ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು
ಚಿತ್ರದುರ್ಗ, ಆಗಸ್ಟ್ 13: ಬೆಳ್ಳಂ ಬೆಳಗ್ಗೆಯೇ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಕೋಟೆ ನಾಡು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 13ರ ಮಲ್ಲಾಪುರ ಗ್ರಾಮದ ಬಳಿ ನಡೆದಿದೆ.
ವೇಗವಾಗಿ ಬಂದ ಕಾರು, ನಿಯಂತ್ರಣ ಕಳೆದುಕೊಂಡು ಹಿಂದುಗಡೆಯಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು ಮೃತಪಟ್ಟವರನ್ನು ಖಾಸಗಿ ಬ್ಯಾಂಕ್ ನೌಕರ ಸಂಗನಬಸವ (36), ಪತ್ನಿ ರೇಖಾ(29), ಪುತ್ರ ಅಗಸ್ತ್ಯ(7), ಸಂಬಂಧಿ ಭೀಮಾಶಂಕರ್ (26) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತ ದಂಪತಿಯ ಮತ್ತೋರ್ವ ಪುತ್ರ ಆದರ್ಶ (3) ಹಾಗೂ ಪುತ್ರಿ ಅನ್ವಿಕಾ (5) ಮತ್ತು ಕಾರು ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದು, ನಸುಕಿನ ಜಾವ 3:30ಕ್ಕೆ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸರ್ಕಾರಿ ಬಸ್-ಕಾರಿನ ನಡುವೆ ಭೀಕರ ಅಪಘಾತ :ಇಬ್ಬರು ದಾರುಣ ಸಾವು
ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿ ತಾಯಿ ಮಗ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುದ್ರೆ ಮನೆ ಬಳಿ ನಡೆದಿದೆ.
ಅಪಘಾತದಲ್ಲಿ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಂಗಳೂರಿನ ಕೋಣನಕುಂಟೆ ಮೂಲದ ಪೂಜಾ ಹಿರೇಮಠ್, ರಾಜಶೇಖರ್ ಹಿರೇಮಠ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಶಿವಯಾಗಯ್ಯ ಹಿರೇಮಠ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮಸ್ಥಳದಿಂದ ಮೂಡಿಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಹಾಗೂ ಸಕಲೇಪುರದಿಂದ ಮೂಡಿಗೆರೆ ಕಡೆ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications