ಸಿದ್ದರಾಮಯ್ಯ ನಾಡಿನ ದೊರೆ, ಅನಂತ್ ಕುಮಾರ್ ಹೆಗ್ಡೆಯೊಬ್ಬ ಹುಚ್ಚ: ಹೀಗೆ ಹೇಳಿದ್ದು ಯಾರಿಗೆ ಮತ್ತು ಯಾಕೆ?-ಮಾಹಿತಿ ತಿಳಿಯಿರಿ
ಚಿತ್ರದುರ್ಗ, ಜನವರಿ, 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಅವನೊಬ್ಬ ಹುಚ್ಚ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಚಿತ್ರದುರ್ಗದಲ್ಲಿ ಕಿಡಿಕಾರಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮಾಜಿ ಸಚಿವರು ಹುಚ್ಚರ ಬಗ್ಗೆ ಯಾರಾದರೂ ಮಾತನಾಡುತ್ತಾರಾ ಎಂದು ಪ್ರಶ್ನಿಸಿ, ಹುಚ್ಚನಂತೆ ರೀತಿಯಲ್ಲಿ ವರ್ತನೆ ಮಾಡುತ್ತಾನೆ. ನಾವು ಆ ರೀತಿ ಅಲ್ಲ, ನಾನು ಸಹ ಏಕವಚನ ಬಳಸಬಾರದು. ಆದರೆ ಅವನಿಗೆ ಯಾವ ಭಾಷೆ ಬಳಸಿದರೂ ಕೂಡ ಸಾಲದು ಎಂದು ಆಕ್ರೋಶ ಹೊರಹಾಕಿದರು.

ನಮ್ಮ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಮರಾಜ್ಯದ ಕನಸು ಅನಾವರಣ ಮಾಡಿ ಕಾರ್ಯರೂಪಕ್ಕೆ ತಂದವರು. ಜನ ಮೆಚ್ಚಿದ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತಾಡ್ತಾನಲ್ಲ, ಅವನು ಮನುಷ್ಯನಾ ಎಂದು ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದರು.
ಮುನಿಸ್ವಾಮಿ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಸರ್ಕಾರ ಹಿಂಧೂ ಧರ್ಮ, ಶ್ರೀರಾಮನ ವಿರೋಧಿ ಎಂಬ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಹಳಷ್ಟು ಜನ ಹಿಂದೂಗಳಿರುವುದೇ ಕಾಂಗ್ರೆಸ್ ಪಕ್ಷದಲ್ಲಿ. ಹಿಂದೂ ಧರ್ಮ, ರಾಮನ ಪೂಜೆ ಮಾಡುವವರು ಹೆಚ್ಚಿರುವುದು ಕಾಂಗ್ರೆಸ್ ಪಕ್ಷದಲ್ಲಿ. ರಾಮನ ಹೆಸರಿನಲ್ಲಿ ಮತಕ್ಕಾಗಿ ಮಾರ್ಕೆಂಟಿಂಗ್ ಮಾಡುವವರು ಕಾಂಗ್ರೆಸ್ಸಿಗರಲ್ಲ ಎಂದರು.
ಕೋಟ್ಯಾಂತರ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮನಿದ್ದಾನೆ. ಆಂಜನೇಯನ ಹೃದಯದಲ್ಲಿ ರಾಮನಿದ್ದಂತೆ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮ. ನಾವು ರಾಮನ ವಿರೋಧಿ ಅಲ್ಲ, ಹಿಂದೂಗಳ ವಿರೋಧಿ ಅಲ್ಲ. ಹಿಂದೂಗಳ ಪರ, ಮುಸ್ಲಿಂರ ಪರ ಎಲ್ಲಾ ಧರ್ಮಗಳ ಜನರ ಪರವಿದ್ದೇವೆ ಎಂದು ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ.
ಪ್ರದೀಪ್ ಈಶ್ವರ್ ಆಕ್ರೋಶ: ಇನ್ನು ನಮ್ಮ ಎದೆ ಬಗೆದರೆ ಶ್ರೀರಾಮನೂ ಕಾಣ್ತಾನೆ, ಸಿದ್ದರಾಮಯ್ಯನೂ ಕಾಣ್ತಾರೆ, ಅಂಬೇಡ್ಕರ್ ಕೂಡ ಕಾಣ್ತಾರೆ, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ನಾಲಿಗೆ ಹಿಡಿತದಲ್ಲಿ ಇರಲಿ. ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಆಸ್ತಿ ಅಲ್ಲ. ನಮ್ಮ ಎದೆ ಬಗೆದರೆ ರಾಮನೂ ಇದ್ದಾನೆ, ಸಿದ್ದರಾಮಯ್ಯ, ದೇವರಾಜ್ ಅರಸ್ ಕೂಡ ಇದ್ದಾರೆ. ನಮ್ಮ ಎದೆಯಲ್ಲಿ ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳು ಕೂಡ ಇದ್ದಾರೆ. ನಿನ್ನ ರಕ್ತದಲ್ಲಿ ಮಾತ್ರ ಹಿಂದೂ ಇರೋದಾ, ನಿಮ್ಮ ಅಪ್ಪನ ಮನೆ ಆಸ್ತಿ ಥರಾ ಆಡೋದನ್ನ ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.
ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯಿಂದ ಲಾ ಆಂಡ್ ಆರ್ಡರ್ ಸಮಸ್ಯೆಯಾದರೆ ಹೊಣೆ ಯಾರು?. ಪ್ರಚೋದನೆಯಿಂದ ಏನಾದರೂ ಹೆಚ್ಚು ಕಡಿಮೆ ಆದರೆ ಹೆಗ್ಡೆ ಬರುತ್ತಾರಾ?. ಸಂಸದರ ಮೇಲೆ ಎಫ್‍ಐಆರ್ ಹಾಕಿ, ಒಳಗೆ ಹಾಕಬೇಕು. ಇವರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅನಂತ್ ಕುಮಾರ್ ಹೆಗ್ಡೆ ಮೈಂಡ್ ಯುವರ್ ಟಂಗ್ ಎಂದು ಗರಂ ಆದ ಶಾಸಕರು, ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಸ್ವತ್ತಾ?, ಹಿಂದೂ ಧರ್ಮನ ನಿಮ್ಮ ಅಪ್ಪನ ಮನೆ ಆಸ್ತಿ ತರಹ ಆಡ್ತಿದ್ದೀರಲ್ಲ?, ನಾಲಿಗೆ ಕಂಟ್ರೋಲ್ ನಲ್ಲಿ ಇಟ್ಕೊಳ್ಳಿ ಹೆಗ್ಡೆಯವರೇ. ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಅನ್ನೋದು ಗೊತ್ತಾಗಿದೆ. ಇವರ ಬಾಯಿ ಚಪಲದಿಂದ ಹಿಂದೆ ಮಂತ್ರಿಗಿರಿ ಕಳೆದುಕೊಂಡರು. ಬಾಯಿಗೆ ಬಂದಂತೆ ಮಾತಾಡುತ್ತಿದ್ದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ ಎಂದು ಪ್ರಶ್ನಿಸಿದರು.












Click it and Unblock the Notifications