ಮೊಳಕಾಲ್ಮೂರು ಬಿಟ್ಟು ಬಳ್ಳಾರಿಯಿಂದ ಸ್ಪರ್ಧಿಸುವೆ: ಸಚಿವ ಬಿ. ಶ್ರೀರಾಮುಲು ಹೀಗೆ ಹೇಳಿದ್ದೇಕೆ?, ಇಲ್ಲಿದೆ ನೋಡಿ ವಿವರ
ವಿಧಾನಸಭೆ ಚುನವಣೆ ಸಮೀಪಿಸುತ್ತಲೇ ಇದ್ದು, ಸಚಿವ ಬಿ. ಶ್ರೀ ರಾಮುಲು ಈ ಬಾರಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಕುತೂಹಲಕಾರಿ ಹೇಳಿಕೆಯನ್ನು ನೀಡಿದ್ದಾರೆ
ಚಿತ್ರದುರ್ಗ, ಫೆಬ್ರವರಿ, 12: ಚುನಾವಣೆ ಸಮೀಪಿಸುತ್ತಿರುವ ಬೆನ್ನೆಲೆ ರಾಜಕೀಯ ನಾಯಕರು ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಮತ್ತೊಂದು ಕಡೆ ವಿವಿಧ ಪಕ್ಷಗಳ ಮುಖಂಡರು ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಪ್ಲಾನ್ ಮಾಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಬಿ. ಶ್ರೀರಾಮುಲು ಅವರು ಬಳ್ಳಾರಿಯಿಂದ ಸ್ಪರ್ಧಿಸುವೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಮೊಳಕಾಲ್ಮೂರು ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸ್ಪರ್ಧಿಸಿದ ಶ್ರೀರಾಮುಲು, ಈ ಬಾರಿ ಸೋಲಿನ ಭೀತಿ ಎದುರಾಗಿದೆ. ಹಾಗಾಗಿ ಬಳ್ಳಾರಿ ಕಡೆ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ನಾಯಕರ ಒತ್ತಡದ ಮೇರೆಗೆ ಬಾದಾಮಿ ಹಾಗೂ ಮೊಳಕಾಲ್ಮೂರು ಎರಡು ಕ್ಷೇತ್ರದಿಂದ ಸ್ಪರ್ಧಿಸಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಬಾದಾಮಿಯಲ್ಲಿ ಸೋಲು ಕಂಡಿದ್ದರು.
ಬಳ್ಳಾರಿಯಿಂದ ಸ್ಪರ್ಧಿಸುವೆ
ಈ ಬಾರಿ ಮೊಳಕಾಲ್ಮೂರಿನಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿದ್ದ ಶ್ರೀರಾಮುಲು, ಇದೀಗ ಬಳ್ಳಾರಿಯಿಂದ ಸ್ಪರ್ಧಿಸುವೆ ಎಂದು ತಿಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೊಳಕಾಲ್ಮೂರಿನಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿ, ಅಭಿಮಾನಿಗಳು ಇಲ್ಲಿಯೇ ಸ್ಪರ್ಧಿಸಬೇಕು ಎಂದು ಹೇಳುತ್ತಿದ್ದಾರೆ, ಒತ್ತಡವೂ ಇದೆ. ಆದರೆ ನನಗೆ ಓಡಾಡಲು ದೂರ ಆಗುತ್ತದೆ ಎನ್ನುವ ಕಾರಣಕ್ಕೆ ಬಳ್ಳಾರಿಯಲ್ಲಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ನಾನು ಸಾಕಷ್ಟು ಅಭಿವೃದ್ದಿಯನ್ನು ಮಾಡಿದ್ದು, ಇಲ್ಲಿ ಗ್ರಾಮೀಣ ಭಾಗಗಳು ದೂರ ದೂರವಿದೆ. ಅಲ್ಲಿಗೆ ನನ್ನಿಂದ ಹೋಗಲು ಸಾಧ್ಯವಿಲ್ಲ. ಸ್ಥಳೀಯರಿಗೆ ನಾನು ಅವಕಾಶ ಮಾಡಿಕೊಡಬೇಕು. ಆದ್ದರಿಂದ ನಾನು ಈ ಬಾರಿ ಬಳ್ಳಾರಿಗೆ ಹೋಗುತ್ತಿದ್ದೇನೆ. ನಂತರ ಅಲ್ಲಿ ಯಾವ ಕ್ಷೇತ್ರ ಎಂದು ಖಚಿತವಾಗಿ ಹೇಳುತ್ತೇನೆ ಎಂದರು. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಿಖರವಾಗಿ ತಿಳಿಸಿಲ್ಲ. ಆದರೆ ಮೂಲಗಳ ಪ್ರಕಾರ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications