ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ, 15 ಜನರಿಗೆ ಗಾಯ
ಚಿಕ್ಕಮಗಳೂರು, ಅಕ್ಟೋಬರ್, 16: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಟಿಟಿ ವಾಹನ ರಸ್ತೆ ಮಧ್ಯೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗೂಲ್ ಬಳಿ ನಡೆದಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದ ಬಳಿಕ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆಂದು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಟಿಟಿ ವಾಹನದಲ್ಲಿ ಸುಮಾರು 15 ಜನ ಪ್ರಯಾಣಿಕರಿದ್ದು ಕೆಲವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿ ವಾಹನ ಮೂಲತಃ ಕಾರವಾರ ಜಿಲ್ಲೆಯ ಶಿರಸಿ ಮೂಲದ್ದಾಗಿದೆ ಎಂದು ತಿಳಿದುಬಂದಿದೆ.

ರಸ್ತೆ ಮಧ್ಯೆ ಪಲ್ಟಿಯಾದ ಟಿಟಿ ವಾಹನ ಸುಮಾರು 50 ಅಡಿಯಷ್ಟು ದೂರ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದೆ. ವಾಹನ ಚಾಲಕ ಅತಿಯಾದ ವೇಗವಾಗಿ ಇದ್ದ ಕಾರಣದಿಂದಲೇ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಂತಹ ದುರ್ಘಟನೆ ಸಂಭವಿಸಿಲ್ಲ. ವಾಹನ ಪಟ್ಟಿಯಾದ ಕೂಡಲೇ ಸ್ಥಳೀಯರು ಗಾಡಿಯಲ್ಲಿದ್ದವರನ್ನು ಹೊರ ತಂದು ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲವರನ್ನು ಕೂಡಲೇ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಸಾರಿಗೆ ಬಸ್
ಮತ್ತೊಂದೆಡೆ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ (KSRTC) ಬಸ್ ಮನೆಗೆ ನುಗ್ಗಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಆಗುಂದ ಗ್ರಾಮದಲ್ಲಿ ನಡೆದಿದೆ.
ಅರಸೀಕೆರೆಯಿಂದ ಹುಳಿಯಾರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಆಗುಂದ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ್ದು, ಈ ವೇಳೆ ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಭಾರೀ ಅನಾಹುತ ತಪ್ಪಿದೆ. ಸದ್ಯ ಅರಸೀಕೆಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ಮಾಹಿತಿ ಎಂದು ತಿಳಿದುಬಂದಿದೆ.












Click it and Unblock the Notifications