Sringeri Bandh: ಶನಿವಾರ ಶೃಂಗೇರಿ ಬಂದ್, ದೇವಾಲಯಕ್ಕೆ ಹೋಗುವ ಭಕ್ತರೇ ಗಮನಿಸಿ
ಚಿಕ್ಕಮಗಳೂರು, ಆಗಸ್ಟ್ 16: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಆಗಸ್ಟ್ 17ರ ಶನಿವಾರ ಬಂದ್ ನಡೆಯಲಿದ್ದು, ಶೃಂಗೇರಿ, ಕೊಪ್ಪ, ಎನ್. ಆರ್. ಪುರ ತಾಲೂಕು ಕೇಂದ್ರ, ಖಾಂಡ್ಯ ಸೇರಿ ಎಲ್ಲಾ ಹೋಬಳಿ ಕೇಂದ್ರಗಳ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಶೃಂಗೇರಿ ದೇವಾಲಯಕ್ಕೆ ತೆರಳುವ ಭಕ್ತರು ಶನಿವಾರ ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಪ್ರಯಾಣ ಬೆಳೆಸಿ.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ 'ಶೃಂಗೇರಿ ಕ್ಷೇತ್ರ ಬಂದ್'ಗೆ ಕರೆ ನೀಡಿದೆ. ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಬಂದ್‌ಗೆ ಬೆಂಬಲ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ. ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆ ಬಂದ್ ಆಗಲಿದೆ ಎಂದು ಪ್ರಕಟಣೆ ಹೇಳಿದೆ.

ಯಾವ-ಯಾವ ಸೇವೆ ಲಭ್ಯ?; ಆಗಸ್ಟ್ 17ರ ಶೃಂಗೇರಿ ಕ್ಷೇತ್ರ ಬಂದ್ ವೇಳೆ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಪೇಪರ್, ಹಾಲು, ಅಂಬ್ಯುಲೆನ್ಸ್, ಅಂಚೆ ಕಛೇರಿ, ಎಟಿಎಂ ಕಾರ್ಯ ನಿರ್ವಹಣೆ ಮಾಡಲಿವೆ. ಸಾರಿಗೆ ಸೇವೆ ಸಂಪೂರ್ಣ ಬಂದ್ ಆಗಲಿದ್ದು, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತವಾಗುವ ನಿರೀಕ್ಷೆ ಇದೆ.
ಅಂಗಡಿ, ಬಸ್, ಶಾಲಾ-ಕಾಲೇಜು, ಖಾಸಗಿ ಶಾಲೆಗಳು, ವೈನ್ಸ್ & ಬಾರ್ ಮತ್ತು ರೆಸ್ಟೋರೆಂಟ್, ಆಟೋ & ಟ್ಯಾಕ್ಸಿ, ಲಾರಿ & ಟೆಂಪೋ, ಗೂಡ್ಸ್ ವಾಹನ, ಹೋಟೆಲ್, ಚಿತ್ರಮಂದಿರ, ಜಿಮ್, ಲಾಡ್ಜ್, ಬೀದಿ ಬದಿ ವ್ಯಾಪಾರ, ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ ಎಂದು ತಿಳಿಸಲಾಗಿದೆ.
ಸಾಲು ಸಾಲು ರಜೆ, ಶ್ರಾವಣ ಶನಿವಾರದ ದಿನ ಶೃಂಗೇರಿ ಶ್ರೀ ಶಾರದಾಂಬೆ ದೇವಾಲಯಕ್ಕೆ ಹೋಗುವ ಭಕ್ತರು ಸ್ಥಳೀಯ ಪರಿಸ್ಥಿತಿಯನ್ನು ತಿಳಿದು ಪ್ರಯಾಣ ಮಾಡಿ. ಬಸ್, ಟ್ಯಾಕ್ಸಿ, ಹೋಟೆಲ್ ಸೇವೆಗಳು ಬಂದ್ ಆದರೆ, ಅಲ್ಲಿ ಪರದಾಡಬೇಕಾದೀತು.
ಶೃಂಗೇರಿ ಬಂದ್ ಏಕೆ?; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅರಣ್ಯ ಇಲಾಖೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಇದನ್ನು ಖಂಡಿಸಿ ಮಲೆನಾಡು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ 'ಶೃಂಗೇರಿ ಕ್ಷೇತ್ರ ಬಂದ್'ಗೆ ಕರೆ ನೀಡಿದೆ. ಶೃಂಗೇರಿ ಮಾತ್ರವಲ್ಲ ಕೊಪ್ಪ, ಎನ್. ಆರ್. ಪುರ ತಾಲೂಕು ಕೇಂದ್ರ, ಖಾಂಡ್ಯ ಸೇರಿ ಎಲ್ಲಾ ಹೋಬಳಿ ಕೇಂದ್ರಗಳನ್ನು ಬಂದ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಮೂರು ತಾಲೂಕು ಕೇಂದ್ರ, ಎಲ್ಲಾ ಹೋಬಳಿಗಳ ಸಾವಿರಾರು ಜನರು ಶನಿವಾರ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಲಿದ್ದಾರೆ. ರೈತರು ಎಷ್ಟು ಮನವಿ ಮಾಡಿದರೂ ಸಹ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿರುವ ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶವನ್ನು ಹೊರಹಾಕಲಿದ್ದಾರೆ.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿರುವ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ಮಲೆನಾಡು ಭಾಗದಲ್ಲಿ ಖಾಸಗಿ ಬಸ್‌ಗಳೇ ಅಧಿಕವಾಗಿದ್ದು, ಬಂದ್ ಹಿನ್ನಲೆಯಲ್ಲಿ ಶೃಂಗೇರಿ, ಕೊಪ್ಪ ಸೇರಿ ವಿವಿಧ ಪಟ್ಟಣಗಳಿಗೆ ಶನಿವಾರ ಖಾಸಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಅರಣ್ಯ ಭೂಮಿ ಒತ್ತುವರಿ ತೆರವು ಖಂಡಿಸಿ ಕೊಪ್ಪಳದಲ್ಲಿ ಬೆಳಗ್ಗೆ 10 ಗಂಟೆ ಬೃಹತ್ ಪ್ರತಿಭಟನೆ ನಡೆಯಲಿದೆ. ಶೃಂಗೇರಿಯಲ್ಲಿಯೂ ಸಾವಿರಾರು ಜನರು ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ನಿರೀಕ್ಷೆ ಇದೆ. ಮಲೆನಾಡಿನ ಜನರ ಮೇಲೆ ಸರ್ಕಾರ ದರ್ಪ ತೋರಿಸುತ್ತಿದೆ. ಅನಾದಿ ಕಾಲದಿಂದ ಬದುಕು ಕಟ್ಟಿಕೊಂಡ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.












Click it and Unblock the Notifications