ಹಿರಿಯೂರು: ಶಾಸಕಿ ಕೆ.ಪೂರ್ಣಿಮಾ ಪತಿಯ ಉಚ್ಛಾಟನೆಯನ್ನು ವಾಪಸ್ ಪಡೆದ ಬಿಜೆಪಿ
ಚಿತ್ರದುರ್ಗ, ಮಾರ್ಚ್ 31: 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ವಿವಿಧ ರಾಜಕೀಯ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈ ಬಾರಿ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಿ ಅಧಿಕಾರ ನಡೆಸಬೇಕೆಂದಿರುವ ಬಿಜೆಪಿ ಯಾವ ಕ್ಷೇತ್ರವೂ ಕೈತಪ್ಪದಂತೆ ಎಚ್ಚರವಾಗಿ ಹೆಜ್ಜೆ ಇಡುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಈ ಬೆಳವಣಿಗೆಯ ನಡುವೆಯೇ 23 /10/ 2020 ರಂದು ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಪತಿಯನ್ನು ಬಿಜೆಪಿ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಬಿಜೆಪಿ ಪಕ್ಷ ಉಚ್ಛಾಟನೆಯ ಆದೇಶವನ್ನು ಹಿಂಪಡೆದಿದೆ.

ಈ ಬಗ್ಗೆ ಡಿ.ಟಿ ಶ್ರೀನಿವಾಸ್ ಬಿಜೆಪಿ ಪತ್ರ ಬರೆದಿದ್ದು, ' ತಮ್ಮ ವಿರುದ್ಧ ದಿನಾಂಕ 23/ 10 / 2020 ರಂದು ಶಿಸ್ತು ಕ್ರಮಕೈಗೊಂಡು ಪಕ್ಷ ಪಕ್ಷದಿಂದ ಉಚ್ಛಾಟನೆ ಗೊಳಿಸಲಾಗಿತ್ತು. ತಮ್ಮ ವಿವರಣೆ ನಡವಳಿಕೆ ಪಕ್ಷದ ಬಗ್ಗೆ ನೀವು ತೋರಿದ ಬದ್ಧತೆಯನ್ನು ಪರಿಗಣಿಸಿ ತಮ್ಮ ಅಮಾನತ್ತನ್ನು ಹಿಂಪಡೆದುಕೊಳ್ಳಲಾಗಿದೆ. ತಾವು ಪಕ್ಷ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಶಿಸ್ತಿನ ಸಿಪಾಯಿಯಂತೆ ಸಂಘಟನೆಯನ್ನು ಬಲಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರವೆಂದು ಆಶಿಸುತ್ತೇನೆ' ಎಂದು ಪತ್ರದಲ್ಲಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರಾದ ಲಿಂಗರಾಜ್ ಪಾಟೀಲ್ ತಿಳಿಸಿದ್ದಾರೆ.
2020ರಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಿ.ಟಿ ಶ್ರೀನಿವಾಸ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲುಕಂಡಿದ್ದರು. ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೆ, ಪಕ್ಷದ ವಿರುದ್ಧವಾಗಿ ನಡೆದುಕೊಂಡರು ಎಂದು ಪಕ್ಷದಿಂದ ಅಮಾನತು ಮಾಡಿದ್ದರು. ಆದರೂ ಧೃತಿಗೆಡದ ಡಿಟಿ ಶ್ರೀನಿವಾಸ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ವಲ್ಪ ಮತಗಳಿಂದ ಸೋಲುಂಡಿದ್ದರು.

ಪಕ್ಷದಿಂದ ಉಚ್ಛಾಟನೆಯಾದೂ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಜೊತೆ ನಿಂತುಕೊಂಡು ಐದು ವರ್ಷ ಆಡಳಿತ ನಡೆಸಲು ಸಹಕಾರಿಯಾಗಿದರು. ತೆರೆಮರೆಯಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಗೊಳಿಸುತಿದ್ದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಚುನಾವಣೆಯಲ್ಲಿ ಮತ್ತೆ ಪತ್ನಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ದೃಷ್ಟಿಯಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಉಚ್ಛಾಟನೆಯ ಆದೇಶವನ್ನು ಹಿಂಪಡೆದಿದೆ ಎನ್ನಬಹುದು.
ಹಿರಿಯೂರಿನಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಮೊದಲ ಮಹಿಳಾ ಶಾಸಕಿಯಾಗಿ ಪೂರ್ಣಿಮಾ ಶ್ರೀನಿವಾಸ್ ಅವರು ಆಯ್ಕೆಯಾಗಿದ್ದರು. ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲಂತಹ ಸಂದರ್ಭದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರೀನಿವಾಸ್ ಸಾಕಷ್ಟು ಪ್ರಯತ್ನಿಸಿ, ಯಶಸ್ವಿಗೊಳಿಸಿದ್ದರು.
ಈ ಬಾರಿ ಕರ್ನಾಟಕ ವಿಧಾಸಭಾ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದ ಡಿಟಿ ಶ್ರೀನಿವಾಸ್ ಅವರು ಕೊನೆಗಳಿಯಲ್ಲಿ ನಿರ್ಧಾರ ಬದಲಿಸಿ, "ಮತ್ತೊಮ್ಮೆ ಅಕ್ಕ" ಎಂಬ ಟ್ಯಾಗ್ ಲೈನ್ ಮೂಲಕ ಪತ್ನಿಯನ್ನು ಗೆಲ್ಲಿಸಲು ಚುನಾವಣಾ ಅಖಾಡದ ಪ್ರಚಾರದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರಾ ಪೂರ್ಣಿಮಾ ಶ್ರೀನಿವಾಸ್?
2023ರ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇದ್ದು ಚುನಾವಣೆಯ ಕಾವು ರಂಗೇರುತ್ತಿದೆ. ಕೋಟೆ ನೋಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಲಿದ್ದಾರೆ. ಕೆ ಪೂರ್ಣಿಮಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಜೆಪಿ ನಾಯಕರು ಕೆ. ಪೂರ್ಣಿಮಾ ಶ್ರೀನಿವಾಸ್ ನಮ್ಮ ಪಕ್ಷದ ಜೊತೆಗಿದ್ದಾರೆ ಎಂದು ತಿಳಿಸಿದ್ದರು.












Click it and Unblock the Notifications