ಚಳ್ಳಕೆರೆ: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಹಾಗೂ ಸಹೋದರರಿಗೆ ಇ.ಡಿ ಶಾಕ್
K.C.Veerendra Puppy: ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರಿಗೆ ಇಂದು (ಆಗಸ್ಟ್ 22) ಬೆಳ್ಳಂಬೆಳಗ್ಗೆ ಇ.ಡಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಕೆಸಿ ವೀರೇಂದ್ರ ಹಾಗೂ ಅವರ ಸಹೋದರರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶುಕ್ರವಾರ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಮತ್ತು ಅವರ ಸಹೋದರರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ 4 ನಿವಾಸಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.

ಚಳ್ಳಕೆರೆ ಪಟ್ಟಣದಲ್ಲಿರುವ ಕೆ.ಸಿ.ವೀರೇಂದ್ರ ಪಪ್ಪಿ, ಕೆ.ಸಿ.ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ರಾಜರಾಜೇಶ್ವರಿನಗರದ ಕಾಂಗ್ರೆಸ್ ಮುಖಂಡರಾದ ಕುಸುಮಾ ಮನೆ ಮೇಲೆ ಇ.ಡಿ ದಾಳಿ ನಡೆಸಿದೆ. ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ಆರೋಪ ಹಿನ್ನೆಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದೆ.
ಇಂದು ರಾಜ್ಯದ ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ ಮತ್ತು ಗೋವಾ ಸೇರಿ 16 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರಿಗೆ ಸೇರಿದ ಚಿತ್ರದುರ್ಗ ಮತ್ತು ಬೆಂಗಳೂರಿನ ಪ್ರೆಸ್ಟೀಜ್ ಎಡ್ವರ್ಡಿಯನ್ ಅಪಾರ್ಟ್ಮೆಂಟ್ ಫ್ಲಾಟ್ ಸೇರಿದಂತೆ 4 ಮನೆಗಳ ಮೇಲೆ ನಡೆಸಿದೆ ಎಂದು ತಿಳಿದುಬಂದಿದೆ.
ಕೆ.ಸಿ.ವೀರೇಂದ್ರ ಪಪ್ಪಿ ಒಡೆತನದ ಕಂಪನಿಗಳಿಂದ ಗೇಮಿಂಗ್ ಆಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅವರ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ. ಆನ್‌ಲೈನ್ ಗೇಮಿಂಗ್ ವಿಚಾರದಲ್ಲಿ ಅವರ ವಿರುದ್ಧ 2 ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆ ಇಂದು ಇ.ಡಿ ದಾಳಿ ನಡೆಸಿದ್ದು, ವೀರೇಂದ್ರ ಪಪ್ಪಿ ಅವರ ಕಂಪನಿಗಳ ವ್ಯವಹಾರ ಸೇರಿದಂತೆ ಗೋವಾ ಉದ್ಯಮದ ಸಂಪೂರ್ಣ ವ್ಯವಹಾರದ ಬಗ್ಗೆಯೂ ಮಾಹಿತಿಗಳನ್ನು ಜಾಲಾಡುತ್ತಿದೆ.
ಈ ಹಿಂದೆಯೂ ಸಹ 2016ರಲ್ಲಿ ನಟ ದೊಡ್ಡಣ ಅವರ ಅಳಿಯ ಕೆ.ಸಿ.ವೀರೇಂದ್ರ ಪಪ್ಪಿ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಅವೆ ಮನೆಯ ಬಾತ್ ರೂಂನಲ್ಲಿ 5 ಕೋಟಿ ರೂಪಾಯಿಗೂ ಅಧಿಕ ಹಣ, 30 ಕೆಜಿಗೂ ಅಧಿಕ ಬಂಗಾರ ಪತ್ತೆಯಾಗಿತ್ತು. ಇದೀಗ ಇಂದು ಬೆಳ್ಳಂಬೆಳಗ್ಗೆಯೇ ಕೆ.ಸಿ.ವೀರೇಂದ್ರ ಪಪ್ಪಿ ಹಾಗೂ ಅವರ ಸೋಹೋದರರ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಎಂದು ತಿಳಿದುಬಂದಿದೆ.












Click it and Unblock the Notifications