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಮತ್ತೊಂದೆಡೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಗಂಧದ ಗುಡಿ ತೆರೆಕಂಡಿರುವುದು ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕಿನ ಚಿತ್ರಮಂದಿರಗಳನ್ನು ಹೂವಿನಿಂದ ಸಿಂಗರಿಸಲಾಗಿದ್ದು, ಇಂದು ಮುಂಜಾನೆಯಿಂದಲೇ ಅಪ್ಪು ಕಟೌಟ್ಗಳಿಗೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಅಲ್ಲದೇ ಅಭಿಮಾನಿಗಳು ಅಪ್ಪುವಿಗೆ ಜೈಕಾರ ಕೂಗಿ ಗಂಧದ ಗುಡಿ ಸಿನಿಮಾವನ್ನು ತಪ್ಪದೇ ವೀಕ್ಷಿಸುವಂತೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.

ಚಿತ್ರದುರ್ಗ ನಗರದ ಬಸವೇಶ್ವರ ಚಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಗೆ ಮೊದಲ ಶೋ ಪ್ರಾರಂಭವಾಗಿದೆ. ಎಲ್ಲ ಟಿಕೆಟ್ ಮಾರಾಟವಾಗಿದ್ದು, ಗಂಧದ ಗುಡಿ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಚಳ್ಳಕೆರೆ ನಗರದಲ್ಲಿ ಬೆಳಗ್ಗೆ 6.30 ಸುಮಾರಿಗೆ ಚಿತ್ರ ಆರಂಭವಾಯಿತು. ಇದಲ್ಲದೆ ಹೊಸದುರ್ಗ, ಹಿರಿಯೂರು ಸೇರಿದಂತೆ 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.












Click it and Unblock the Notifications